ಜೆಡಿಎಸ್​ಗೆ ತತ್ವ, ಸಿದ್ಧಾಂತ ಇಲ್ಲ

CM NEWS
Published on

ಹುಬ್ಬಳ್ಳಿ : ಜಾತ್ಯಾತೀತ ಪಕ್ಷವಾಗಿರುವ ಜೆಡಿಎಸ್, ಅಧಿಕಾರಕ್ಕಾಗಿ ಕೋಮುವಾದಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದರೆ ಆ ಪಕ್ಷಕ್ಕೆ ಯಾವುದೇ ತತ್ವ, ಸಿದ್ಧಾಂತ ಇಲ್ಲ ಎಂಬುದು ಗೋಚರಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶನಿವಾರದಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ಈ ಹಿಂದೆ ನಾನು ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಮ್ ಎಂದು ಕರೆದಾಗಲೆಲ್ಲ ಜೆಡಿಎಸ್ ಮುಖಂಡರು ಕೋಪಗೊಳ್ಳುತ್ತಿದ್ದರು. ಆದರೆ, ನನ್ನ ಮಾತು ಇದೀಗ ನಿಜವಾಗಿದೆ ಎಂದರು.

ಬರಗಾಲದ ನಿಯಮಗಳು ಪ್ರತಿ 2 ವರ್ಷಕ್ಕೊಮ್ಮೆ ಬದಲಾಗಬೇಕು. ನಿಯಮ ಬದಲಾಯಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಆದರೆ, ಕೇಂದ್ರದಿಂದ ಇದುವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದರು.

ಮಹದಾಯಿ, ಕಾವೇರಿ, ಮೇಕೆದಾಟು, ಬರಗಾಲ ಹಾಗೂ ಮತ್ತಿತರ ವಿಷಯಗಳ ಕುರಿತು ಸರ್ವಪಕ್ಷಗಳ ಸಭೆ ಕರೆದು ರ್ಚಚಿಸಿದ್ದೇನೆ. ಈ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ರ್ಚಚಿಸಲು ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿತ್ತು. ಸರ್ವಪಕ್ಷ ನಿಯೋಗಕ್ಕೆ ಸಮಯ ನೀಡುವಂತೆ ಮೂರು ವಾರಗಳ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅದಕ್ಕೂ ಇದುವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದು ಅಸಮಾಧಾನ ತೋಡಿಕೊಂಡರು.

ಮಹದಾಯಿ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ಧ ಇದೆ. ಆದರೆ, ಕೇಂದ್ರ ಸರ್ಕಾರ ಅರಣ್ಯ ಮತ್ತು ಪರಿಸರದ ಕ್ಲಿಯರೆನ್ಸ್ ನೀಡುತ್ತಿಲ್ಲ. ರಾಜ್ಯ ಸರ್ಕಾರ ಎಲ್ಲ ರೀತಿಯ ಸಭೆ ನಡೆಸಿದೆ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು ? ಎಂದು ಪ್ರಶ್ನಿಸಿದರು.

ಜಿ-20 ಶೃಂಗಸಭೆಯ ಔತಣಕೂಟಕ್ಕೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸಬೇಕಿತ್ತು. ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಷ್ಟೇ ಅಲ್ಲದೇ, ಅಧಿಕೃತ ಪ್ರತಿಪಕ್ಷ ನಾಯಕರು. ಅವರನ್ನು ಆಹ್ವಾನಿಸದೇ ಕೇಂದ್ರ ಸರ್ಕಾರ ತಪು್ಪ ಮಾಡಿದೆ. ಔತಣಕೂಟಕ್ಕೆ ನನಗೂ ಆಹ್ವಾನ ಇದೆ. ಆದರೆ, ಪರ್ಯಾಯ ಕೆಲಸ ಇರುವುದರಿಂದ ಪಾಲ್ಗೊಳ್ಳುತ್ತಿಲ್ಲ ಎಂದು ತಿಳಿಸಿದರು.

ನನಗೆ ರಾಷ್ಟ್ರ ರಾಜಕಾರಣದಲ್ಲಿ ಯಾವುದೇ ರೀತಿಯ ಆಸಕ್ತಿ ಇಲ್ಲ ಎಂದು ಪುನರುಚ್ಛಿಸಿದ ಸಿಎಂ ಸಿದ್ದರಾಮಯ್ಯ, ಕೆಲವರು ಅಭಿಮಾನದಿಂದ ನಾನು ರಾಷ್ಟ್ರ ರಾಜಕಾರಣದಲ್ಲಿ ಪಾಲ್ಗೊಳ್ಳಬೇಕೆಂದು ಅಭಿಪ್ರಾಯಪಡುತ್ತಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net