

ಉಡುಪಿ: ರಾಷ್ಟೀಯ ಹೆದ್ದಾರಿ 66ರಲ್ಲಿ ಅಪಾಯಕಾರಿ ಗುಂಡಿಗಳನ್ನು ತಕ್ಷಣ ಸರಿಪಡಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಸಂತೆಕಟ್ಟೆ ಅಂಡರ್ ಪಾಸ್, ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಶ್ರೀದಲ್ಲಿ ಪೂರ್ಣಗೊಳಿಸಬೇಕು ಎಂದು ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.
ನಗರಸಭೆ ಕಚೇರಿಯಲ್ಲಿ ಮೆಸ್ಕಾಂ, ಲೋಕೋಪಯೋಗಿ ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿತ ಸಮಸ್ಯೆಗಳ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯ ವಿವಿಧೆಡೆ ಈಗಾಗಲೇ ಸರ್ವೀಸ್ ರಸ್ತೆಗಳು ಮಂಜೂರಾಗಿದ್ದು, ಕಾಮಗಾರಿ ತಕ್ಷಣ ಪ್ರಾರಂಭಿಸಬೇಕು. ರಾ.ಹೆ. 169ಎ ಕೆಳ ಪರ್ಕಳ ರಸ್ತೆ ಕಾಂಕ್ರೀಟಿಕರಣ, ಇಂದ್ರಾಳಿ ರೈಲ್ವೇ ಬ್ರಿಡ್ಜ್, ಮಲ್ಪೆ ಆದಿ ಉಡುಪಿ ಕಾಮಗಾರಿ ಆದ್ಯತೆ ಮೇರೆಗೆ ನಡೆಸಲು ತಿಳಿಸಿದರು.
ಮಳೆ ಗಾಳಿ ಸಂದರ್ಭದಲ್ಲಿ ವಿದ್ಯುತ್ ಶೀಘ್ರ ಮರು ಸಂಪರ್ಕಕ್ಕೆ ಹಾಗೂ ಹೊಸ ಟ್ರಾನ್ಸ್ ಫಾರ್ಮರ್ ಅಳವಡಿಕೆ ಮೆಸ್ಕಾಂ ಆದ್ಯತೆ ನೀಡಬೇಕು. ತುರ್ತು ಸಂದರ್ಭದಲ್ಲಿ ಅಗತ್ಯ ಸಿಬ್ಬಂದಿ ನಿಯೋಜನೆಗೆ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ನಗರಸಭಾ ವ್ಯಾಪ್ತಿಯ ವಾರಾಹಿ ಯೋಜನೆಯ ಮೂಲಕ ಒಪ್ಪಂದದಂತೆ ಎಲ್ಲಾ ವಾರ್ಡ್ಗಳಿಗೆ 24 ಗಂಟೆ ನಿರಂತರ ಕುಡಿಯುವ ನೀರು ಸರಬರಾಜಿಗೆ ಕ್ರಮ ವಹಿಸಬೇಕು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮೂಲಕ ಹೆರ್ಗ ಗ್ರಾಮದ ಬಬ್ಬುಸ್ವಾಮಿ ಲೇಔಟ್ ನಲ್ಲಿ ನಿರ್ಮಿಸಿರುವ ನೂತನ ವಸತಿ ಸಮುಚ್ಛಯದ ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆ, ಚರಂಡಿ, ದಾರಿದೀಪ ಸಹಿತ ಮೂಲ ಸೌಕರ್ಯ ಅಭಿವೃದ್ಧಿಯ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯೆ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ, ಪೌರಾಯುಕ್ತ ಮಹಾಂತೇಶ್ ಹಂಗರಗಿ ಉಪಸ್ಥಿತರಿದ್ದರು.