ಶಿರಾ, ಆರ್ ಆರ್ ನಗರದಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಸಿಎಂ ವಿಶ್ವಾಸ

IMG-20201108-WA0003
Published on

ಶಿವಮೊಗ್ಗ: ಚುನಾವಣೆ ಸಂದರ್ಭದಲ್ಲಿ ನಮ್ಮ ನಿರೀಕ್ಷೆ ಹಾಗೂ ಮತದಾನೋತ್ತರ ಸಮೀಕ್ಷೆ ನಿಜವಾಗಿದೆ. ಶಿರಾ ಹಾಗೂ ಆರ್.ಆರ್.ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ದೊಡ್ಡ ಅಂತರದ ಗೆಲುವು ಸಾಧಿಸಲಿದ್ದಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.ಎರಡೂ ಕ್ಷೇತ್ರದಲ್ಲಿ ನಾವು ಗೆಲ್ಲಲಿದ್ದೇವೆ ಎಂದು ಚುನಾವಣೆ ಸಂದರ್ಭದಲ್ಲೇ ಹೇಳಿದ್ದೆ. ಆದರೆ ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ ವೃಥಾ ಟೀಕೆ ಮಾಡಿದರು. ಶಿರಾದಲ್ಲಿ 25 ಸಾವಿರ ಹಾಗೂ ಆರ್.ಆರ್.ನಗರದಲ್ಲಿ 40 ಸಾವಿರ ಮತಗಳ ಅಂತರದ ಗೆಲುವು ಬಿಜೆಪಿಗೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾ ಕ್ಷೇತ್ರದಲ್ಲಿ ನಾವು ಠೇವಣಿಯನ್ನೂ ಉಳಿಸಿಕೊಳ್ಳುವ ವಾತಾವರಣವಿರಲಿಲ್ಲ. ಈಗ ಅಲ್ಲಿ ಕಮಲ ಅರಳಲಿದೆ ಎಂದರು. ಬಿಹಾರದ ಮತದಾನೋತ್ತರ ಸಮೀಕ್ಷೆಗೆ ಪ್ರತಿಕ್ರಿಯಿಸಿದ ಸಿಎಂ, ಅಲ್ಲಿ ಮತ್ತೆ ನಿತೀಶ್ ಕುಮಾರ್ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸವಿದೆ, ನೋಡೋಣ ಎಂದು ಹೇಳಿದರು.ಶರಾವತಿ ಸಂತ್ರಸ್ತರಿಗೆ ರಿಲೀಫ್:ಶರಾವತಿ ಯೋಜನೆಗಳಿಂದ ಮುಳುಗಡೆಯಾದವರಿಗೆ ಭೂಮಿ ಹಕ್ಕು ನೀಡುವ ಸಂಬಂಧ ಈಗಾಗಲೇ ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳ ಸಭೆ ಕರೆದು ಚರ್ಚಿಸಿದ್ದೇನೆ. ಆ ಸಭೆಯಲ್ಲಿ ಜಿಲ್ಲೆಯ ಶಾಸಕರು, ಲೋಕಸಭಾ ಸದಸ್ಯರೂ ಭಾಗವಹಿಸಿದ್ದರು. ಭೂಮಿ ನೀಡುವ ಸಂಬಂಧ ಎದುರಾಗಿರುವ ಕಾನೂನು ತೊಡಕುಗಳನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net