ಕೊಡಗಿನ ಮಳೆಹಾನಿ ಪ್ರದೇಶಗಳಿಗೆ ಸಿಎಂ ಭೇಟಿ

CM visits rain damaged areas in Kodagu
Published on

ಮಡಿಕೇರಿ:

ಕೊಡಗಿನ ಮಳೆಹಾನಿ ಪೀಡಿತ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಸಮೀಪದ ಕಾಯಿಮಾನಿಯಿಂದ ತಮ್ಮ ಪ್ರವಾಸ ಆರಂಭಿಸಿದರು. ಮಳೆಯಿಂದಾಗಿ ಕುಸಿದಿರುವ ಗೋಣಿಕೊಪ್ಪದಿಂದ ಕೇರಳ ಸಂಪರ್ಕಿಸುವ ರಾಜ್ಯ ಹೆದ್ದಾರಿ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಗ್ರಾಮಸ್ಥರ ಜತೆಗೆ ಮುಖ್ಯಮಂತ್ರಿ ಚರ್ಚೆ ನಡೆಸಿದರು. ಇಲ್ಲಿ ರಸ್ತೆ ಕುಸಿದ ಪರಿಣಾಮದಿಂದ ಸುಮಾರು ೨೦ ಕ್ಕೂ ಹೆಚ್ಚು ಕುಟುಂಬಗಳು ಸಂಪರ್ಕ ಕಳೆದುಕೊಂಡಿದ್ದು, ಇಲ್ಲಿ ತೂಗು ಸೇತುವೆ ನಿರ್ಮಿಸುವ ಜೊತೆಗೆ ತುರ್ತಾಗಿ ರಸ್ತೆ ನಿರ್ಮಾಣದ ಜೊತೆಗೆ ಇತರೆ ದುರಸ್ತಿ ಕಾರ್ಯಗಳನ್ನು ಮುಗಿಸುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ರಸ್ತೆ ಕುಸಿತದ ಪರಿಣಾಮಗಳನ್ನು ಮತ್ತು ತೆಗೆದುಕೊಳ್ಳಲಾಗಿರುವ ಸುರಕ್ಷತಾ ಕ್ರಮಗಳು ಹಾಗೂ ಕಾಮಗಾರಿಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರಿಸಿದರು.

ಶ್ರೀಮಂಗಲದಿಂದ ಮರಳಿ ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆ ಆಗಮಿಸಿದ ಮುಖ್ಯಮಂತ್ರಿ ನಂತರ ತಾಲೂಕಿನ ಕೆದಮಳ್ಳೂರು ಗ್ರಾಮಕ್ಕೆ ತೆರಳಿ ಇಲ್ಲಿಯೂ ಹೆಚ್ಚಿನ ಮಳೆಯಿಂದ ಹಾನಿಯಾಗಿರುವ ರಸ್ತೆಯನ್ನು ಪರಿಶೀಲಿಸಿದರು. ಇದೆ ವೇಳೆ ತೋರ ಗ್ರಾಮದಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ಕೊಟ್ಟು ಅಲ್ಲಿರುವ ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ಒದಗಿಸಲಾಗುತ್ತಿರುವ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿರುವ ಬಗ್ಗೆ ವಿಚಾರಿಸಿ ತಿಳಿದುಕೊಂಡರು.

ತೋರ ಗ್ರಾಮದಿಂದ ನೇರವಾಗಿ ಮಡಿಕೇರಿಗೆ ಆಗಮಿಸಿದ ಮುಖ್ಯಮಂತ್ರಿ ಇಲ್ಲಿನ ಮಂಗಳೂರು ರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ತಡೆಗೋಡೆ ಪರಿಶೀಲಿಸಿದರು. ಡಿಸೆಂಬರ್ ಒಳಗೆ ಕಾಮಗಾರಿ ಮುಗಿಸಲೇಬೇಕು ಎಂದು ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಗೆ ಖಡಕ್ ಸೂಚನೆ ನೀಡಿದರು. ಇಲ್ಲಿಂದ ಸುದರ್ಶನ ವೃತ್ತದಲ್ಲಿರುವ ಪ್ರವಾಸಿಮಂದಿರಕ್ಕೆ ಆಗಮಿಸಿ ಕೊಡಗಿನಲ್ಲಿ ಆಗಿರುವ ಮಳೆಹಾನಿ, ತೆಗೆದುಕೊಮಡಿರುವ ಮುಂಜಾಗೃತಾ ಕ್ರಮಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.

ಇದಕ್ಕೂ ಮೊದಲು ನಿಗದಿಗಿಂತ ಸುಮಾರು ೨ ಗಂಟೆ ತಡವಾಗಿ ಕೊಡಗಿನ ಗಡಿ ಆನೆಚೌಕೂರು ಗೇಟ್‌ಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಬರಮಾಡಿಕೊಂಡರು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಶಾಸಕ ಡಾ. ಮಂತರ್ ಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ. ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಮತ್ತಿತರರು ಈ ಸಂದರ್ಭ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net