

ಮೈಸೂರು: ಎರಡನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ತಮ್ಮ ತವರು ಜಿಲ್ಲೆ ಮೈಸೂರಿನಲ್ಲಿ ಮೊದಲ ಮನೆಯನ್ನು ಕಟ್ಟಿಸುತ್ತಿದ್ದಾರೆ.
ಮೈಸೂರು ನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ 85*120 ಅಡಿ ವಿಸ್ತೀರಣದಲ್ಲಿ ನೂತನ ಮನೆಯನ್ನು ನಿರ್ಮಿಸುತ್ತಿದ್ದಾರೆ. ಶನಿವಾರ ಹಿರಿಯ ಪುತ್ರ ರಾಕೇಶ್ ಪುಣ್ಯತಿಥಿ ಅಂಗವಾಗಿ ಮೈಸೂರಿಗೆ ಭೇಟಿ ನೀಡಿದ್ದ ವೇಳೆ ಸಿಎಂ ಖುದ್ದು ಮನೆ ಕಾಮಗಾರಿಯನ್ನು ವೀಕ್ಷಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಈವರೆಗೆ ಒಟ್ಟು ನಾಲ್ಕು ಬಾರಿ ಮನೆ ಬದಲಿಸಿದ್ದು, ಮೈಸೂರಿಗೆ ಭೇಟಿ ನೀಡಿದಾಗಲೆಲ್ಲಾ ಬಾಡಿಗೆ, ಬೆಂಬಲಿಗರು, ಸ್ನೇಹಿತರ ಮನೆಯಲ್ಲೇ ವಾಸ್ತವ್ಯ ಹೂಡುತ್ತಿದ್ದರು. ಸದ್ಯ ಆಪ್ತ ಮರಿಸ್ವಾಮಿ ಮನೆಯಲ್ಲಿ ಸಿದ್ದರಾಮಯ್ಯ ವಾಸಿಸುತ್ತಿದ್ದಾರೆ.
ಈ ಮೊದಲು ಸಿದ್ದರಾಮಯ್ಯನವರು ಮೈಸೂರಿನ ವಿಜಯನಗರ ಬಡಾವಣೆಯ ಎರಡನೇ ಹಂತದಲ್ಲಿ ಸ್ವಂತ ಮನೆಯನ್ನು ಹೊಂದಿದ್ದರು. ಉಪಮುಖ್ಯಮಂತ್ರಿ ಆಗಿದ್ದ ವೇಳೆ ಅವರು ಆ ಮನೆಯನ್ನು ಕಾರಣಾಂತರಗಳಿಂದ ಮಾರಾಟ ಮಾಡಿದ್ದರು.
ಬೆಂಗಳೂರು ಮೂಲದ ಕಂಪನಿಯೂ ಸಿಎಂ ಸಿದ್ದರಾಮಯ್ಯ ಅವರ ಕನಸಿನ ಮನೆಯನ್ನು ನಿರ್ಮಿಸುತ್ತಿದ್ದು, ಅದರ ಕಾಮಗಾರಿಯು ಅಂತಿಮ ಹಂತದಲ್ಲಿದೆ.
ಭವ್ಯವಾಗಿ ನಿರ್ಮಾಣ ಆಗುತ್ತಿರುವ ಕಟ್ಟಡದಲ್ಲಿ ಸೆಲ್ಲಾರ್, ಗ್ರೌಂಡ್ ಫ್ಲೋರ್, ಫಸ್ಟ್ ಹಾಗೂ ಸೆಕೆಂಡ್ ಫ್ಲೋರ್ ಹಾಗೂ ಸೆಂಟ್ರಲೈಸ್ಡ್ ಏಸಿ ವ್ಯವಸ್ಥೆ ಈ ಬಂಗಲೆಯಲ್ಲಿ ಇರಲಿದೆ. ಬಂಗಲೆ ಪ್ರವೇಶಕ್ಕೆ ಎರಡು ಮುಖ್ಯದ್ವಾರಗಳು ಇರಲಿವೆ ಎಂದು ತಿಳಿದು ಬಂದಿದೆ.