ಬರ-ಪ್ರವಾಹ ನಿರ್ವಹಣೆ, ಪುನರ್ವಸತಿ ಸಮರ್ಪಕ; ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿವರಣೆ

Yadiyurappa
Published on

ಬೆಂಗಳೂರು:  ನಮ್ಮ ಸರ್ಕಾರ ಅಧಿಕಾರ ಸ್ವೀಕರಿಸಿದಾಗ ರಾಜ್ಯದಲ್ಲಿ ತೀವ್ರ ಬರದ ಛಾಯೆ ಇತ್ತು. ಅದಾಗಿ ಒಂದೇ ವಾರದೊಳಗೆ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಅಂದು ಜನರ ರಕ್ಷಣೆ ಮತ್ತು ಸ್ಥಳಾಂತರವನ್ನೂ ಸಮರ್ಥವಾಗಿ ನಿರ್ವಹಿಸಿದ್ದೇವೆ. ನಂತರ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾರ್ಯವನ್ನು ಸಹ ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯಪಾಲರ ಭಾಷಣ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಪ್ರವಾಹವಾದಾಗ ಕೇಂದ್ರ ಗೃಹ ಸಚಿವ ಅಮಿತ್ ಷಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅಧಿಕಾರಿಗಳ ತಂಡ ಬಂದು ನೆರೆ ಸಂತ್ರಸ್ತರ ಭಾಗಕ್ಕೆ ಭೇಟಿ ಕೊಟ್ಟರೂ ನರೇಂದ್ರ ಮೋದಿ ಬರಲಿಲ್ಲ ಎಂಬುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.

ಪ್ರವಾಹದಿಂದಾಗಿ ಅಂದಾಜು 35,160,81 ಕೋಟಿ ರೂ. ಹಾನಿಯಾಗಿದ್ದು, ಪರಿಹಾರಕ್ಕೆ ನಿಗದಿತ ಮಾರ್ಗಸೂಚಿಯಂತೆ 3891.80 ಕೋಟಿ ರೂ. ಆರ್ಥಿಕ ನೆರವು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಎನ್​ಡಿಆರ್​ಎಫ್ ಅಡಿ ಕೇಂದ್ರ ಸರ್ಕಾರ 1869.85 ಕೋಟಿ ರೂ. ಬಿಡುಗಡೆ ಮಾಡಿದೆ. ಇನ್ನೂ ಪರಿಹಾರ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.

ಜಿಪಿಎಸ್ ತಂತ್ರಾಂಶದ ವತಿಯಿಂದ ಜಿಯೋಟ್ಯಾಗಿಂಗ್ ಮೂಲಕ ಸಂಗ್ರಹಿಸಲಾದ ಮಾಹಿತಿಯಂತೆ ಪ್ರವಾಹಪೀಡಿತ ಪ್ರದೇಶದಲ್ಲಿ 1,25,795 ಮನೆ ಹಾನಿಯಾಗಿವೆ. ಶಾಶ್ವತ ಪರಿಹಾರವೆಂದು ಮುಳುಗಡೆಯಾದ ಹಳ್ಳಿಗಳನ್ನು ಸ್ಥಳಾಂತರಿಸಲು ಸರ್ಕಾರ ಬದ್ಧವಾಗಿದ್ದು, ಹೊಸ ಕಾಲೋನಿಗಳನ್ನು ನಿರ್ವಿುಸುವ ಯೋಜನೆ ರೂಪಿಸಲಾಗುತ್ತದೆ. ತೋಟದ ಮನೆ ಹಾನಿ ಪ್ರಕರಣಗಳಿಗೂ ಪರಿಹಾರ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಈವರೆಗೆ ಪರಿಹಾರ ಕಾರ್ಯಗಳಿಗೆ ಒಟ್ಟು 4413 ಕೋಟಿ ರೂ. ಬಿಡುಗಡೆ ಮಾಡಿದ್ದು, 3338 ಕೋಟಿ ರೂ. ವೆಚ್ಚವಾಗಿದೆ ಎಂದರು.

ಮೊದಲ ಬಾರಿಗೆ ದೇಶದ ಇತಿಹಾಸದಲ್ಲೇ ಮನೆ ಕಳೆದುಕೊಂಡವರಿಗೆ ನಮ್ಮ ಸರ್ಕಾರ 5 ಲಕ್ಷ ರೂ. ಪರಿಹಾರ ಘೊಷಿಸಿದೆ. ಆದರೆ ಮನೆ ಕಳೆದುಕೊಂಡವರಿಗೆ 98 ಸಾವಿರ ಪರಿಹಾರ ಕೊಡಲು ಮಾತ್ರ ಅವಕಾಶವಿತ್ತು. ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಮನೆ ಕಳೆದುಕೊಂಡವರಿಗೆ 1 ಲಕ್ಷ ರೂ. ಬಿಡುಗಡೆ ಮಾಡಿದ್ದೇವೆ. ಮನೆ ಕಟ್ಟುವ ಕೆಲಸ ಪ್ರಾರಂಭವಾಗಿದ್ದು, 2ನೇ ಕಂತು ಒಂದು ಲಕ್ಷ ರೂ. ಬಿಡುಗಡೆ ಮಾಡಲು ಪ್ರಾರಂಭಿಸಿದ್ದೇವೆ ಎಂದರು.

