

ಶಿವಮೊಗ್ಗ: ಎಂತಹದ್ದೇ ಆಪಾದನೆಗಳು ಬಂದರೂ ರಾಜೀನಾಮೆ ಕೊಡಬೇಕಿಲ್ಲ ಎಂಬ ಕೆಟ್ಟ ಸಂಪ್ರದಾಯಕ್ಕೆ ಮೇಲ್ಪಂಕ್ತಿಯನ್ನು ಸಿದ್ದರಾಮಯ್ಯ ಹಾಕಿಕೊಟ್ಟಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ನನ್ನ ಮೇಲೆ ಮತ್ತು ಕೆ.ಜಿ.ಜಾರ್ಜ್ ಮೇಲೆ ಆರೋಪಗಳು ಬಂದ ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವು. ಇಬ್ಬರ ವಿರುದ್ಧದ ಕೇಸ್‌ಗಳೂ ಬಿದ್ದುಹೋಗಿವೆ. ನಿರಪರಾಧಿಗಳೆಂದು ಕ್ಲೀನ್‌ಚೀಟ್ ಸಿಕ್ಕಿದೆ. ಜಾರ್ಜ್ ಅವರನ್ನು ಪುನಃ ಮಂತ್ರಿಯನ್ನಾಗಿ ಮಾಡಿದರು. ಆದರೆ ಆರು ಸ್ಥಾನ ಖಾಲಿ ಇದ್ದರೂ ನನ್ನನ್ನು ಸಚಿವರನ್ನಾಗಿ ಮಾಡಲಿಲ್ಲ. ಏಕೆ ಮಾಡಲಿಲ್ಲ ಎಂಬುದನ್ನು ಈಗ ಚರ್ಚಿಸಲು ಹೋಗಲ್ಲ. ಆದರೂ ನನಗೆ ಮೋಸ, ದ್ರೋಹ ಬಗೆದರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಐದು ವರ್ಷವೂ ಕಾಂಗ್ರೆಸ್ ಸರ್ಕಾರವೇ ಇರಲಿ. ಅದಕ್ಕಾಗಿ ಜನರು ಅವರನ್ನು ಆಯ್ಕೆ ಮಾಡಿದ್ದಾರೆ. ಆದರೂ ಅವರದ್ದೇ ಪಕ್ಷದ ಕೆಲ ಶಾಸಕರು ಈ ಸರ್ಕಾರ ಐದು ವರ್ಷ ಪೂರೈಸುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಸಿದ್ದರಾಮಯ್ಯ ಅವರಿಗೆ ಬೇಕಾದವರು ಸಿಎಂ ಆದರೆ ಮಾತ್ರ ಈ ಸರ್ಕಾರ ಸ್ವಲ್ಪ ದಿನ ಉಳಿಯಬಹುದು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಿಎಂಗೆ ಬಂಡೆಯಾಗಿ ನಿಲ್ಲುತ್ತಾರೋ ಅಥವಾ ತಲೆ ಮೇಲೆಯೇ ಅದೇ ಬಂಡೆಯನ್ನು ಎತ್ತಿಹಾಕುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ ಎಂದು ವ್ಯಂಗ್ಯವಾಡಿದರು.
ಮಾಜಿ ಮೇಯರ್ ಸುವರ್ಣ ಶಂಕರ್, ನಗರಸಭೆ ಮಾಜಿ ಅಧ್ಯಕ್ಷ ಎಂ.ಶಂಕರ್, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಎಸ್.ಜಿ.ಬಾಲು, ಶಂಕರ್‌ನಾಯಕ್, ಚನ್ನಬಸಪ್ಪ, ನಾಗರಾಜ್ ಜಾಧವ್ ಸುದ್ದಿಗೋಷ್ಠಿಯಲ್ಲಿದ್ದರು.