

ಕೊಪ್ಪಳ: ರಾಜ್ಯದ ಜನ 130ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿದ್ದಾರೆ. ಐದು ವರ್ಷ ನಾವು ಅಧಿಕಾರದಲ್ಲಿರುತ್ತೇವೆ. ಪೂರ್ಣಗೊಂಡ ನಂತರ ಚುನಾವಣೆ ಬಂದಾಗ ಮತ್ತೆ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯವರು ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ನಮ್ಮ ಸರ್ಕಾರ ಬೀಳಿಸುವ ಹಗಲು ಕನಸು ಕಾಣುತ್ತಿದ್ದಾರೆ. ನಾವು ಐದು ವರ್ಷ ಅಧಿಕಾರ ಪೂರ್ಣಗೊಳಿಸುತ್ತೇವೆ. ಐದು ಗ್ಯಾರಂಟಿ ಈಡೇರಿಸಿದ್ದೇವೆ. ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ.
ಮಾಜಿ ಸಿಎಂ ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆದಿದ್ದಾರೆ. ರಮೇಶ ಜಾರಕಿಹೊಳಿ ಸೋತು ಮನೆಯಲ್ಲಿದ್ದಾರೆ. ಅವರ ಹೇಳಿಕೆಗೆ ಪ್ರತಿಕ್ರಿಯಿಸಲಾರೆ ಎಂದು ಗುರುವಾರ ಬಸಾಪುರ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ಮಲತಾಯಿ ಧೋರಣೆ ಅನುಸರಿಸುತ್ತಿದೆ. ನಮ್ಮ ಮಂತ್ರಿಗಳನ್ನು ಭೇಟಿ ಮಾಡಲು ಪಿಎಂ ಅವಕಾಶ ನೀಡಿಲ್ಲ. ನಾನು ಪತ್ರ ಬರೆದು ತಿಂಗಳಾದರೂ ಉತ್ತರಿಸಿಲ್ಲ.
17,900 ಕೋಟಿ ರೂ. ಬರ ಪರಿಹಾರ, 600 ಕೋಟಿ ರೂ. ನರೇಗಾ ಬಾಕಿ ಬಿಡುಗಡೆಯಾಗಿಲ್ಲ. ಕುಡಿವ ನೀರು ಸೇರಿ ಇತರ ಪರಿಹಾರಕ್ಕೆ 900 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ.
ಮೊದಲಿನಂತೆ ರೈತರ ಕೃಷಿ ಪಂಪ್‌ಸೆಟ್‌ಗೆ ಪೂರಕ ಸೌಲಭ್ಯ ಮುಂದುವರಿಸಲಾಗುವುದು. ಬಿಜೆಪಿಯವರು ರಾಜಕೀಯಕ್ಕಾಗಿ ಬರ ಅಧ್ಯಯನ ಪ್ರವಾಸ ಮಾಡುವುದಾಗಿ ಹೇಳುತ್ತಿದ್ದಾರೆ.
ಅದರ ಬದಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ರಾಜ್ಯಕ್ಕೆ ಪರಿಹಾರ ಕೊಡಿಸಲಿ ಎಂದು ಆಗ್ರಹಿಸಿದರು.
ಸರ್ಕಾರದಿಂದ ಯಾವುದೇ ಶಾಸಕರನ್ನು ಪ್ರವಾಸಕ್ಕೆ ಕಳಿಸಿಲ್ಲ. ಅವರ ಹಣದಲ್ಲಿ ಹೋಗುತ್ತಿದ್ದಾರೆ. ಶಾಸಕರನ್ನು ನಿಗಮ, ಮಂಡಳಿಗೆ ನೇಮಿಸುವುದು ಹಾಗೂ ಲೋಕಸಭೆ ಚುನಾವಣೆ ಕುರಿತು ನಮ್ಮ ನಾಯಕರಾದ ಸುರ್ಜೇವಾಲಾ ಹಾಗೂ ಕೆ.ಸಿ.ವೇಣುಗೋಪಾಲ ಅವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು.