ಸರ್ಕಾರ ಅಸ್ಥಿರಗೊಳಿಸುವುದಕ್ಕಾಗಿ ಸಿಎಂ ಟಾರ್ಗೆಟ್

CM New
Published on

ಹುಬ್ಬಳ್ಳಿ : ಬಡವರ ಪರವಾಗಿ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹೈಕಮಾಂಡ್ ಮತ್ತು ಜೆಡಿಎಸ್ ಸೇರಿಕೊಂಡು ಪ್ರಯತ್ನ ಮಾಡುತ್ತಿವೆ. ಇದಕ್ಕೆ ಪೂರಕವಾಗಿ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಹಾವೇರಿಗೆ ತೆರಳುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ ತಕ್ಷಣ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟುಬಿಡಬೇಕಾ ? ಎಂದು ಪ್ರಶ್ನಿಸಿದರು.

ನನ್ನ ಮೇಲಿನ ಆರೋಪಗಳ ವಿಚಾರಣೆ ಆಗಿಲ್ಲ. ಆರೋಪ ಸಾಬೀತಾಗಿಲ್ಲ. ಯಾವ ಕಾರಣಕ್ಕೆ ರಾಜೀನಾಮೆ ಕೊಡಬೇಕು. ಬಿ.ವೈ. ವಿಜಯೇಂದ್ರ ಮೇಲೆಯೂ ಅನೇಕ ಆರೋಪಗಳು ಇವೆ. ನಾನು ಸಹ ರಾಜೀನಾಮೆಗೆ ಒತ್ತಾಯಿಸಿದ ತಕ್ಷಣ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ ? ಎಂದು ತಿರುಗೇಟು ನೀಡಿದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವರಾದ ಜನಾರ್ಧನ ರೆಡ್ಡಿ, ಮುರಗೇಶ ನಿರಾಣಿ, ಶಶಿಕಲಾ ಜೊಲ್ಲೆ ವಿರುದ್ಧ ಹಲವಾರು ತಿಂಗಳಿಂದ ಆರೋಪಗಳು ಬಾಕಿ ಉಳಿದಿವೆ. ಕುಮಾರಸ್ವಾಮಿ ಪ್ರಕರಣದಲ್ಲಿ ವಿಚಾರಣೆ ಮುಗಿದಿದ್ದು, ಚಾರ್ಜ್​ಶೀಟ್ ದಾಖಲಾಗಬೇಕು. ಈ ಎಲ್ಲ ಪ್ರಕರಣಗಳಿಗೆ ಪ್ರಾಸಿಕ್ಯೂಷನ್ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್​ನ ಎಂಎಲ್​ಎ, ಎಂಎಲ್​ಸಿ, ಸಂಸದರು ರಾಜ್ಯಪಾಲರನ್ನು ಭೇಟಿ ಮಾಡಿ, ಮನವಿ ಸಲ್ಲಿಸಲಿದ್ದಾರೆ ಎಂದರು.

ಆದರೆ, ಯಾವುದೇ ತನಿಖೆ, ವಿಚಾರಣೆ ನಡೆಯದೇ ರಾಜ್ಯಪಾಲರು ನನ್ನ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದು ರಾಜಕೀಯ ಷಡ್ಯಂತ್ರ ಎಂದು ದೂರಿದರು.

ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಪರಿಸರ ಇಲಾಖೆ ಅನುಮತಿ ನೀಡಿದ ನಂತರ ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು ಎಂದರು.

ಬಿಜೆಪಿಯವರು ಒಡ್ಡಿರುವ ಆಮಿಷಗಳಿಗೆ ಕಾಂಗ್ರೆಸ್ ಶಾಸಕರು ಬಲಿಯಾಗುವುದಿಲ್ಲ ಎಂದು ಹೇಳಿದ ಸಿಎಂ, ಬಿಜೆಪಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಸಾಧ್ಯವಿಲ್ಲ. ಈ ಹಿಂದೆಯೂ ಆಪರೇಷನ್ ಕಮಲದ ಮೂಲಕವೇ ಅವರು ಸರ್ಕಾರ ರಚಿಸಿದ್ದಾರೆ ಎಂದು ಟೀಕಿಸಿದರು.

ಆಪರೇಷನ್ ಕಮಲಕ್ಕೆ 100 ಕೋಟಿ ರೂ. ಅಮಿಷವೊಡ್ಡಿರುವುದು ನಿಜವೆಂದು ಶಾಸಕ ರವಿಕುಮಾರ್ ಗಣಿಗ ಹೇಳಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net