ಅರಸೀಕೆರೆಗೆ 26ರಂದು ಸಿಎಂ ಸಿದ್ದರಾಮಯ್ಯ ಭೇಟಿ

22 Arasi 1
ಅರಸೀಕೆರೆ ಕಂದಾಯ ಭವನದಲ್ಲಿ ಆಯೋಜಿಸಿದ್ದ ಸಿಎಂ ಸಿದ್ದರಾಮಯ್ಯರಿಂದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಕೆ.ಎಂ.ಶಿವಲಿಂಗೇಗೌಡ ಮಾತನಾಡಿದರು. ಡಿಸಿ ಲತಾ ಕುಮಾರಿ, ಮಹಮ್ಮದ್ ಸುಜೀತಾ, ಪೂರ್ಣಿಮಾ, ಸಂತೋಷ್ ಕುಮಾರ್ ಇತರರು ಇದ್ದರು.
Published on

ಅರಸೀಕೆರೆ: ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು.26ರಂದು ತಾಲೂಕಿಗೆ ಭೇಟಿ ನೀಡಲಿದ್ದು, ಅಧಿಕಾರಿಗಳು ಸಿದ್ಧತೆ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ.ಶಿವಲಿಂಗೇಗೌಡ ಸೂಚನೆ ನೀಡಿದರು.

ತಾಲೂಕು ಕಚೇರಿ ಆವರಣದಲ್ಲಿರುವ ಕಂದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸರ್ಕಾರಿ ಇಂಜಿನಿಯರಿಂಗ್, ಡಿಪ್ಲೊಮಾ ಕಾಲೇಜು, ನಗರಸಭೆ ವತಿಯಿಂದ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳು ಸೇರಿದಂತೆ ಹಲವು ಕಟ್ಟಡಗಳನ್ನು ಉದ್ಘಾಟಿಸಲಿದ್ದಾರೆ. ಅಲ್ಲದೆ, ಬಸ್ ನಿಲ್ದಾಣ ವಿಸ್ತರಣೆ, ವಸತಿ ಶಾಲೆ, ಹೊಸ ರಸ್ತೆಗಳ ಗ್ರಾಮೀಣ ಭಾಗದಲ್ಲಿ ನಿರ್ಮಿಸಿರುವ ಸಮುದಾಯ ಭವನ, ಪತ್ರಕರ್ತರ ಕಚೇರಿ, ಎತ್ತಿನಹೊಳೆ ಕಾಮಗಾರಿ ಸೇರಿದಂತೆ ಜನಪರ ಕೆಲಸಗಳಿಗೆ ಚಾಲನೆ ದೊರೆಯಲಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹೊಣೆಗಾರಿಕೆಯನ್ನು ಅರಿತು ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಲತಾಕುಮಾರಿ ಮಾತನಾಡಿ, ಸರ್ಕಾರದ ವತಿಯಿಂದ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾಮಗಾರಿಗಳ ಫಲಕಗಳನ್ನು ಸಿದ್ಧಪಡಿಸಿ ಗೊಂದಲಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಬಂದೋಬಸ್ತ್ ಕುರಿತು ಎಸ್ಪಿ ಮಹಮ್ಮದ್ ಸುಜೀತಾ ಮಾಹಿತಿ ವಿನಿಮಯ ಮಾಡಿಕೊಂಡರು. ಜಿಲ್ಲಾ ಪಂಚಾಯಿತಿ ಸಿಇಒ ಪೂರ್ಣಿಮಾ, ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್, ನಗರಸಭೆ ಅಧ್ಯಕ್ಷ ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ್, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net