ಸಿದ್ದು ಬಜೆಟ್ ಮೇಲೆ ನಿರೀಕ್ಷೆ ಅಪಾರ

26raju1
Published on

ಚಾಮರಾಜನಗರ: ಗಡಿ ಜಿಲ್ಲೆ, ಜಾನಪದದ ತವರೂರು, ಅಗಾಧ ಅರಣ್ಯ ಸಂಪತ್ತನ್ನು ಒಳಗೊಂಡಿರುವ ಚಾಮರಾಜನಗರಕ್ಕೆ ಈ ಸಲದ ರಾಜ್ಯ ಬಜೆಟ್‌ನಲ್ಲಿ ಸಿಗುವ ಕೊಡುಗೆಗಳ ಕುರಿತು ಜನರು ಸಾಗರದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಹಲವು ಗೊಂದಲಗಳ ನಡುವೆ ಈ ಬಾರಿಯ ಬಜೆಟ್ ಗಮನ ಸೆಳೆದಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಕೊಟ್ಟಿದ್ದರು. ಅದರಂತೆಯೇ ಈ ಸಲವೂ ವಿಶೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯ ಕೇಳಿಬರುತ್ತಿದೆ.

ಶೇ.50 ರಷ್ಟು ಅರಣ್ಯ ಪ್ರದೇಶವನ್ನು ಒಳಗೊಂಡಂತೆ, 2 ಹುಲಿ ಸಂರಕ್ಷಿತ ಪ್ರದೇಶ, 2 ವನ್ಯಜೀವಿಧಾಮ ಹಾಗೂ ಹಲವು ಪ್ರೇಕ್ಷಣಿಯ ಸ್ಥಳಗಳನ್ನು ಹೊಂದಿರುವ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಬೇಕು. ರೈತಾಪಿ ವರ್ಗಕ್ಕೆ ಪೂರಕವಾಗುವಂತೆ ಹೊಸ ಯೋಜನೆಗಳ ೋಷಣೆಯ ಜತೆಗೆ, ಜಿಲ್ಲೆಯಾದ್ಯಂತ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ ಮಾಡಬೇಕಿದೆ.

ಜಿಲ್ಲೆಯಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆಯಾಗಬೇಕು. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ, ಮೂಲಸೌಕರ್ಯ ಕೊರತೆ ನೀಗಿಸಬೇಕು. ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಕಾಡಂಚಿನ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕು ಎಂಬ ಹಲವು ಆಗ್ರಹದ ಜತೆಗೆ ಬಹುನಿರೀಕ್ಷೆಗಳನ್ನು ಈ ಬಾರಿಯ ಕಾಂಗ್ರೆಸ್ ಸರ್ಕಾರದ ಬಜೆಟ್ ಮೇಲೆ ಜನರು ಇಟ್ಟುಕೊಂಡಿದ್ದು, ಈ ಕುರಿತು ‘ಲೌಡ್ ಸ್ಪೀಕರ್’ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಪ್ರವಾಸೋದ್ಯಮಕ್ಕೆ ಅನುದಾನ ನೀಡಿ
ಚಾಮರಾಜನಗರ ಜಿಲ್ಲಾ ಕೇಂದ್ರವಾಗಿದ್ದರೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಬಿ.ರಾಚಯ್ಯ ಜೋಡಿ ರಸ್ತೆ ಮಳೆ ಬಂದರೆ ಕೆರೆಯಂತಾಗುತ್ತದೆ. ಈ ನಿಟ್ಟಿನಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲಾ ಕೇಂದ್ರ ಅಭಿವೃದ್ಧಿಗೆ ವಿಶೇಷ ಅನುದಾನ ೋಷಣೆ ಮಾಡಬೇಕು. ಜಿಲ್ಲಾ ಕೇಂದ್ರದ ಸಮೀಪದಲ್ಲೇ ಸುವರ್ಣಾವತಿ, ಚಿಕ್ಕಹೊಳೆ ಜಲಾಶಯಗಳಿದ್ದು ಇದರ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಿ ಪ್ರವಾಸೋದ್ಯಮ ಕೇಂದ್ರವಾಗಿಸಬೇಕು. ಬೇಡಗುಳಿ, ಅತ್ತಿಖಾನೆ, ಹೊನ್ನಮೇಟಿ ಹಾಗೂ ಇನ್ನಿತರೆ ಕಾಡಂಚಿನ ಪ್ರದೇಶಗಳನ್ನು ಪ್ರವಾಸಿಗರಿಗೆ ಮುಕ್ತವಾಗಿಸಿ ಪ್ರವಾಸೋದ್ಯಮಕ್ಕೆ ಬೂಸ್ಟ್ ನೀಡಬೇಕು.
-ಬಸವರಾಜು, ಚಾಮರಾಜನಗರ

