ಅಭಿವೃದ್ಧಿ ಜನಪ್ರತಿನಿಧಿಗಳ ಕರ್ತವ್ಯ ; ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ

IMG-20230811-WA0050.jpg
Published on

ಬೆಳಗಾವಿ : ರಾಜ್ಯದಲ್ಲಿ ಪಶು ಸಂಪತ್ತು ಅಧಿಕವಾಗಿದ್ದು, ಪಶು ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯಿಂದ ಜಾನುವಾರು ಆರೋಗ್ಯ ರಕ್ಷಣೆ ಜತೆಗೆ ಕೃಷಿ ಅಭಿವೃದ್ಧಿಗೆ ಪೂರಕವಾಗಲಿದೆ. ಆಯಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಿದೆ. ಅಥಣಿ ಮತಕ್ಷೇತ್ರಕ್ಕೆ ಶಾಸಕ ಲಕ್ಷ್ಮಣ ಸವದಿ ಅವರ ಕೊಡುಗೆ ಅಪಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರಿನಲ್ಲಿ ಶುಕ್ರವಾರ ಪಶುವೈದ್ಯಕೀಯ ಮಹಾವಿದ್ಯಾಲಯ ಲೋಕಾರ್ಪಣೆಗೊಳಿಸಿ ವಿವಿಧ ಅಭಿವೃದ್ಧಿ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಅಥಣಿ ಸೇರಿ ಜಿಲ್ಲೆಯ ನೀರಾವರಿ ಯೋಜನೆ ಅನುಷ್ಠಾನ ಸೇರಿದಂತೆ ಎಲ್ಲಾ ಬೇಡಿಕೆ ಹಂತ ಹಂತವಾಗಿ ಈಡೇರಿಸಲಾಗುವುದು ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಅಥಣಿ ಹಾಗೂ ಕಾಗವಾಡ ಮತಕ್ಷೇತ್ರದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು. ಅಥಣಿ ಶಾಸಕರ ನೀರಾವರಿ ಯೋಜನೆಗಳ ಕನಸು ದೊಡ್ಡದಾಗಿವೆ. ಇಡೀ ಕ್ಷೇತ್ರದ ಜನರ ಬದುಕು ಹಸನಾಗಿಸಲು ಈ ಭಾಗದ ಜನರು ಮಾತ್ರವಲ್ಲ; ಜಾನುವಾರುಗಳ ಅನುಕೂಲಕ್ಕಾಗಿ ಪಶು ವೈದ್ಯಕೀಯ ಮಹಾವಿದ್ಯಾಲಯವನ್ನು ಸ್ಥಾಪಿಸುವ ಮೂಲಕ  ಸವದಿಯವರ ಕಳಕಳಿ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  

ಪಶುಸಂಗೋಪನೆ ಸಚಿವ ಕೆ.ವೆಂಕಟೇಶ ಮಾತನಾಡಿ, ರಾಜ್ಯದಲ್ಲಿಯೇ ಅತಿ ಹೆಚ್ಚು ಜಾನುವಾರು ಬೆಳಗಾವಿ ಜಿಲ್ಲೆಯಲ್ಲಿದ್ದು, ಹಾಲಿನ ಉತ್ಪಾದನೆಯೂ ಹೆಚ್ಚಿನ ಪ್ರಮಾಣದಲ್ಲಿದೆ. ಈ ಭಾಗದ ವಿದ್ಯಾರ್ಥಿಗಳಿಗೆ ಮತ್ತು ಜಾನುವಾರು ಸಾಕಿಕೊಂಡಿರುವ ರೈತ ಸಮುದಾಯಕ್ಕೆ  ಮಹಾವಿದ್ಯಾಲಯದಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.
 

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಮತ್ತಷ್ಟು ಮೂಲ ಸೌಕರ್ಯ ಒದಗಿಸಲಾಗುವುದು. ಅಥಣಿ ಭಾಗದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಲಾಗುವುದು. ಸಿಎಂ ಸಿದ್ದರಾಮಯ್ಯನ ಅವರ ಹಿಂದಿನ ಆಡಳಿತ ಅವಧಿಯಂತೆಯೇ ಅಭಿವೃದ್ಧಿ ಪಥದಲ್ಲಿ ಈಗಿನ ಸರ್ಕಾರವೂ ಸಾಗಲಿದೆ ಎಂದು ಹೇಳಿದರು.
 ಶಾಸಕ ಭರಮಗೌಡ ಕಾಗೆ ಮಾತನಾಡಿ, ನೂತನ ಕಾಗವಾಡ ತಾಲೂಕಿಗೆ ಸರಕಾರಿ ಕಚೇರಿಗಳು ಸೇರಿ ಎಲ್ಲ  ಮೂಲಸೌಕರ್ಯ ಒದಗಿಸಬೇಕು. ಕಾಗವಾಡ ತಾಲೂಕಿನ ಎರಡು ಹೋಬಳಿಗಳನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಸಚಿವರಾದ ಎನ್.ಎಸ್.ಭೋಸರಾಜ್, ರಾಮಲಿಂಗಾರೆಡ್ಡಿ, ಸರ್ಕಾರದ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕರಾದ ಭರಮಗೌಡ ಕಾಗೆ, ವಿಶ್ವಾಸ ವೈದ್ಯ, ಜೆ.ಟಿ.ಪಾಟೀಲ, ಮಹೇಂದ್ರ ತಮ್ಮಣ್ಣವರ, ಬಾಬಾಸಾಹೇಬ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ಚನ್ನರಾಜ ಹಟ್ಟಿಹೊಳಿ, ಕೊಕಟನೂರ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾನವ್ವ ಪೂಜಾರಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಪಂ ಸಿಇಒ ಹರ್ಷಲ್ ಭೋಯರ್, ಡಾ.ಕೆ.ಸಿ.ವೀರಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net