ಚಾಮುಂಡಿಬೆಟ್ಟದಲ್ಲಿ ಸೆ.2 ರಂದು ಸಿಎಂ ಸಿದ್ದರಾಮಯ್ಯ ಸಭೆ : ಕುತೂಹಲ ಕೆರಳಿಸಿದ ಸಭೆ

siddu
Published on

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸೆ.2 ರಂದು ಚಾಮುಂಡಿಬೆಟ್ಟದ ದಾಸೋಹ ಭವನದಲ್ಲಿ ಪ್ರಾಧಿಕಾರದ ಸಭೆ ಕರೆದಿರುವುದು ಕುತೂಹಲ ಮೂಡಿಸಿದೆ.

ಬೆಂಗಳೂರಿನಿಂದ ಅಂದು ಬೆಳಗ್ಗೆ 11ಕ್ಕೆ ವಿಶೇಷ ವಿಮಾನ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಸಿದ್ದರಾಮಯ್ಯ ಬಳಿಕ 11.25ಕ್ಕೆ ಚಾಮುಂಡಿಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ. ಆ ನಂತರ 12.30ಕ್ಕೆ ಪ್ರಾಧಿಕಾರದ ಸಭೆ ನಡೆಸಿ ವಿಶೇಷ ವಿಮಾನ ಮೂಲಕ ಬೆಂಗಳೂರಿಗೆ ಸಂಜೆ 4.45ಕ್ಕೆ ತೆರಳಲಿದ್ದಾರೆ. ಪ್ರಾಧಿಕಾರದ ಸಭೆಯಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ಕುತೂಹಲ ಮೂಡಿಸಿದೆ.

mysore

ಪ್ರಾಧಿಕಾರ ರಚನೆಯನ್ನು ಆಕ್ಷೇಪಿಸಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಾಧಿಕಾರ ರಚನೆಗೆ ತಡೆಯಾಜ್ಞೆ ನೀಡಿತ್ತು. ‘ಚಾಮುಂಡಿಬೆಟ್ಟದ ದೇವಸ್ಥಾನ ನಮ್ಮ ಖಾಸಗಿ ಆಸ್ತಿಯಾಗಿದ್ದು, ಸರ್ಕಾರ ಪ್ರಾಧಿಕಾರ ರಚನೆ ಮಾಡಿರುವುದು ಸರಿಯಲ್ಲ. 1953ರಲ್ಲಿ ನಾವು ನಮ್ಮ ಖಾಸಗಿ ಆಸ್ತಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದೇವೆ. ಅದರಲ್ಲಿ ಚಾಮುಂಡಿ ಬೆಟ್ಟ ಸಹ ಸೇರಿದೆ. ಹೀಗಿರುವಾಗ ಸರ್ಕಾರ ನಮ್ಮ ಖಾಸಗಿ ಆಸ್ತಿಯಲ್ಲಿ ಪ್ರಾಧಿಕಾರ ರಚಿಸಲು ಹೇಗೆ ಸಾಧ್ಯ? ಬೆಟ್ಟದಲ್ಲಿರುವ ರಾಜೇಂದ್ರ ವಿಲಾಸ ಅರಮನೆ, ಚಾಮುಂಡೇಶ್ವರಿ ದೇವಾಲಯ, ಅದರ ಆಸುಪಾಸಿನ ಜಾಗ, ಮಹಾಬಲೇಶ್ವರ, ನಾರಾಯಣಸ್ವಾಮಿ, ಜ್ವಾಲಾಮುಖಿ ದೇವಸ್ಥಾನ, ದೇವಿಕೆರೆ, ನಂದಿ, 700 ಮೆಟ್ಟಿಲು, 3 ಪಂಪ್‌ಹೌಸ್ ಸೇರಿ ಇನ್ನೂ ಹಲವು ಜಾಗಗಳು ನಮ್ಮ ಖಾಸಗಿ ಆಸ್ತಿ’ ಎಂಬುದು ಪ್ರಮೋದೇವಿ ಒಡೆಯರ್ ಅವರ ಪ್ರತಿಪಾದನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net