ವಿಶ್ವವಿದ್ಯಾಲಯಕ್ಕೆ ವಿಶೇಷ ಅನುದಾನ ನೀಡಿ
ಜಿಲ್ಲೆಯಲ್ಲಿ ಪದವಿ ಪಡೆದಿರುವ ವಿದ್ಯಾವಂತರು ಹೆಚ್ಚಿನ ಪ್ರಮಾಣದಲ್ಲಿದ್ದು, ಅವರಿಗೆ ಉದ್ಯೋಗ ಸೃಷ್ಟಿಸಬೇಕು. ಕಾನೂನು ಕಾಲೇಜು ಮತ್ತು ಚಾಮರಾಜನಗರ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅನುದಾನ ನೀಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ವಿದ್ಯಾರ್ಥಿ ವೇತನದ ಗೊಂದಲಗಳನ್ನು ನೀಗಿಸಬೇಕು.

-ಶಿವಶಂಕರ್ (ಚಟ್ಟು) ಚಾಮರಾಜನಗರ

ಸಮಗ್ರ ಅಭಿವೃದ್ಧಿಗೆ ಪೂರಕವಾಗಿರಲಿ
ರಾಜ್ಯದಲ್ಲೇ ಅತ್ಯಂತ ಚಿಕ್ಕ ತಾಲೂಕು ಎಂದು ಕರೆಸಿಕೊಳ್ಳುವ ಯಳಂದೂರಿನಲ್ಲಿ ತಾಲೂಕು ಆಸ್ಪತ್ರೆ, ಅಗ್ನಿಶಾಮಕ ಠಾಣೆ, ಒಳಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಒತ್ತು ನೀಡಬೇಕು. ತಾಲೂಕಿನ ಇತಿಹಾಸ ಪ್ರಸಿದ್ಧ ಬಿಳಿಗಿರಿರಂಗನ ಬೆಟ್ಟದ ದೇವಾಲಯದ ಅಭಿವೃದ್ಧಿಗೆ ಆದ್ಯತೆ ನೀಡಿ, ಸಮಗ್ರ ಅಭಿವೃದ್ಧಿಗೆ ಪೂರಕ ಬಜೆಟ್ ಮಂಡನೆಯಾಗಬೇಕು.
-ಜೆ.ಶ್ರೀನಿವಾಸ್ ಯಳಂದೂರು

ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಲಿ
ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಕ್ರೀಡಾಂಗಣ, ಗ್ರಂಥಾಲಯ, ಸೇರಿದಂತೆ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ಮೀಸಲಿರಿಸಬೇಕು. ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಈ ಭಾಗದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಯೋಜನೆ ಜಾರಿಯಾಗಲಿ.
-ವರ್ಷಿತಾ ವಿದ್ಯಾರ್ಥಿನಿ ಯಳಂದೂರು

ಇಂದಿರಾ ಕ್ಯಾಂಟಿನ್ ತೆರೆಯಲಿ
ಹೆಚ್ಚು ಬಡವರ್ಗದ ಜನರು ವಾಸಿಸುವ ತಾಲೂಕು ಕೇಂದ್ರದಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ತೆರೆಯಬೇಕು. ಪಿಡಬ್ಯ್ಯುಡಿ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಬೇಕು. ಮೇಕೆದಾಟು ಯೋಜನೆ ಅನುಷ್ಠಾನವಾಗಬೇಕು. ಕಳೆದ ಬಾರಿ ಕ್ಷೇತ್ರಕ್ಕೆ ಯಾವುದೇ ಅನುದಾನ ನೀಡಿಲ್ಲ. ಈ ಬಾರಿಯಾದರೂ ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡಬೇಕು.

-ನಟರಾಜು ಹನೂರು

ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಬೇಕು
ಹನೂರು ಕ್ಷೇತ್ರ ಹೆಚ್ಚು ವಿಸ್ತಾರವನ್ನು ಹೊಂದಿದೆ. ಈ ಭಾಗದ ಜನರಿಗೆ ಸಮರ್ಪಕ ಆರೋಗ್ಯ ಸೇವೆ ದೊರಕುತ್ತಿಲ್ಲ. ಹಾಗಾಗಿ, ಹನೂರು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು. ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೈಗಾರಿಗಳ ಸ್ಥಾಪನೆಗೆ ಆದ್ಯತೆ ನೀಡಬೇಕು. ಈ ಬಜೆಟ್‌ನಲ್ಲಿ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು.
-ಹೊಂಬೇಗೌಡ ನಿವೃತ್ತ ಗ್ರಾಮಲೆಕ್ಕಿಗ, ಹನೂರು

