ಹಾಸನಾಂಬ ದರ್ಶನ ಪಡೆದ ಸಿಎಂ

ಹಾಸನಾಂಬ ದರ್ಶನ ಪಡೆದ ಸಿಎಂ
Published on

ಹಾಸನ: ಹಾಸನಾಂಬೆ ದರ್ಶನದ 6ನೇ ದಿನವಾದ ಬುಧವಾರ ಸಾರ್ವಜನಿಕ ದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸಿನಿಮಾ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.

ದೇವರ ದರ್ಶನದ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ರಾಜ್ಯದ ಸುಭೀಕ್ಷೆಗಾಗಿ ಪ್ರಾರ್ಥಿಸಿದ್ದೇನೆ. ರಾಜ್ಯದ ಜನರಿಗೆ ಒಳ್ಳೆಯದು ಮಾಡಲಿ ಆಯಸ್ಸು, ಆರೋಗ್ಯ ಕೊಡಲಿ. ಸಮಾಜದಲ್ಲಿ ಎಲ್ಲರೂ ಮನುಷ್ಯರಂತೆ ಜೀವಿಸಲಿ. ಮನುಷ್ಯ-ಮನುಷ್ಯನನ್ನು ಪ್ರೀತಿಸಲಿ. ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ ಎಂಬ ಭಾವನೆ ಎಲ್ಲರಿಗೂ ಮೂಡಲಿ. ನನಗೆ, ಸರ್ಕಾರಕ್ಕೆ, ಮಂತ್ರಿಗಳಿಗೆ, ಶಾಸಕರಿಗೆ ಎಲ್ಲ ಜನರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು.

ಕೃಷ್ಣ ಬೈರೇಗೌಡ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಭಕ್ತರಿಗೆ ಸುಗಮ ದರ್ಶನದ ವ್ಯವಸ್ಥೆ ಆಗಿದೆ. ಜಿಲ್ಲಾಡಳಿತ, ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು, ಬೇರೆ ಪಕ್ಷದ ಕಾರ್ಯಕರ್ತರು ಎಲ್ಲರೂ ಸಹಕಾರ ನೀಡಿದ್ದಾರೆ. ಎಲ್ಲರಿಗೂ ಧನ್ಯವಾದ ಎಂದರು.

ಅಗತ್ಯ ಬಿದ್ದರೆ ಹೆಚ್ಚುವರಿ ಅನುದಾನ: ಹಾಸನಾಂಬೆ ಜಾತ್ರೆಗೆ ಹೆಚ್ಚುವರಿ ಅನುದಾನವನ್ನು ರಾಜ್ಯ ಬಜೆಟ್‌ನಲ್ಲಿ ಘೋಷಿಸುತ್ತೀರಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಜಿಲ್ಲಾಡಳಿತದ ಜತೆ ಚರ್ಚಿಸುತ್ತೇನೆ. ಅಗತ್ಯವಿದ್ದರೆ ಅನುದಾನ, ಹಣಕಾಸಿನ ನೆರವು ನೀಡಲಾಗುವುದು ಎಂದರು.

ಹಿರಿಯ ನಟಿ ಜಯಮಾಲಾ, ಶೃತಿ, ಮಾಳವಿಕಾ ಅವಿನಾಶ್, ಹಿರಿಯ ನಟ ಶಶಿಕುಮಾರ್ ದರ್ಶನ ಪಡೆದರು. ನಂತರ ಮಾತನಾಡಿದ ನಟರು, ಜಿಲ್ಲಾಡಳಿತ ವತಿಯಿಂದ ಮಾಡಿದ ವ್ಯವಸ್ಥೆ ಶ್ಲಾಘನೀಯ. ಭಕ್ತರ ಸುರಕ್ಷತೆ ಮತ್ತು ಸೌಲಭ್ಯಕ್ಕಾಗಿ ಕೈಗೊಂಡ ಕ್ರಮಗಳು ಶಿಸ್ತಿನಿಂದ ನಡೆದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಾನು ಮುಷ್ತಾಕ್‌ರಿಂದ ದರ್ಶನ

ಬುಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಜಿಲ್ಲಾಡಳಿತದ ಶಿಷ್ಟಾಚಾರ ವಾಹನದಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನನ್ನ ಮೊದಲ ದರ್ಶನವಲ್ಲ. ನಾನು ಹಾಸನದವಳೇ, ನಮ್ಮ ಮನೆ ದೇವಾಲಯದ ಮುಂದಿನ ಬೀದಿಯಲ್ಲಿದೆ. ಚಿಕ್ಕಂದಿನಿಂದಲೂ ತಾಯಿಯ ಕೈ ಹಿಡಿದು ಹಾಸನಾಂಬೆಯ ದರ್ಶನಕ್ಕೆ ಬರುತ್ತಿದ್ದೆ. ಆಗ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಆದರೆ ಈಗ ಎಲ್ಲರೂ ಗುರುತಿಸುತ್ತಿದ್ದಾರೆ ಎಂದರು.

