

ವಿಜಯವಾಣಿ ಸುದ್ದಿಜಾಲ ಗದಗ
ನಗರಸಭೆ ಮಾಲೀಕತ್ವದ ಮಳಿಗೆಗಳ ಗುತ್ತಿಗೆ ಪ್ರಕರಣ ಶುಕ್ರವಾರ ಜರುಗಿದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು. ಆರೋಪಗಳ ಅಸ್ತ್ರ, ಬ್ರಹ್ಮಾಸ್ತ್ರಗಳನ್ನು ಪ್ರಯೋಗಿಸಿದ ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ಅಂತಿಮವಾಗಿ ಗ್ರೇನ್, ಗ್ರಾಸರಿ ಮತ್ತು ಕ್ಲಾಥ್ ಮಾರುಕಟ್ಟೆ ಮಳಿಗೆಗಳಿಂದ ಬಾಡಿಗೆ ಹಣ ಮುಂಗಡ ಪಾವತಿಯಾದ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕೆಂದು ಒಕ್ಕೋರಲಿನ ಧನಿ ಎತ್ತಿದರು. ಪ್ರಸ್ತುತ ಮಳಿಗೆಗಳ ಭೂ ಬಾಡಿಗೆ ಕುರಿತ ಪ್ರಕರಣ ಕೊರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದರೂ ಯಥಾಸ್ಥಿತಿ ಕಾಯ್ದುಕೊಳ್ಳದೇ ಮುಂಗಡ ಪಾವತಿಸಿದ್ದರಿಂದ ಅಕ್ರಮ ಸಾಭಿತಾಗಿದೆ ಎಂದು ಆರೋಪಿಸಿದರು.
ನಗರದ ಗ್ರೇನ್ ಮಾರುಕಟ್ಟೆಯ 86 ಮಳಿಗೆ ಹಾಗೂ ಕ್ಲಾಥ ಮಾರುಕಟ್ಟೆಯ 40 ಮಳಿಗೆಗಳಿಂದ ಸಿಟಿಜನ್ ಲಾಗಿನ್ ಮೂಲಕ "ಮುಂಗಡ ಬಾಡಿಗೆ ಪಾವತಿ' ಪ್ರಕರಣ ಇದಾಗಿದೆ. ಮಳಿಗೆ ಬಾಡಿಗೆ ಪಡೆದ ಗತ್ತಿಗೆದಾರ ಅವಧಿ 2021ರಂದು ಮುಕ್ತಾಯಗೊಂಡು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹಿಗೀದ್ದರೂ 2024- 29ರ ವರೆಗೆ ಸಿಟಿಜನ್ ತಂತ್ರಾಶದ ಮೂಲಕ ಗುತ್ತಿಗೆದಾರರು ಮುಂಗಡ ಬಾಡಿಗೆ ಮಾವತಿಸಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಹಾಗೂ ಈ ಪ್ರಕ್ರಿಯೆ ಹಿಂದಿರುವ ಕಾಣದ ಕೈಗಳನ್ನು ಗುರುತಿಸಿ ಕ್ರಮ ಜರುಗಿಸಬೇಕು ಎಂದು ನಗರಸಭೆ ಸಾಮಾನ್ಯಸಭೆಯಲ್ಲಿ ಆಗ್ರಹ ಕೇಳಿ ಬಂದಿತು.
ಶುಕ್ರವಾರ ಸಾಮಾನ್ಯ ಸಭೆ ಆರಂಭ ಆಗುತ್ತಿದ್ದಂತೆ ನಗರದ ಗ್ರೇನ್, ಕ್ಲಾಥ್ ಮಾರುಟ್ಟೆಯ ಮಳಿಗೆಗಳಿಂದ ಮುಂಗಡ ಗುತ್ತಿಗೆ ಪಾವತಿ ಕುರಿತು ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಎಲ್.ಡಿ. ಚಂದಾವರಿ, 2017ರಿಂದಲೂ ಮಳಿಗೆಗಳ ಗುತ್ತಿಗೆ ನವೀಕರಣ ಆಗದೇ ಬಾಡಿಗೆ, ಗುತ್ತಿಗೆ ಹಣ ಪಾವತಿ ನಡೆಯುತ್ತಿದೆ. 2024 - 29ರ ವರೆಗೆ ಮುಂಗಡ ಪಾವತಿ ಆಗಿದೆ. ಗುತ್ತಿಗೆ ನವೀಕರಣ, ಮಳಿಗೆಗಳ ಬಹಿರಂಹ ಹರಾಜು ಪ್ರಕ್ರಿಯೆ ನಡೆಯದೇ ತೆರೆಮರೆಯಲ್ಲಿ ಈ ಪ್ರಕ್ರಿಯೆ ನಡೆದಿದ್ದು ಅನುಮಾನಕ್ಕೆ ಕಾರಣವಾಗಿದೆ. ಈ ಅಕ್ರಮದಲ್ಲಿ ಆಡಳಿತ ಬಿಜೆಪಿ ಪಕ್ಷದ ಕೈವಾಡ ಇದೆ ಎಂದು ಆರೋಪಿಸಿದರು. ಕಾಂಗ್ರೆಸ್ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು. ಈ ಅಕ್ರಮವನ್ನು ಬಯಲಿಗೇ ತಂದಿದ್ದೇ ಬಿಜೆಪಿ ಸದಸ್ಯರು. ಲೋಕಾಯುಕ್ತರಿಗೆ, ಯುಡಿಡಿ ಗೆ ದೂರು ಸಲ್ಲಿಸಿದ್ದೇ ನಾವು. ಆದರೆ, ಅಕ್ರಮ ಬಯಲಿಗೆಳೆದ ಕ್ರೆಡಿಟ್ ಕಾಂಗ್ರೆಸ್ ಪಕ್ಷ ಪಡೆಯುತ್ತಿದೆ ಕಿಡಿಕಾರಿದರು. ಈ ನಡುವೆ ನಗರದ ಬಿದಿ ದೀಪ ನಿರ್ವಹಣೆ ಟೆಂಡರ್ ಪ್ರಕ್ರಿಯೆ ನಡೆಸಲು ಕಾಂಗ್ರೆಸ್ ಪಕ್ಷದ ಸದಸ್ಯರು ಪರೀಕ್ಷವಾಗಿ ತಡೆ ನೀಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು.
ಕೋಡಂಗಿ, ವೀರಭದ್ರ:
ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ಭುಗಿಲೇಳುತ್ತಿದ್ದಂತೆ ಬಿಜೆಪಿ ಸದಸ್ಯ ರಾವೇಂದ್ರ ಯಳವತ್ತಿ ಮಧ್ಯಪ್ರವೇಶಿಸಿ ಮಾತನಾಡಿ, ಲಾಂತರ ರೂ. ಬಾಡಿಗೆ ಪಡೆಯುವಂತಹ ಮಳಿಗೆಗಳಿಂದ ಸಾವಿರಾರು ರೂ. ಲೆಕ್ಕದಲ್ಲಿ ಬಾಡಿಗೆ ಮುಂಗಡ ಪಾವತಿ ಆಗಿದೆ. ಈ ಪ್ರಕರಣದ ಹಿಂದೆ ಅಕ್ರಮದ ಕೈಗಳು ತನ್ನ ಬಾಹುಗಳನ್ನು ಚಾಚಿದೆ ಎಂಬ ಅನುಮಾನ ಇದೆ. ಅಕ್ರಮ ನಡೆದೇ ಇಲ್ಲ ಎಂದು ಸಭೆಯಲ್ಲಿ ಯಾರು ಹೇಳುತ್ತಿಲ್ಲ. ಕ್ಲಾಥ್ ಮಾರುಕಟ್ಟೆಯಲ್ಲಿ ಗುತ್ತಿಗೆದಾರರ ಸಭೆ ನಡೆಸಿ ಹಣ ಸಂಗ್ರಹಿಸಿದವರು ಯಾರು? ಹಣ ಕೊಟ್ಟವರು ಯಾರು, ಹಣ ಇಸಿದುಕೊಂಡವರು ಯಾರು? ಅವರು ಯಾವ ಪಕ್ಷದ ಮುಖಂಡರು ಎಂಬುದು ಬೆಳಿಕೆ ಬರಬೇಕು. ಈ ಪ್ರಕರಣದಲ್ಲಿ ಕೊಟ್ಟಾವ ಕೋಡಂಗಿ, ಇಸಿದುಕೊಂಡವ ವೀರಭದ್ರ ಎಂದು ವಿಪಕ್ಷವನ್ನು ತಿವಿದರು.
