ಸುಸ್ಥಿರ ಆರೋಗ್ಯಕ್ಕಾಗಿ ನಿಯಮಿತ ತಪಾಸಣೆ ಅಗತ್ಯ: ಸುಮಿತ್ರಾ ನಾಯಕ್

udp-27-ayushmathi
Published on

ಉಡುಪಿ: ಮಹಿಳೆಯರು ಆರೋಗ್ಯದ ಸಮಸ್ಯೆಗಳ ಬಗ್ಗೆ ಸಕಾಲದಲ್ಲಿ ಸೂಕ್ತ ತಪಾಸಣೆ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಆಕೆಯ ಕುಟುಂಬ ಮೇಲೆ ಸಹ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಮಹಿಳೆಯರು ಸುಸ್ಥಿರ ಆರೋಗ್ಯವಂತರಾಗಿರಲು ಆಯುಷ್ಮತಿ ಕ್ಲಿನಿಕ್‌ಗಳು ಸಹಕಾರಿಯಾಗಲಿವೆ ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಹೇಳಿದರು.

ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ ಸಹಯೋಗದಲ್ಲಿ ಅಲಂಕಾರ್ ಚಿತ್ರಮಂದಿರದ ಬಳಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರಂಭಿಸಿರುವ ಆಯುಷ್ಮತಿ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಮತ್ತು ಹದಿಹರೆಯದ ಹೆಣ್ಣು ಮಕ್ಕಳು ಹಲವು ಆರೋಗ್ಯ ಸಮಸ್ಯೆಗಳ ಬಗ್ಗೆ ಒಂದೇ ಕಡೆಯಲ್ಲಿ ಪರೀಕ್ಷಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಸಕಾಲದಲ್ಲಿ ಚಿಕಿತ್ಸೆ ಲಭ್ಯವಿಲ್ಲದೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ಆಯುಷ್ಮತಿ ಕೇಂದ್ರ. ಹೆಣ್ಣು ಮಕ್ಕಳು ಈ ಕ್ಲಿನಿಕ್‌ನಲ್ಲಿ ಆರೋಗ್ಯ ಸಮಸ್ಯೆಗಳಿಗೆ ಉಚಿತವಾಗಿ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಮಾತನಾಡಿ, ಆಯುಷ್ಮತಿ ಕ್ಲಿನಿಕ್‌ನಲ್ಲಿ, ಮಹಿಳೆಯರು ಮತ್ತು ಹದಿಹರೆಯದ ಹೆಣ್ಣು ಮಕ್ಕಳಿಗಾಗಿ ಪ್ರತೀ ದಿನ ಒಬ್ಬ ತಜ್ಞ ವೈದ್ಯರ ಸೇವೆ ಲಭ್ಯವಿದ್ದು, ಈ ಕ್ಲಿನಿಕ್‌ನಲ್ಲಿ ಲ್ಯಾಬ್ ಪರೀಕ್ಷೆಗಳ ಸೇವೆ, ವಿವಿಧ ಆರೋಗ್ಯ ಸಮಸ್ಯೆಗಳ ಬಗ್ಗೆ ಆಪ್ತ ಸಮಾಲೋಚನೆ ಮತ್ತು ಉಚಿತ ಔಷಧಿ ಸಹ ದೊರೆಯಲಿದೆ ಎಂದರು.

ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಲತಾ ನಾಯಕ್, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಎಂ.ಜಿ.ರಾಮ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮರಾವ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net