ಇದು ಭಾವೈಕ್ಯತೆಯ ಸಂಕೇತ. ಬಹಳ ಹಿಂದಿನಿಂದಲೂ ಮುಸ್ಲಿಂ ಸಮುದಾಯದವರು ಸಹ ಹಾಸನಾಂಬೆಯ ಜಾತ್ರೆಯಲ್ಲಿ ಪಾಲ್ಗೊಂಡು ದೇವಿಯನ್ನು ಗೌರವಿಸುತ್ತಿದ್ದರು. ನಮ್ಮ ಪೂರ್ವಿಕರು ಹಸನ್ ಬಿ, ಹುಸೇನ್ ಬಿ ಎಂದು ನಂಬುತ್ತಿದ್ದರು. ಮುಸ್ಲಿಂ ಹೆಣ್ಣು ಮಕ್ಕಳು ದೇವಾಲಯಕ್ಕೆ ಬಂದು ದೇವಿಯ ಕುರಿತು ಮಾಹಿತಿ ನೀಡುತ್ತಿದ್ದರು. ಇದು ಹಾಸನದ ಸಾಮಾಜಿಕ ಸಾಮರಸ್ಯದ ಜೀವಂತ ಉದಾಹರಣೆ ಎಂದು ಹೇಳಿದರು.

ಹಾಸನಾಂಬ ಜಾತ್ರೆ ನಮ್ಮೂರ ಹಬ್ಬ. ಎಲ್ಲರೂ ಒಟ್ಟಾಗಿ ಉತ್ಸಾಹದಿಂದ ಭಾಗವಹಿಸುತ್ತಾರೆ. ಇದು ಪ್ರೀತಿ, ಸ್ನೇಹ, ಸಹಬಾಳ್ವೆ ಮತ್ತು ಶಾಂತಿಯ ತಾಣ. ಹಿಂದಿನ ಕಾಲದಲ್ಲಿ ಮುಸ್ಲಿಂ ಸಮುದಾಯದವರು ಜಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಸಕ್ಕರೆ ಊದುಕಡ್ಡಿ (ಶುಭಾಶಯದ ಸಂಕೇತ) ತಂದು ದೇವಾಲಯದ ಮುಂದೆ ಊದುವ ಪರಂಪರೆ ಇತ್ತು. ಮಧ್ಯದಲ್ಲಿ ಸ್ವಲ್ಪ ಕಡಿಮೆಯಾಗಿತ್ತು. ಈಗ ಮತ್ತೆ ಎಲ್ಲರೂ ಸೇರಿ ಬರುತ್ತಿದ್ದಾರೆ ಎಂಬುದು ಸಂತೋಷದ ಸಂಗತಿ ಎಂದರು. ದೇವಸ್ಥಾನದ ವ್ಯವಸ್ಥೆ ಹಾಗೂ ಜಿಲ್ಲಾಡಳಿತದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾನಸಿಕವಾಗಿ ಸಿದ್ಧರಾಗಿ: ಶುಕ್ರವಾರದಿಂದ ಸಾರ್ವಜನಿಕ ದರ್ಶನ ಆರಂಭವಾಗಿದ್ದು 5 ದಿನದಲ್ಲಿ 8,84,503 ಜನ ದರ್ಶನ ಪಡೆದಿದ್ದಾರೆ. ಪ್ರಾರಂಭದ ದಿನಗಳಲ್ಲಿ ಒಂದು ಎರಡು ಗಂಟೆಗಳಲ್ಲಿ ಧರ್ಮ ದರ್ಶನ ಆಗುತ್ತಿತ್ತು. ಈಗ 4 ರಿಂದ 5 ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ಬರುವವರು ಇದಕ್ಕೆ ಮಾನಸಿಕವಾಗಿ ಸಿದ್ಧರಾಗಿ ಬರಬೇಕು. ಕಳೆದ ಬಾರಿ ದರ್ಶನಕ್ಕೆ 15 ರಿಂದ 20 ಗಂಟೆ ತೆಗೆದುಕೊಳ್ಳುತ್ತಿತ್ತು. ಈ ಬಾರಿ 3-4 ಗಂಟೆಯಲ್ಲಿ ದರ್ಶನ ಆಗುತ್ತಿದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.

ಕೃಷಿಕರು, ರೈತರು, ಕೆಲಸ ಕಾರ್ಮಿಕರು ಹೆಚ್ಚಾಗಿ ದರ್ಶನಕ್ಕೆ ಬರುತ್ತಿದ್ದಾರೆ. ಭಕ್ತರಲ್ಲಿ ಶೇ.70 ರಿಂದ 80 ಮಹಿಳೆಯರು ಇದ್ದಾರೆ. ಸರ್ಕಾರದ ಶಕ್ತಿ ಯೋಜನೆ ಉಪಯೋಗಿಸಿಕೊಂಡು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೇಗುಲಕ್ಕೆ ಆಗಮಿಸುತ್ತಿದ್ದಾರೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಆಡಳಿತ ವ್ಯವಸ್ಥೆ ಉತ್ತಮ ರೀತಿಯಲ್ಲಿ ಕೆಲಸ ಮಾಡಿದೆ. ಸಿಎಂ ಆಗಮನದಿಂದ ಜನರಿಗೆ ಇನ್ನಷ್ಟು ಸ್ಫೂರ್ತಿ ಬಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net