

ಶಿರಸಿ: ಮಂಗನ ಕಾಯಿಲೆಯಿಂದ ಮರಣ ಹೊಂದಿದವರಿಗೆ ಅರಣ್ಯ ಇಲಾಖೆ ವತಿಯಿಂದ ಪರಿಹಾರ ನೀಡುವ ಕುರಿತಂತೆ ಚರ್ಚೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಇಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಂಗನ ಕಾಯಿಲೆಯಿಂದ ಐದು ಜನ ಸತ್ತಿದ್ದಾಗಿ ವರದಿಯಾಗಿದೆ. ಕಾಯಿಲೆ ಗಂಭೀರ ಪರಿಣಾಮ ಪಡೆದುಕೊಳ್ಳುತ್ತಿದ್ದು, ಅದನ್ನು ತಡೆಯಲು ಲಸಿಕೆ ವ್ಯವಸ್ಥೆ ಮಾಡುವ ಬಗ್ಗೆ ಚಿಂತಿಸಲಾಗುವುದು ಎಂದರು.
ಅಡಕೆ ಎಲೆ ಚುಕ್ಕೆ ರೋಗಕ್ಕೆ ಪರಿಹಾರ ನಾನು ಹಿಂದೆ ಸಿಎಂ ಆಗಿದ್ದಾಗ ನೀಡಿದ್ದೆ. ನಡುವೆ ಸರ್ಕಾರ ಪರಿಹಾರ ಸ್ಥಗಿತ ಮಾಡಿತು. ಎಲೆ ಚುಕ್ಕೆ ರೋಗ ತಡೆಯಲು ಕ್ರಮ ವಹಿಸಬೇಕು. ಹಾಗೂ ಹಾನಿಗೆ ಪರಿಹಾರ ಕೊಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.
ಪಾಕ್ ಪರ ಘೋಷಣೆ ವಿಚಾರವಾಗಿ ಮಾತನಾಡಿದ ಸಿಎಂ ಖಾಸಗಿ ಸಂಸ್ಥೆಗಳು ನೀಡುವ ಖಾಸಗಿ ಎಫ್ ಎಸ್ ಎಲ್ ವರದಿಯನ್ನು ಸರ್ಕಾರ ಒಪ್ಪುವುದಿಲ್ಲ, ಪೊಲೀಸ್ ಇಲಾಖೆ ನೀಡುವ ವರದಿಯೇ ಅಧಿಕೃತ ಎಂದರು.
ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಅಧ್ಯತೆಯಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ 854 ಕೋಟಿ ರೂ ಪಿಡಿ ಖಾತೆಯಲ್ಲಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಉಚಿತ ಸಹಾಯವಾಣಿ ಆರಂಭಿಸಲಾಗುವುದು. ಸಚಿವರು ಮತ್ತು ಶಾಸಕರ ಅಧ್ಯಕ್ಷತೆ ಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಗಳನ್ನು ನಡೆಸುವಂತೆ ಸೂಚನೆ ನೀಡಲಾಗಿದೆ. ಪ್ರತೀ ವಾರಕ್ಕೊಮ್ಮೆ ಪಿಡಿಒ ಗಳು ಮತ್ತು ವಿಎ ಗಳ ಸಭೆ ನಡೆಸುವಂತೆ ಸೂಚನೆ ನೀಡಲಾಗಿದೆ. ಈ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಡಿಸಿ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.