ಕೃಷಿ ವಲಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಘೊಷಿಸಲಾಗಿರುವ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ನೂರು ಜಿಲ್ಲೆಗಳಲ್ಲಿ ನೀರಿನ ಕ್ಷಾಮ ಅನುಭವಿಸುತ್ತಿರುವ ಕಡೆ ಅಭಿವೃದ್ಧಿಗೆ ಹಣ ಕೊಡುವುದಾಗಿ ಕೇಂದ್ರ ಸರ್ಕಾರ ಆಯವ್ಯಯದಲ್ಲಿ ಹೇಳಿದೆ. ಇದರಿಂದ ರಾಜ್ಯಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದು ತಿಳಿಸಿದರು.

ಹಾನಿಗೊಳಗಾದ ರಸ್ತೆಗಳ ದುರಸ್ತಿ ಹಾಗೂ ಪುನರ್ ನಿರ್ವಣಕ್ಕಾಗಿ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೆರೆಗಳ ದುರಸ್ತಿಗಾಗಿ ಸಣ್ಣ ನೀರಾವರಿ ಇಲಾಖೆಯಿಂದ 449.58 ಕೋಟಿ ರೂ. ಬಿಡುಗಡೆಯಾಗಿದೆ. ಗ್ರಾಮೀಣ ಪ್ರದೇಶಗಳ ರಸ್ತೆ ದುರಸ್ತಿಗಾಗಿ 447.42 ಕೋಟಿ ರೂ. ಹಾಗೂ ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಕೆಲಸಗಳ ದುರಸ್ತಿಗಾಗಿ 48.55 ಕೋಟಿ ರೂ. ಅನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ವಿದ್ಯುತ್ ಉಪಕರಣಗಳ ದುರಸ್ತಿಗಾಗಿ 201.12 ಕೋಟಿ ರೂ. ಅನುದಾನ ಸೇರಿ ಈ ಎಲ್ಲ ಕಾರ್ಯಕ್ರಮಗಳಿಗಾಗಿ ಒಟ್ಟು 2146.66 ಕೋಟಿ ರೂ. ಬಿಡುಗಡೆ ಮಾಡುವ ಮೂಲಕ ಹಾನಿಗೊಳಗಾದ ಮೂಲಭೂತ ಸೌಲಭ್ಯಗಳನ್ನು ದುರಸ್ತಿಪಡಿಸಲಾಗಿದೆ ಎಂದರು.

ಮುಖ್ಯಾಂಶ

  • ನಾಗರಿಕರ ಮನೆ ಬಾಗಿಲಿಗೆ ಸರ್ಕಾರಿ ಸೇವೆ ತಲುಪಿಸುವ ಜನಸೇವಕ್ ರಾಜ್ಯದ ಎಲ್ಲ ಭಾಗಗಳಿಗೆ ವಿಸ್ತರಣೆ.
  • ದಾವೋಸ್ ಭೇಟಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಬಂಡವಾಳ ಹೂಡಿಕೆದಾರರ ದಂಡು.
  • ಬೆಳಗಾವಿ ಸುವರ್ಣಸೌಧಕ್ಕೆ ಪ್ರಮುಖ ಐದರಿಂದ 6 ಇಲಾಖೆಗಳ ಸ್ಥಳಾಂತರ.
  • ರಾಜ್ಯದ ಅತೀ ದೊಡ್ಡ ಔಷಧಿ, ಸಲಕರಣೆಗಳ ಕೇಂದ್ರವಾಗಿ ಯಾದಗಿರಿ ಜಿಲ್ಲೆ ಕಡೆಚೂರ್ ಕೈಗಾರಿಕೆ ಪಾರ್ಕ್.

ಒಂದಿಂಚೂ ಜಾಗ ಬಿಟ್ಟುಕೊಡಲ್ಲ

ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆಯುತ್ತಿದೆ. ನಮ್ಮ ಸರ್ಕಾರದ ನಿಲುವು ಗಟ್ಟಿಯಾಗಿದ್ದು, ಮಹಾಜನ್ ವರದಿ ಅಂತಿಮ ಎಂದು ಯಡಿಯೂರಪ್ಪ ಹೇಳಿದರು. ಯಾವುದೇ ಕಾರಣಕ್ಕೂ ನಮ್ಮ ಒಂದಿಂಚು ಜಾಗವನ್ನೂ ಬಿಟ್ಟುಕೊಡುವುದಿಲ್ಲ ಎಂದು ರಾಜ್ಯದ ನಿಲುವು ಸ್ಪಷ್ಟಪಡಿಸಿದರು.

