ಶುಕ್ರವಾರ ಭಾಗಮಂಡಲ ಮೇಲ್ಸೇತುವೆ ಉದ್ಘಾಟನೆ

cm visit
Published on

ಮಡಿಕೇರಿ:

ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲದಲ್ಲಿ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಿರುವ ಜಿಲ್ಲೆಯ ಮೊದಲ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ (ಜ.31) ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ತಿಳಿಸಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿಗಳು ಆದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು, ಸಚಿವ ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿ ವರ್ಷವೂ ಮಳೆಗಾಲದ ಸಂದರ್ಭ ಭಾಗಮಂಡಲದಲ್ಲಿ ಕಾವೇರಿ ನದಿ ಉಕ್ಕಿ ಹರಿದು ದ್ವೀಪದ ಸನ್ನಿವೇಶ ನಿರ್ಮಾಣ ಆಗುತ್ತಿತ್ತು. ಈ ಸಂದರ್ಭ ಸ್ಥಳೀಯ ನಿವಾಸಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಹೊರ ಪ್ರಪಂಚದೊAದಿಗೆ ಸಂಪರ್ಕ ಸಾಧಿಸಲು ದೋಣಿ ಅವಲಂಬನೆ ಅನಿವಾರ್ಯ ಆಗಿತ್ತು. 9 ವರ್ಷಗಳ ಹಿಂದೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದ ಕೆ.ಜೆ. ಜಾರ್ಜ್ ಭಾಗಮಂಡಲಕ್ಕೆ ಆಗಮಿಸಿದ್ದ ಸಂದರ್ಭ ಸಮಸ್ಯೆ ಅವರ ಗಮನಕ್ಕೆ ಬಂದಿತ್ತು. ಈ ಸಂಬAಧ ಅಧ್ಯಯನ ನಡೆಸಿದ್ದ ಸಚಿವ ಜಾರ್ಜ್ ಅಂದಿನ ಭಾರಿ ನೀರಾವರಿ ಸಚಿವ ಎಂ.ಬಿ. ಪಾಟೀಲ್ ಅವರಿಗೆ ವರದಿ ಸಲ್ಲಿಸಿ ಮೇಲ್ಸೇತುವೆ ಅಗತ್ಯತೆ ಬಗ್ಗೆ ಗಮನ ಸೆಳೆದಿದ್ದರು. ಈ ಬೆನ್ನಲ್ಲೇ ಒಪ್ಪಿಗೆ ಕೊಟ್ಟಿದ್ದ ಎಂ.ಬಿ. ಪಾಟೀಲ್ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರು. ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಮಗಾರಿ ಆಮೆಗತಿಯಲ್ಲಿ ನಡೆದಿತ್ತು. ಎ.ಎಸ್. ಪೊನ್ನಣ್ಣ ಈ ಭಾಗದ ಶಾಸಕ ಆಗುತ್ತಿದ್ದಂತೆಯೇ ಕಾಮಗಾರಿ ಪೂರ್ಣಗೊಳಿಸಲು ಆಸಕ್ತಿ ಮುತುವರ್ಜಿ ತೋರಿಸಿ ಡಿ.ಕೆ ಶಿವಕುಮಾರ್ ಅವರಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿ ಆಗಿದ್ದಲ್ಲದೆ ಇದೀಗ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೂ ಸಜ್ಜಾಗಿದೆ ಎಂದು ಹೇಳಿದರು.

ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ವೇಳೆ ಭಾಗಮಂಡಲ, ತಲಕಾವೇರಿ ಅಭಿವೃದ್ಧಿ ಆಯಿತು. ಈಗ ಸಿದ್ದರಾಮಯ್ಯ ಅವಧಿಯಲ್ಲಿ ಮೇಲ್ಸೇತುವೆ ನಿರ್ಮಾಣ ಆಗಿದೆ. ಮಡಿಕೇರಿ - ಭಾಗಮಂಡಲ ರಸ್ತೆಯ ಅಭಿವೃದ್ಧಿ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಶಾಸಕ ಪೊನ್ನಣ್ಣ ಸರ್ಕಾರದ ಗಮನ ಸೆಳೆದಿದ್ದಾರೆ. ರಸ್ತೆ ಪೂರ್ಣವಾದರೆ ಈ ಭಾಗದ ಬಹುತೇಕ ಬೇಡಿಕೆಗಳು ಈಡೇರಿಸಿದಂತೆ ಆಗುತ್ತದೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಆಕರ್ಷಕ ಉದ್ಯಾನವೂ ನಿರ್ಮಾಣವಾಗಿದ್ದು, ಇಲ್ಲಿಗೆ ಆಗಮಿಸುವವರ ಗಮನ ಸೆಳೆಯುತ್ತಿದೆ.

ಕೊಡಗಿನ ಜನ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಪೊನ್ನಂಪೇಟೆ ಬಳಿ 200 ಕೋಟಿ ರೂ. ವೆಚ್ಚದ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ. ಇದರಿಂದಾಗಿ ಮುಂದೆ ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಇರುವುದಿಲ್ಲ. ಹೀಗೆ ಪ್ರಮುಖ ವಿಷಯಗಳನ್ನು ತೆಗೆದುಕೊಂಡು ಹಂತ ಹಂತವಾಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಕೊಡಗಿನಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಪಕ್ಷವೂ ಗಮನ ಸೆಳೆಯುತ್ತದೆ ಎಂದರು.

ಜಿಲ್ಲಾ ಸೇವಾ ದಳ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಡಿಸಿಸಿ ಉಪಾಧ್ಯಕ್ಷರಾದ ಕೊಕ್ಕಲೆರ ಸುಜುತಿಮ್ಮಯ್ಯ, ಕೊಲ್ಯದ ಗಿರೀಶ್, ಕಾರ್ಯದರ್ಶಿ ಮುನೀರ್ ಅಹಮ್ಮದ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net