ಆರೋಗ್ಯ, ಶಿಕ್ಷಣ ಸೂಚ್ಯಂಕದಲ್ಲಿ ಉಡುಪಿ ಜಿಲ್ಲೆ ಕುಸಿತಕ್ಕೆ ಸಿಎಂ ಗರಂ

udp-1-cm 1
Published on

ಉಡುಪಿ: ಜಿಲ್ಲೆ 2015 ರಲ್ಲಿ ಆರೋಗ್ಯ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿತ್ತು. ಈಗ 19ನೇ ಸ್ಥಾನದಲ್ಲಿದೆ. ಶೈಕ್ಷಣಿಕ ಸೂಚ್ಯಂಕದಲ್ಲಿ 2ನೇ ಸ್ಥಾನದಿಂದ 14ನೇ ಸ್ಥಾನಕ್ಕೆ ಕುಸಿದಿದೆ. ಈ ಎರಡೂ ಕ್ಷೇತ್ರದಲ್ಲಿ ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೆ ತರದಿದ್ದರೆ ಡಿಎಚ್​ಒ ಮತ್ತು ಡಿಡಿಪಿ
ಅಮಾನತು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳವಾರ ಜಿಪಂ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಯಂದಿರು ಮತ್ತು ಮಕ್ಕಳ ಸಾವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. 2015ರಲ್ಲಿ 14 ಮಂದಿ ಗರ್ಭಿಣಿಯರು ಹಾಗೂ 51 ಮಕ್ಕಳು ಮೃತಪಟ್ಟಿದ್ದರು. 2022&23ನೇ ಸಾಲಿನಲ್ಲಿ 53 ಮಹಿಳೆಯರು ಹಾಗೂ 126 ಮಕ್ಕಳು ಸಾವನ್ನಪ್ಪಿದ್ದಾರೆ. ಉಡುಪಿ ಸುಶಿಕ್ಷಿತರ ಜಿಲ್ಲೆ. ನಿಜೆಪಿ ಸರ್ಕಾರ ದುರಾಡಳಿತದಿಂದಾಗಿ ಆರೋಗ್ಯ ಸೂಚ್ಯಂಕದಲ್ಲಿ ಈ ಪ್ರಮಾಣದ ಕುಸಿತ ಕಂಡಿದೆ ಎಂದು ಅರೋಪಿಸಿದರು.

ಜುಲೈನಲ್ಲಿ ಶೇ.25ರಷ್ಟು ಹೆಚ್ಚು ಮಳೆ
ಜೂನ್​ ತಿಂಗಳಲ್ಲಿ ವಾಡಿಕೆ ಮಳೆ 1106 ಮಿಮೀ ಆಗಿದ್ದು, 519 ಮಿಮೀ ಮಳೆಯಾಗಿತ್ತು. ಜುಲೈಯಲ್ಲಿ ವಾಡಿಕೆ ಮಳೆ 1444 ಮಿಮೀ. ಅದರೆ 1805 ಮಿಮೀ ಮಳೆ ಸುರಿದಿದ್ದು, ಶೇ.25ರಷ್ಟು ಹೆಚ್ಚುವರಿ ಮಳೆಯಾಗಿದೆ. ಮಳೆ ಹಾನಿಗೆ ಸಂಬಂಧಪಟ್ಟಂತೆ ಸ್ಥಳಕ್ಕೆ ಭೇಟಿ ನೀಡಿ ಸಂಪೂರ್ಣ ಸಮೀಕ್ಷೆ ನಡೆಸಿ ಬೆಳೆ ಹಾನಿಗೊಳಗಾದವರಿಗೆ ಪರಿಹಾರ ಸಿಗಬೇಕು. ಬೆಳೆ ಹಾನಿಯಾದವರಿಗೆ ಪರ್ಯಾಯ ಬೆಳೆ ಬೆಳೆಯಲು ಪ್ರೋತ್ಸಾಹಿಸಬೇಕು. ಇದಕ್ಕೆ ಅಗತ್ಯವಾದ ಬೀಜ, ಗೊಬ್ಬರ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಒದಗಿಸಲು ಸೂಚಿಸಲಾಗಿದೆ. ಈವರೆಗೆ ಶೇ.79ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ಬೀಜ, ಗೊಬ್ಬರ ಕೊರತೆಯಾಗಿಲ್ಲ ಎಂದು ತಿಳಿಸಿದರು.

ಮುಂಗಾರಿಗೆ 10 ಮಂದಿ ಬಲಿ
ಜಿಲ್ಲೆಯಲ್ಲಿ ಈವರೆಗೆ ಪ್ರಾಕೃತಿಕ ವಿಕೋಪದಿಂದ 10 ಮಂದಿ ಪ್ರಾಣ ಕಳೆದುಕೊಂಡಿದ್ದು, 1 ಜಾನುವಾರು ಸಾವನ್ನಪ್ಪಿದೆ. ಮೃತರ ಕುಟುಂಬಳಿಗೆ ಪರಿಹಾರ ವಿತರಿಸಲಾಗಿದೆ. ಮಳೆ ಅನಾಹುತಗಳಲ್ಲಿ ಪೂರ್ಣ ಮನೆ ಹಾನಿ ಆಗಿದ್ದರೆ 5 ಲಕ್ಷ ರೂ. ಪರಿಹಾರ ನೀಡಬೇಕು. ಮನೆ ಸ್ವಂತ ಜಾಗದಲ್ಲಿ ಕಟ್ಟಿದ್ದಾರೋ-ಇಲ್ಲವೋ, ಹಕ್ಕು ಪತ್ರ ಇದೆಯೋ -ಇಲ್ಲವೋ ಎನ್ನುವುದನ್ನು ನೋಡದೆ ಮಳೆಯಿಂದ ಬಿದ್ದ ಮನೆಗೆ ಪರಿಹಾರ ನೀಡಬೇಕು. ಮೊದಲು ಮನೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ರಸ್ತೆ ಗುಂಡಿಗಳಿಂದ ಅಪಘಾತ ಮತ್ತು ಸಾವುಗಳ ಪ್ರಮಾಣ, ಸೈಬರ್​ ಅಪರಾಧ ಹೆಚ್ಚಳವಾಗಿದೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಉಸ್ತುವಾರಿ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್​, ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿಪಂ ಸಿಇಒ ಪ್ರಸನ್ನ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net