

ಮಂಡ್ಯ: ಸಾರ್ವಜನಿಕರಿಗೆ ಕಟ್ಟಡ ನಿರ್ಮಾಣ ಲೈಸೆನ್ಸ್ ನೀಡುವಲ್ಲಿ ಮುಡಾ ತಕರಾರು ಮಾಡುತ್ತಿದೆ. ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಕಳುಹಿಸಿದರೂ ಇಲ್ಲದ ಷರತ್ತುಗಳನ್ನು ವಿಧಿಸಿ ಅನಗತ್ಯವಾಗಿ ವಿಳಂಬ ಮಾಡುತ್ತಿದೆ ಎಂದು ನಗರಸಭೆ ಸದಸ್ಯರು ಗಂಭೀರ ಆರೋಪ ಮಾಡಿದರು.
ನಗರಸಭೆ ಧರಣಪ್ಪ ಸಭಾಂಗಣದಲ್ಲಿ ಅಧ್ಯಕ್ಷ ಎಚ್.ಎಸ್.ಮಂಜು ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯಸಭೆಯಲ್ಲಿ ಲೈಸನ್ಸ್ ವಿಚಾರದ ಚರ್ಚೆ ನಡೆಯಿತು. ಕಂದಾಯಕ್ಕೆ ಸಂಬಂಧಿಸಿದ ದಾಖಲೆಗಳೆಲ್ಲವನ್ನೂ ನಗರಸಭೆಯಿಂದ ಪರಿಶೀಲಿಸಿ ತಾಂತ್ರಿಕ ಪರಿಶೀಲನೆಗಷ್ಟೇ ಮುಡಾಗೆ ಕಳುಹಿಸಲಾಗುತ್ತದೆ. ಆದರೂ ತಾಂತ್ರಿಕ ಪರಿಶೀಲನೆ ಮಾಡದೆ ಕೊಟ್ಟ ದಾಖಲೆಗಳನ್ನೇ ಮತ್ತೊಮ್ಮೆ ಪರಿಶೀಲಿಸುವಂತೆ ವಾಪಸ್ ಕಳುಹಿಸುವುದು. ಅಧಿಕಾರ ಮೀರಿ ಷರತ್ತುಗಳನ್ನು ವಿಧಿಸುವುದು ಸರಿಯೇ ಎಂದು ಮುಡಾ ಯೋಜನಾಧಿಕಾರಿಯನ್ನು ಪ್ರಶ್ನಿಸಿದರು.
ಸಾರ್ವಜನಿಕರು ಅರ್ಜಿ ಸಲ್ಲಿಸಿದ ಬಳಿಕ 15 ದಿನಗಳೊಳಗೆ ಕಟ್ಟಡ ಲೈಸೆನ್ಸ್ ನೀಡಬೇಕು. ನೀವು ಕಡತವನ್ನು ವಿನಾಕಾರಣ ವಾಪಸ್ ಕಳುಹಿಸಿದರೆ ಲೈಸೆನ್ಸ್ ಸಿಗಲು ಹೇಗೆ ಸಾಧ್ಯ. ನಿಮಗೆ ಷರತ್ತುಗಳನ್ನು ಹಾಕುವ ಅಧಿಕಾರವಿದೆಯೇ ಎಂದು ನೇರವಾಗಿಯೇ ಕೇಳಿದರು. ಸದಸ್ಯರಾದ ಮಹದೇವು, ರಾಮಲಿಂಗು ಮಾತನಾಡಿ, ನಗರದಲ್ಲಿ ಲೈಸೆನ್ಸ್ ಇಲ್ಲದೆ ಕಟ್ಟಡಗಳು ತಲೆಎತ್ತುತ್ತಿರುವುದಕ್ಕೆ ಮುಡಾ ಅಧಿಕಾರಿಗಳೇ ಕಾರಣ. 60 ವರ್ಷದ ಹಿಂದಿನ ದಾಖಲೆಗಳನ್ನು ಕೇಳಿದರೆ ಅವರು ಎಲ್ಲಿಂದ ತರಲು ಸಾಧ್ಯ ಎಂದು ಕೇಳಿದರು.
