ಹುಬ್ಬಳ್ಳಿ: ಉತ್ತರ ಕರ್ನಾಟಕದ ಮಹತ್ವದ ಯೋಜನೆಯಾದ ಮಹಾದಾಯಿಗೆ ಪರಿಸರ ಇಲಾಖೆಯಿಂದ ಅನುಮತಿ ಕೊಡಿಸುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಗೋವಾಕ್ಕೆ ಹೆದರಿಕೊಂಡು ಕುಳಿತಿದ್ದಾರೆ, ಇಲ್ಲಿನ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪಟ್ಟು ಹಿಡಿದು ಕೆಲಸ ಮಾಡಿಸಲು ಮುಂದಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದ ಕುಡಿಯುವ ನೀರಿನ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಅನುಮತಿ ಕೊಡಿಸಿದ ಮಾರನೇ ದಿನವೇ ಕೆಲಸ ಆರಂಭಿಸುತ್ತೇವೆ. ಆದರೆ, ಪ್ರಧಾನಿ ಪರಿಸರ ಇಲಾಖೆಯಿಂದ ಅನುಮತಿ ಕೊಡಿಸಲು ಸಿದ್ಧರಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರವು ಮಹದಾಯಿ ಯೋಜನೆ ಆರಂಭಿಸಬೇಕಾದರೆ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಸಿಗಬೇಕು. ಆದರೆ, ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಹಲವು ವರ್ಷಗಳಿಂದ ಮುಂದುವರಿದಿದೆ. ಪರಿಸರ ಇಲಾಖೆ ಅನುಮತಿ ಕೊಡಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಇತರ ಸಚಿವರನ್ನು ನಾನು, ಡಿಸಿಎಂ ಶಿವಕುಮಾರ ಸಾಕಷ್ಟು ಬಾರಿ ದೆಹಲಿಗೆ ಹೋಗಿ ಭೇಟಿಯಾಗಿದ್ದೇವೆ. ಪತ್ರ ಸಹ ಬರೆದಿದ್ದೇವೆ. ಆದರೆ, ಅನುಮತಿ ಸಿಗುತ್ತಿಲ್ಲ.
ಕೇಂದ್ರದಲ್ಲಿ ಪ್ರಭಾವಿ ಸಚಿವರಾದ ಪ್ರಲ್ಹಾದ ಜೋಶಿ ಅವರು ರಾಜ್ಯದ ಒಳಿತಿಗಾಗಿ ಅನುಮತಿ ಕೊಡಿಸುವ ಕೆಲಸ ಮಾಡಬಹುದಿತ್ತು. ಆದರೆ, ಅದು ಬಿಟ್ಟು ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಾರೆ. ಮಹದಾಯಿ ಬಗ್ಗೆ ಒಂದು ಮಾತೂ ಅವರು ಆಡುತ್ತಿಲ್ಲ ಏಕೆ? ಇಲ್ಲಿ ಯಾರೂ ಅವರನ್ನು ಕೇಳುವುದೂ ಇಲ್ಲವೇ? ಎಂದು ಪ್ರಶ್ನಿಸಿದರು.
ಮಹದಾಯಿ ವಿಷಯದಲ್ಲಿ ಅಗತ್ಯವಿದ್ದರೆ ಸರ್ವ ಪಕ್ಷ ಸಭೆ ಕರೆಯುವುದಾಗಿ ಸಿಎಂ ಉತ್ತರಿಸಿದರು.
ವಿಜಯನಗರದಲ್ಲಿ ಸಮಾವೇಶ:
ರಾಜ್ಯ ಸರ್ಕಾರಕ್ಕೆ ಎರಡು ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಮೇ 20ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬೃಹತ್ ಸಮಾವೇಶ ಮಾಡಲಾಗುತ್ತಿದೆ. ಅಲ್ಲಿ ಸರ್ಕಾರದ ಎರಡು ವರ್ಷದ ಸಾಧನೆ ಬಗ್ಗೆ ಜನರಿಗೆ ಸಮಗ್ರ ಮಾಹಿತಿ ನೀಡುತ್ತೇವೆ ಎಂದು ಸಿಎಂ ತಿಳಿಸಿದರು.