ಪ್ರತಿಪಕ್ಷಕ್ಕೆ ಮೆದು ಎಚ್ಚರಿಕೆ

ಸರ್ಕಾರದ ವಿರುದ್ಧ ನಿರಂತರ ದಾಳಿ ಮಾಡುತ್ತಿರುವ ಪ್ರತಿಪಕ್ಷ ನಾಯಕರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಿತಮಿತವಾದ ಪದ ಬಳಸಿ ಬಿಸಿ ಮುಟ್ಟಿಸಿದ್ದಾರೆ. ರಾಜ್ಯಪಾಲದ ಭಾಷಣದ ಮೇಲೆ ಮಾತನಾಡುವಾಗ ರಾಜಕೀಯ ಮಾತನಾಡುವುದು ಇಷ್ಟವಿಲ್ಲ. ಆದರೆ ಸಿದ್ದರಾಮಯ್ಯ ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡಿದ್ದಾರೆ. ಅದಕ್ಕೆ ಉತ್ತರ ಕೊಡಲೇಬೇಕು ಎಂದು ವಿಧಾನಸಭೆಯಲ್ಲಿ ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ಸಂಖ್ಯೆಗಳೇ ಮುಖ್ಯ. ಈ ಸಂಖ್ಯೆ ಮೇಲಾಟದಲ್ಲಿ ನಮ್ಮ ಪಕ್ಷ ಗೆದ್ದಿದೆ. ಉಪಚುನಾವಣೆಯಲ್ಲಿ 15ರಲ್ಲಿ 12 ಸ್ಥಾನಗಳನ್ನು ಗೆದ್ದು ಜನರ ಬೆಂಬಲ ನಮ್ಮ ಪಕ್ಷಕ್ಕಿದೆ ಎಂದು ಸಾಬೀತು ಮಾಡಿದ್ದೇವೆ. ಈ 12 ಸ್ಥಾನಗಳಲ್ಲಿನ ಗೆಲುವು ನಮ್ಮ ಸರ್ಕಾರದ ಮತ್ತು ಪಕ್ಷದ ನೈತಿಕ ಗೆಲುವಾಗಿದೆ. ರಾಜ್ಯದ ಜನತೆ ಸಂಪೂರ್ಣವಾಗಿ ನಮ್ಮ ಜತೆ ಇದ್ದಾರೆ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ನೀವು (ಕಾಂಗ್ರೆಸ್) ಗೆದ್ದಿದ್ದು ಒಂದು ಸ್ಥಾನ ಮಾತ್ರ. ನಾವು 25 ಪ್ಲಸ್ ಒಂದು ಸ್ಥಾನ ಗೆದ್ದಿದ್ದೇವೆ. ನಿಮ್ಮ ಟೀಕೆ ಜನರ ಅಭಿಮತವನ್ನು ಅಪಹಾಸ್ಯ ಮಾಡಿದಂತಾಗುತ್ತದೆ. ಇದರಿಂದ ಜನ ನಿಮ್ಮ ಬಗ್ಗೆ ಹಗುರವಾಗಿ ಮಾತನಾಡಲು ಪ್ರಾರಂಭಿಸುತ್ತಾರೆ. ಆದ್ದರಿಂದ ನನಗೆ ನಿಮ್ಮ ಬಗ್ಗೆ ಕಾಳಜಿಯಿಂದ ಈ ಸಲಹೆ ನೀಡುತ್ತಿದ್ದೇನೆ ಎಂದ ಸಿಎಂ, ಕೆಲ ಶಾಸಕರು ನಮ್ಮ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ತಡೆ ಹಿಡಿದಿದ್ದಾರೆಂಬ ನಿಲುವು ತಳೆದಿದ್ದಾರೆ.

ಹಣಕಾಸಿನ ಶಿಸ್ತನ್ನು ಪಾಲಿಸಲು ಇದು ಅನಿವಾರ್ಯ. ಹಂತ ಹಂತವಾಗಿ ಅಭಿವೃದ್ಧಿ ತಡೆ ಹಿಡಿದ ಕಾರ್ಯ ಮುಂದುವರಿಸಲಾಗುವುದು ಎಂದು ಭರವಸೆ ನೀಡಿದರು. ನಮ್ಮ ಸರ್ಕಾರ ಬಂದು ಏಳು ತಿಂಗಳಾಗಿವೆ. ದಿಟ್ಟವಾಗಿ ಹಲವು ಸವಾಲುಗಳನ್ನು ಎದುರಿಸಿದೆ. ಆಡಳಿತದಲ್ಲಿ ಪಾರದರ್ಶಕತೆ ತರಲು ಧೃಡವಾದ ಪ್ರಯತ್ನ ಮಾಡುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net