

ಮಂಡ್ಯ: ಸರ್ಕಾರದ ರಚನೆಯಾದ ಬಳಿಕ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅ.31ರಂದು ಮಂಡ್ಯ ನಗರಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಅದ್ಧೂರಿ ಸ್ವಾಗತ ನೀಡಲು ಕಾಂಗ್ರೆಸ್ಸಿಗರು ಸಜ್ಜಾಗಿದ್ದಾರೆ.
ಬೆಳಗ್ಗೆ 11.30ಕ್ಕೆ ಬೆಂಗಳೂರಿನಿಂದ ರಸ್ತೆ ಮೂಲಕ ಮಂಡ್ಯಕ್ಕೆ ಬರಲಿದ್ದಾರೆ. ಈ ವೇಳೆ ನಗರದ ಫ್ಯಾಕ್ಟರಿ ವೃತ್ತ ಹಾಗೂ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದರಂತೆ ಕಾಂಗ್ರೆಸ್ ನಾಯಕರು, ಮುಖಂಡರು ಮತ್ತು ಕಾರ್ಯಕರ್ತರನ್ನು ಆಹ್ವಾನಿಸಲಾಗಿದೆ.
ಮಧ್ಯಾಹ್ನ 12.30ಕ್ಕೆ ನಗರದ ಸುಮರವಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿರುವ ಅಂತರ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. 3ಗಂಟೆಗೆ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಸಿಎಂ ಅವರೇ ಪ್ರಗತಿ ಪರಿಶೀಲನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಪೂರ್ವಸಿದ್ಧತೆಯೊಂದಿಗೆ ಹಾಜರಾಗಲು ಭಾನುವಾರವೂ ಕೆಲಸ ನಿರ್ವಹಿಸಿ ಮಾಹಿತಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಮಾತ್ರವಲ್ಲದೆ ಜಿಲ್ಲೆಗೆ ಅಗತ್ಯವಿರುವ ಕಾರ್ಯಕ್ರಮವನ್ನು ಸಿಎಂ ಎದುರು ಮಂಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ವಿಶೇಷ ಘೋಷಣೆ ನಿರೀಕ್ಷೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಗೆಲುವನ್ನು ಜಿಲ್ಲೆಯ ಜನರು ಕಾಂಗ್ರೆಸ್‌ಗೆ ನೀಡಿದ್ದಾರೆ. ಏಳು ಸ್ಥಾನವನ್ನು ಕಳೆದುಕೊಂಡಿದ್ದ ಕಾಂಗ್ರೆಸ್‌ಗೆ ಈ ಬಾರಿ ಐದು ಹಾಗೂ ಬೆಂಬಲಿತ ಸೇರಿದಂತೆ ಆರು ಕ್ಷೇತ್ರದಲ್ಲಿ ಬೆಂಬಲ ನೀಡಿದ್ದಾರೆ. ಮೊದಲ ಬಜೆಟ್‌ನಲ್ಲಿಯೂ ನಿರೀಕ್ಷೆಗೆ ತಕ್ಕಂತೆ ಯೋಜನೆ ಘೋಷಣೆಯಾಗಿರಲಿಲ್ಲ. ಇದು ಟೀಕೆಗೆ ಕಾರಣವಾಗಿತ್ತು. ಮಾತ್ರವಲ್ಲದೆ ಕಾವೇರಿ ನೀರಿನ ವಿಚಾರದಲ್ಲಿಯೂ ರಾಜ್ಯಸರ್ಕಾರದ ನಡೆ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬರದಿಂದ ತತ್ತರಿಸುವ ಮಂಡ್ಯ ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ವಿಶೇಷ ಯೋಜನೆ ಅಥವಾ ಪ್ಯಾಕೇಜ್ ಘೋಷಣೆ ಮಾಡುವ ನಿರೀಕ್ಷೆ ಇದೆ.