

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿಎಂ ವೈಮಾನಿಕ ಸಮೀಕ್ಷೆ | ಬೆಳೆಹಾನಿಗೆ ರೈತರ ನೆರವಿಗೆ ಧಾವಿಸಿದ ಸರ್ಕಾರ | ನೆರವು ನೀಡಲು ಕೇಂದ್ರಕ್ಕೆ ಮೊರೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಪ್ರವಾಹ ಮತ್ತು ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿ ನಲುಗಿರುವ ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಭಾಗದ ರೈತರ ನೆರವಿಗೆ ಸರ್ಕಾರ ಧಾವಿಸಿದ್ದು, ೨ ಸಾವಿರ ಕೋಟಿ ರೂ.ಗೂ ಅಧಿಕ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಮೂಲಕ ಸಂಕಷ್ಟದಲ್ಲಿರುವ ನೆರೆ ಪೀಡಿತರ ಮತ್ತು ಕೃಷಿಕರ ಕಣ್ಣೀರು ಒರೆಸುವ ಪ್ರಯತ್ನ ಮಾಡಿದೆ.
ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ನಿಯಮದಂತೆ ನೀಡುವ ಪರಿಹಾರದ ಜತೆಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದ ಪ್ರತಿ ಹೆಕ್ಟೇರ್‌ಗೆ ೮,೫೦೦ ರೂ. ವಿಶೇಷ ಪರಿಹಾರ ನೀಡಲು ನಿರ್ಧರಿಸಿದೆ. ಗ್ಯಾರಂಟಿ ಯೋಜನೆಗಳ ಹೊರೆಯ ನಡುವೆಯೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ಸಂತ್ರಸ್ಥರಿಗೆ ಒಂದಿಷ್ಟು ಅನುವು ಮಾಡಿಕೊಡಲು ಮುಂದಾಗಿದೆ.ಪ್ರವಾಹ ಪೀಡಿತ ಪ್ರದೇಶದಲ್ಲಿನ ತೊಂದರೆಗಳನ್ನು ಕಣ್ಣಾರೆ ಕಂಡು ಮರುಗಿದ ಸಿಎಂ ಮಹತ್ವದ ಹೆಜ್ಜೆ ಇರಿಸಿದಂತಾಗಿದೆ.
ಭೀಮಾ, ಕಾಗಿಣಾ,ಮಾಂಜ್ರಾ ನದಿಗಳ ಪ್ರವಾಹದಿಂದ ತತ್ತರಿಸಿರುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸಚಿವರ ಜತೆಗೂಡಿ ವೈಮಾನಿಕ ಸಮೀಕ್ಷೆ ಕೈಗೊಂಡ ನಂತರ ನಗರದ ವಿಕಾಸ ಸೌಧದಲ್ಲಿ ಸಚಿವರು,ಶಾಸಕರು,ಅಧಿಕಾರಿಗಳ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಪರಿಹಾರ ಪ್ಯಾಕೇಜ್‌ನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಕಟಿಸಿ, ಸರ್ಕಾರ ಸದಾ ರೈತರು ಹಾಗೂ ಸಂತ್ರಸ್ಥರ ಜತೆಗಿರಲಿದೆ ಎಂದು ಅಭಯ ನೀಡಿದರು.
ಪ್ರಾಥಮಿಕ ಮಾಹಿತಿಯಂತೆ ಪ್ರವಾಹದಿಂದ ನಾಲ್ಕು ಜಿಲ್ಲೆಗಳಲ್ಲಿ ಬೆಳೆ ಹಾನಿ ಅನುಭವಿಸಿರುವ ಖುಷ್ಕಿ ಜಮೀನಿಗೆ ಎನ್‌ಡಿಆರ್ ನಿ೧೭,೦೦೦ ರೈತರಿಗೆ, ನೀರಾವರಿ ಆಶ್ರಿತ ೨೫,೫೦೦ ರೈತರಿಗೆ ಹಾಗೂ ೩೧ ಸಾವಿರ ಬಹುವಾರ್ಷಿಕ ಬೆಳೆ ಬೆಳೆದಿದ್ದ ರೈತರು ಹೆಚ್ಚುವರಿ ಪರಿಹಾರ ಮೊತ್ತ ಪಡೆಯಲಿದ್ದಾರೆ. ನಿಖರವಾದ ಬೆಳೆ ಹಾನಿ ಮಾಹಿತಿ ಕಲೆ ಹಾಕಲು ಮಳೆ ಮತ್ತು ಪ್ರವಾಹ ಕಡಿಮೆಯಾದ ಬಳಿಕ ಮತ್ತೊಮ್ಮೆ ಜಂಟಿ ಸಮೀಕ್ಷೆ ನಡೆಸಲಾಗುವುದು. ವರದಿ ಬಂದ ನಂತರ ರೈತರಿಗೆ ಪರಿಹಾರ ವಿತರಣೆ ಮಾಡಲಾಗುವುದು ಎಂದರು. ಅಲ್ಲದೆ ಅತಿವೃಷ್ಟಿ ಹಾಗೂ ಮಹಾಪೂರದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ರೈತರು ಹಾಗೂ ಸಂತ್ರಸ್ಥರ ನೆರವಿಗೆ ಧಾವಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ಈ ಕುರಿತು ಪತ್ರ ಬರೆದು ಅಥವಾ ನಿಯೋಗ ತೆಗೆದುಕೊಂಡು ಹೋಗಿ ಪರಿಹಾರ ನೀಡುವಂತೆ ಕೋರಲಾಗುವುದು ಎಂದು ತಿಳಿಸಿದರು.