

ಚಿಕ್ಕಮಗಳೂರು: ಡಿ.25ರಂದು ಒಂದು ಸಾವಿರ ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರವೇರಿಸಲಿದ್ದಾರೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.
ಉಪ್ಪಳ್ಳಿ ಸಮೀಪ ಅಭಿವೃದ್ಧಿಪಡಿಸಿರುವ ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ಕಾಮಗಾರಿ ಬುಧವಾರ ವೀಕ್ಷಿಸಿ ಮಾತನಾಡಿದರು.
ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ಜಿಲ್ಲೆಯಲ್ಲಿಯೇ ಅತ್ಯಂತ ಸುವ್ಯವಸ್ಥಿತವಾಗಿರುವ ಪ್ರತಿಷ್ಠಿತ ಬಡಾವಣೆ. ರಸ್ತೆ, ಚರಂಡಿ, ವಿದ್ಯುತ್ ಕೇಬಲ್, ನೀರಿನ ವ್ಯವಸ್ಥೆ ಸೇರಿದಂತೆ ಸುಸಜ್ಜಿತವಾಗಿದೆ. ನಿವೇಶನಗಳು ಮಾರಾಟವಾಗುವ ಬಗ್ಗೆ ಆರಂಭದಲ್ಲಿ ಆತಂಕವಿತ್ತು. ಕಾರ್ನರ್ ನಿವೇಶನ ಹರಾಜು ಪ್ರಕ್ರಿಯೆ ಹೊರತುಪಡಿಸಿ ಉಳಿದಂತೆ ನಗರಾಭಿವೃದ್ಧಿ ಪ್ರಾಧಿಕಾರದ ಎಲ್ಲ ನಿವೇಶನ ಹಂಚಿಕೆ ಆಗಿದೆ. ಮಧ್ಯಮ ವರ್ಗದವರಿಗೆ ಅನುಕೂಲವಾಗಲು ಅಡಿಗೆ 660 ರೂ. ಗೆ ಹಂಚಿಕೆ ಮಾಡಲಾಗಿದೆ ಎಂದರು.
ಸಿಡಿಎ ಅಧ್ಯಕ್ಷ ಸಿ.ಆನಂದ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ.ತಮ್ಮಯ್ಯ, ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ದಿ ವೇಣುಗೋಪಾಲ್, ಕೆ.ಎಸ್.ಪುಷ್ಪರಾಜ್, ಎಂ.ಆರ್.ದೇವರಾಜ ಶೆಟ್ಟಿ, ಬಿ.ರಾಜಪ್ಪ, ಪೌರಾಯುಕ್ತ ಬಿ.ಸಿ.ಬಸವರಾಜು, ನಗರ ಯೋಜನಾಧಿಕಾರಿ ಶಿವಕುಮಾರ್ ಇದ್ದರು.
3 ವರ್ಷದಲ್ಲಿ ಮೆಡಿಕಲ್ ಕಾಲೇಜು ಪೂರ್ಣ: ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಕೇಂದ್ರದ ಶೇ.60 ಹಾಗೂ ರಾಜ್ಯದ ಶೇ.40 ಅನುದಾನದಲ್ಲಿ ಮೊದಲನೇ ಕಂತಿನ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ 3 ವರ್ಷದಲ್ಲಿ ಪೂರ್ಣಗೊಳ್ಳುತ್ತದೆ. ಮೆಡಿಕಲ್ ಕಾಲೇಜು ಮತ್ತು ವಸತಿ ಇಲಾಖೆಯಿಂದ ಜಿ 2 ಮಾದರಿಯಲ್ಲಿ ನಿರ್ವಿುಸಲಿರುವ 1511 ಆಶ್ರಯ ಮನೆಗೆ ಭೂಮಿಪೂಜೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಡಿ.25 ರಂದು ಚಾಲನೆ ದೊರೆಯಲಿದೆ ಎಂದು ಸಿ.ಟಿ.ರವಿ ಹೇಳಿದರು.
ಕಸ್ತೂರಿ ರಂಗನ್ ವರದಿ ಅನುಷ್ಠಾನದ ಸಂದರ್ಭ ಒದಗಿ ಬಂದಲ್ಲಿ ಸಾಂಸ್ಕೃತಿಕ ವಲಯದಲ್ಲಿ ಜನಜೀವನ, ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು. ಆದರೆ ಒತ್ತುವರಿಗೆ ಅವಕಾಶ ಕೊಡಬಾರದು. 50 ವರ್ಷದ ಹಿಂದಿನ ಮಾನಸಿಕತೆ ಈಗ ಇದೆ ಎಂದು ನಿರೀಕ್ಷಿಸಲಾಗದು. ಕಾನೂನಿನ ಮೂಲಕ ನೈಸರ್ಗಿಕ ಪ್ರದೇಶ ರಕ್ಷಿಸಲೂ ಬೇಕಿದೆ ಎಂದರು.