ಅರಸೀಕೆರೆಗೆ ಸಿಎಂ ಸಿದ್ದರಾಮಯ್ಯ ಇಂದು ಆಗಮನ

KM shivlingegowda
Published on

ಅರಸೀಕೆರೆ: ಕ್ಷೇತ್ರದಲ್ಲಿ ನೂರಾರು ಕೋಟಿ ರೂ.ವೆಚ್ಚದ ವಿವಿಧ ಅಭಿವವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ , ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಸಂಪುಟದ ಸಚಿವರು ಜು.26ರಂದು ಅರಸೀಕೆರೆ ನಗರಕ್ಕೆ ಅಗಮಿಸಲಿದ್ದಾರೆ ಎಂದು ಕರ್ನಾಟಕ ಗೃಹಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸರ್ಕಾರಿ ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜು, ಸಂತೆ ಮೈದಾನದ ವಾಣಿಜ್ಯ ಸಂಕೀರ್ಣ ಉದ್ಘಾಟಿಸಲಿದ್ದಾರೆ. ಅಲ್ಲದೆ, ನಗರಸಭೆ ವತಿಯಿಂದ ಕಂತೇನಹಳ್ಳಿ ಕೆರೆಯಂಗಳದಲ್ಲಿ ನಿರ್ಮಿಸಿರುವ ಈಜುಕೊಳ, ಸಾರ್ವಜನಿಕರ ಬಳಕೆಗೆ ಸಮರ್ಪಿಸಲಾಗುತ್ತಿದೆ. ಎತ್ತಿನಹೊಳೆ ಯೋಜನೆಯಡಿ ಕುಡಿಯುವ ನೀರು, ಗ್ರಾಮೀಣ ರಸ್ತೆಗಳ ನಿರ್ಮಾಣ, ಬಸ್ ನಿಲ್ದಾಣ ವಿಸ್ತರಣೆ, ಪತ್ರಿಕಾ ಭವನ ಒಳಗೊಂಡಂತೆ ಹಲವು ಬಗೆಯ ಜನಪರ ಕಾರ್ಯಕ್ರಮಗಳಿಗೂ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಂತ್ರಿ ಮಾಡುವುದಾಗಿ ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರೇ ಬಹಿರಂಗವಾಗಿ ಹೇಳಿದ್ದಾರೆ. ರಾಜಕೀಯ ವಿದ್ಯಮಾನಗಳು ಹೇಗಿರುತ್ತವೆ ಎಂಬುದನ್ನು ಹೇಳಲು ಬರುವುದಿಲ್ಲ. ಕ್ಷೇತ್ರಕ್ಕೆ ಅನುದಾನ ತಂದು ಕೆಲಸ ಮಾಡುವುದೇ ನನ್ನ ಮೊದಲ ಆದ್ಯತೆಯಾಗಿದೆ. ದೊಡ್ಡವರನ್ನು ಕುರಿತು ಹೇಳಿಕೆ ನೀಡುವಷ್ಟು ಎತ್ತರಕ್ಕೆ ಬೆಳದಿಲ್ಲ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ ಎಂಬುದು ಸುಳ್ಳು. ಇದನ್ನು ಸಾಬೀತು ಮಾಡಲೆಂದೇ ಅನುದಾನ ನೀಡಿದವರಿಗೆ ಸನ್ಮಾನಿಸಲು ಸಿಎಂ, ಡಿಸಿಎಂ ಹಾಗೂ ಸಚಿವರಿಗೆ ಕೃತಜ್ಞತಾ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ನಗರಸಭೆಯಿಂದ ಎಲ್ಲರಿಗೂ ಪೌರಸನ್ಮಾನ ನಡೆಯಲಿದೆ ಎಂದರು.

ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ್, ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಮುರುಂಡಿ ಶಿವಯ್ಯ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸಯ್ಯದ್ ಸಿಕಂದರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net