ಪ್ರಾಧಿಕಾರದ ಅಸ್ತ್ರ:
ಮಳಿಗೆಗಳಿಂದ ಮುಂಗಡ ಬಾಡಿಗೆ ಪಾವತಿ ಪ್ರಕರಣದ ಗಾಳವನ್ನು ಕಾಂಗ್ರೆಸ್ ಸದಸ್ಯರಾದ ಕೃಷ್ಣ ಪರಾಪುರೆ, ಬರಕತ್ ಅಲಿ ಮುಲ್ಲಾ ಊರುಳಿಸಿದ್ದಿದ್ದಂತೆ ಬಿಜೆಪಿ ಸದಸ್ಯ ಚಂದ್ರ ತಡಸದ ನಗರಸಭೆ ಮಾಲೀಕತ್ವದ ವಕಾರು ಸಾಲು ಜಮೀನು ಬಳಸಿಕೊಂಡು ಪ್ರಾಧಿಕಾರ ರಚನೆಗೆ ಕಾಂಗ್ರೆಸ್ ಹುನ್ನಾರ ನಡೆಸಿದೆ ಎಂದು ಆರೋಪಿಸಿ ಪ್ರತ್ಯಸ್ತ್ರ ಬಿಟ್ಟರು. ನೇರವಾಗಿ ಸಚಿವ ಎಚ್.ಕೆ. ಪಾಟೀಲ ಅವರು ಪ್ರಾಧಿಕಾರ ರಚನೆಗೆ ಆಸಕ್ತಿ ವಹಿಸಿದ್ದನ್ನು ಉಲ್ಲೇಖಿಸಿದರು. ಸಚಿವರ ಹೆಸರು ಪ್ರಸ್ತಾಪಿಸುತ್ತಿದ್ದಂತೆ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು, ವಕಾರ ಸಾಲು ಭೂಮಿಯನ್ನು ಅಕ್ರಮವಾಗಿ ಗುತ್ತಿಗೆ ನೀಡಲು ಬಿಜೆಪಿ ಸದಸ್ಯರು ಮುಂದಾಗಿದ್ದನ್ನು ಅರಿತುಕೊಂಡೇ ನಗರದ ಅಭಿವೃದ್ಧಿಗೆ ಪ್ರಾಧಿಕಾರ ರಚನೆಗೆ ಸಚಿವರು ಮುಂದಡಿ ಇಟ್ಟಿದ್ದರು ಎಂದು ಸರ್ಮಥಿಸಿಕೊಂಡರು.
ಬಾಕ್ಸ್:
ಜು.23 ರಂದು ನಗರಸಭೆ ಅಧ್ಯೆ ಉಷಾ ದಾಸರ ಮತ್ತು ಉಪಾಧ್ಯೆ ಸುನಂದಾ ಬಾಕಳೆ ಅವರ ಅವಧಿ ಮುಕ್ತಾಯಗೊಳ್ಳುವ ಹಿನ್ನೆಲೆ ಬಿಜೆಪಿ ಸದಸ್ಯರು ಅಧ್ಯೆ ಮತ್ತು ಉಪಾಧ್ಯಕ್ಷರಿಗೆ ಶುಭ ಕೋರಿದರು. 30 ತಿಂಗಳ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ನಗರದ ಅಭಿವೃದ್ಧಿಗೆ ಬಿಜೆಪಿ ಮುನ್ನಡೆ ಬರೆದಿದೆ ಎಂದು ತಿಳಿಸಿದರು.