ಗ್ರಾಮೀಣ ಪ್ರದೇಶ ಅಭಿವೃದ್ಧಿ ಮಾಡಿ
ಹಿಂದುಳಿದ ತಾಲೂಕಿನ ಗ್ರಾಮಾಂತರ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಎರಡು ರಾಜ್ಯಗಳ ಗಡಿಯಲ್ಲಿರುವುದರಿಂದ ರಸ್ತೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ದಿನೇ ದಿನೆ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣವನ್ನು ಇನ್ನೂ ಹೆಚ್ಚಿನ ಅನುದಾನದಿಂದ ಅಭಿವೃದ್ಧಿಗೊಳಿಸುವ ಜತೆಗೆ ಯುವಜನತೆಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಬೇಕು.
-ಎಸ್.ರಘು ಉದ್ಯಮಿ, ಗುಂಡ್ಲುಪೇಟೆ

ರೈತರ ಸ್ವಾವಲಂಬನೆಗೆ ಕ್ರಮವಹಿಸಲಿ
ಕಾಂಗ್ರೆಸ್ ಸರ್ಕಾರದ ಘೋಷಣೆಯಂತೆ ಜಿಲ್ಲೆಗೆ ಅರಣ್ಯ ಸಂಶೋಧನಾ ಕೇಂದ್ರ ಮಂಜೂರು ಮಾಡಿ, ಅರಣ್ಯ ಉತ್ಪನ್ನಗಳನ್ನು ಬಳಕೆ ಮಾಡಲು ಅವಕಾಶ ನೀಡಬೇಕು. ಮಳೆಯ ನೆರಳಿನ ಪ್ರದೇಶದಲ್ಲಿರುವ ತಾಲೂಕಿನಲ್ಲಿ ಅಪೂರ್ವ ಅರಣ್ಯ ಸಂಪತ್ತಿರುವುದರಿಂದ ಮರ ಆಧಾರಿತ ಕೃಷಿ ಮೂಲಕ ರೈತರ ಸ್ವಾವಲಂಬನೆಗೆ ಕ್ರಮಕೈಗೊಳ್ಳಬೇಕು.
-ಎಸ್.ಎಂ.ನಾಗಾರ್ಜುನಕುಮಾರ್ ಪ್ರಗತಿಪರ ರೈತ, ಗುಂಡ್ಲುಪೇಟೆ

ಸ್ಥಳಿಯರಿಗೆ ಉದ್ಯೋಗ ದೊರೆಯುವಂತಾಗಲಿ
ಕೊಳ್ಳೇಗಾಲ ಭಾಗದಲ್ಲಿ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಿ ಇಲ್ಲಿಯ ಸ್ಥಳೀಯರಿಗೆ ಉದ್ಯೋಗ ಅವಕಾಶ ಮಾಡಿಕೊಡಬೇಕು. ಈ ಭಾಗದ ರೈತರ ಜೀವನಾಡಿಯಾದ ರೇಷ್ಮೆ ಬೆಳೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ವಿಶೇಷ ಅನುದಾನ ನೀಡಿ, ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮವಹಿಸಲಿ.
-ಸುದೀಪ್ ವಿದ್ಯಾರ್ಥಿ, ಸರ್ಕಾರಿ ಶ್ರೀಮಹದೇಶ್ವರ ಪ್ರಥಮ ದರ್ಜೆ ಕಾಲೇಜು, ಕೊಳ್ಳೇಗಾಲ

ಕಾಡಂಚಿನ ಗ್ರಾಮಗಳ ಅಭಿವೃದ್ಧಿಯಾಗಲಿ
ಕೊಳ್ಳೇಗಾಲಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕಿದೆ. ಕೆರೆಗಳ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿರಿಸಬೇಕು. ಗಡಿ ಪ್ರದೇಶದಲ್ಲಿರುವ ಕಾಡಂಚಿನ ಕುಗ್ರಾಮಗಳಿಗೆ ರಸ್ತೆ, ವಿದ್ಯುತ್, ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಸುಲಭವಾಗಿ ಒದಗಿಸಲು ಈ ಸಾಲಿನ ಆಯವ್ಯಯ ಹೆಚ್ಚಿನ ಅನುದಾನ ನೀಡಬೇಕು.
-ರೂಪಾ ತೋಟೇಶ್ ಅಧ್ಯಕ್ಷೆ ಕದಳಿ ವೇದಿಕೆ, ಕೊಳ್ಳೆಗಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net