ಸದಸ್ಯರಾದ ನಾಗೇಶ್ ಮತ್ತು ಎಂ.ಪಿ.ಅರುಣ್‌ಕುಮಾರ್, ಇವರೊಂದಿಗೆ ಮಾತನಾಡುವುದರಿಂದ ಏನೂ ಪ್ರಯೋಜನವಿಲ್ಲ. ಆಯುಕ್ತರೊಂದಿಗೆ ಈ ವಿಚಾರವಾಗಿ ಚರ್ಚಿಸಬೇಕಿದೆ. ಅವರು ಸಭೆಗಳಿಗೇ ಬರುವುದಿಲ್ಲ. ಮುಂದೆ ಅವರನ್ನೂ ಸಭೆಗೆ ಹಾಜರಾಗುವಂತೆ ತಿಳಿಸಬೇಕು ಎಂದು ತಿಳಿಸಿದರು.
ಸದಸ್ಯರಾದ ನಾಗೇಶ್, ಶ್ರೀಧರ್ ಮತ್ತು ಸೌಭಾಗ್ಯಮ್ಮ ಅವರು ಸರ್ಕಾರಿ ಸುತ್ತೋಲೆಗಳನ್ನು ಅನುಷ್ಠಾನಕ್ಕೆ ತರುವ ಸಂಬಂಧ ವಿಷಯ ಪ್ರಸ್ತಾಪಿಸಿ ಕನ್ನಡ ಅನುಷ್ಠಾನ ಕೇವಲ ಪೇಪರ್‌ನಲ್ಲಷ್ಟೇ ಉಳಿದಿದೆ. ರೈಲ್ವೆ, ಬ್ಯಾಂಕಿಂಗ್ ಸೇರಿದಂತೆ ಕೇಂದ್ರ ಸರ್ಕಾರದ ಯಾವುದೇ ಹುದ್ದೆಗಳಲ್ಲೂ ಜಾರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಗಡಿಗಳ ಎದುರು ಕನ್ನಡದಲ್ಲಿ ನಾಮಫಲಕಗಳನ್ನು ಹಾಕದಿದ್ದರೆ ದಂಡ ವಿಧಿಸುವುದಕ್ಕೆ ಹಾಗೂ ಪರವಾನಗಿ ರದ್ದುಗೊಳಿಸುವುದಕ್ಕೂ ಅವಕಾಶವಿದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ. ಬ್ಯಾಂಕ್‌ಗಳಲ್ಲಿರುವ ಎಷ್ಟೋ ಸಿಬ್ಬಂದಿಗೆ ಕನ್ನಡವೇ ಬರುವುದಿಲ್ಲ. ಅವರು ಗ್ರಾಮೀಣ ಜನರೊಂದಿಗೆ ಸುಗಮವಾಗಿ ಸಂವಹನ ನಡೆಸಲಾಗುತ್ತಿಲ್ಲ. ಬ್ಯಾಂಕ್ ಚಲನ್‌ಗಳೆಲ್ಲವೂ ಹಿಂದಿ-ಇಂಗ್ಲೀಷ್‌ನಲ್ಲಿದ್ದು, ಅವುಗಳು ಕನ್ನಡದಲ್ಲಿರುವಂತೆ ಮಾಡಬೇಕಿದೆ. ಈ ಬಗ್ಗೆ ಮನವಿ ಕೊಟ್ಟು, ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ ಎಂದರು.
ಶಾಸಕ ಎಂ.ಶ್ರೀನಿವಾಸ್, ಉಪಾಧ್ಯಕ್ಷೆ ಇಶ್ರತ್ ಫಾತೀಮಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ, ಪೌರಾಯುಕ್ತ ಮಂಜುನಾಥ್ ಇದ್ದರು.