ಮಾಧ್ಯಮಗಳು ವಸ್ತುಸ್ಥಿತಿ ವರದಿಗಳ ಪ್ರಕಟಕ್ಕೆ ಆದ್ಯತೆ ನೀಡಲಿ: ಸಿಎಂ ಸಿದ್ದರಾಮಯ್ಯ ಸಲಹೆ

MUDA case
Published on

ಬೆಂಗಳೂರು:ಸತ್ಯ, ಅಸತ್ಯವನ್ನು ಶೋಧಿಸಿ ವಸ್ತುಸ್ಥಿತಿ ವರದಿಯನ್ನು ಪ್ರಕಟ ಅಥವಾ ಪ್ರಸಾರ ಮಾಡಬೇಕು ಎಂದು ಮಾಧ್ಯಮಗಳಿಗೆ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು.

ನಗರದ ವಾರ್ತಾಸೌಧದ ಸುಲೋಚನಾ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಮಾತನಾಡಿದರು. ಸ್ವಾತಂತ್ರ್ಯಪೂರ್ವದ ಮಾಧ್ಯಮ ರಂಗಕ್ಕೂ ಇಂದಿನ ಮಾಧ್ಯಮ ವ್ಯವಸ್ಥೆಗೂ ಅಜಗಜಾಂತರ ವ್ಯತ್ಯಾಸವಿದೆ. ಈಗಿನ ಪತ್ರಿಕೋದ್ಯಮ ಶ್ರೀಮಂತರ ಕೈಗಳಿಗೆ ಸಿಕ್ಕಿಹಾಕಿಕೊಂಡಿದೆ. ಇದನ್ನು ಅರ್ಥ ಮಾಡಿಕೊಂಡು ಪತ್ರಕರ್ತರು ಕರ್ತವ್ಯ ನಿರ್ವಹಿಸಬೇಕಿದೆ. ಶೋಧನೆ ಕಾರ್ಯವನ್ನು ಪತ್ರಿಕೋದ್ಯಮ ಮಾಡಬೇಕು. ಅಭಿಪ್ರಾಯಗಳು ವಸ್ತುಸ್ಥಿತಿಯಿಂದ ಕೂಡಿರಬೇಕು. ಊಹಾ ಪತ್ರಿಕೋದ್ಯಮ ಆಗಬಾರದು. ಯಾವುದೇ ಕಾರಣಕ್ಕೂ ಒಬ್ಬ ವ್ಯಕ್ತಿ ತಪ್ಪು ಮಾಡದಿದ್ದರೂ ಸುಮ್ಮನೆ ಆರೋಪ ಮಾಡಬಾರದು ಎಂದರು.

ಸರ್ಕಾರದಲ್ಲಿ ಎಲ್ಲವೂ ಸರಿಯಾಗಿರುವುದಿಲ್ಲ ನಿಜ, ಆದರೆ, ಸರ್ಕಾರದ ಜನಪರ ವಿಚಾರ ಜನರಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಧ್ಯಮಗಳು ಮಾಡಬೇಕು. ಜನವಿರೋಧಿ ಕಾರ್ಯವನ್ನು ಸರ್ಕಾರ ಮಾಡಿದರೆ ಅದನ್ನೂ ಜನರಿಗೆ ತಿಳಿಸುವ ಕಾರ್ಯ ಮಾಡಬೇಕು. ಪರಿಸರ ರಕ್ಷಣೆಗೆ ಒತ್ತು ನೀಡಬೇಕು. ಪತ್ರಕರ್ತರು ಪರಿಸರ ನ್ಯಾಯಕ್ಕೆ ಬದ್ಧವಾಗಿರಬೇಕು. ಸಮಾಜದಲ್ಲಿನ ಅಸಮಾನತೆಗೆ ಕಾರಣಗಳು ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಬೇಕು ಎಂದರು. ಸಚಿವ ಭೈರತಿ ಸುರೇಶ್, ವಿಧಾನ ಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹ್ಮದ್, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಕಾನೂನು ಆಯೋಗದ ಅಧ್ಯಕ್ಷ ಅಶೋಕ ಬಿ. ಹಿಂಚಿಗೇರಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಹಿರಿಯ ನಟ ಸಾಧುಕೋಕಿಲಾ, ಇಲಾಖೆ ಕಾರ್ಯದರ್ಶಿ ಬಿ.ಬಿ.ಕಾವೇರಿ, ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ಇದ್ದರು.

ಆಯಾ ವರ್ಷದಲ್ಲೇ ಪ್ರಶಸ್ತಿ ನೀಡಿ

ಅಸಮಾನತೆಮಟ್ಟ ಕಡಿಮೆಗೊಳಿಸಿ ಸಮಸಮಾಜ ನಿರ್ಮಾಣಕ್ಕೆ ನಮ್ಮ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಎಲ್ಲರ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡಿದರೆ ಸಮಾಜ, ನಾಡು, ದೇಶಕ್ಕೆ ಒಳ್ಳೆಯದಾಗುತ್ತದೆ. ಆಯಾ ವರ್ಷದ ಪ್ರಶಸ್ತಿಗಳನ್ನು ಆಯಾ ವರ್ಷವೇ ನೀಡಿದರೆ ಉತ್ತಮ. ಅನೇಕ ವರ್ಷಗಳ ಪ್ರಶಸ್ತಿಗಳನ್ನು ಒಟ್ಟಿಗೆ ನೀಡುವುದು ಒಳ್ಳೆಯದಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಂಸ್ಕೃತಿಕ ನಾಡಹಬ್ಬ ದಸರಾ

ಇತ್ತೀಚೆಗೆ ಟಿವಿ ಚಾನೆಲ್‌ಗಳು ಒಬ್ಬೊಬ್ಬರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೇಳಿ ಸುದ್ದಿ ಮಾಡುತ್ತಿವೆ. ಅದರಲ್ಲಿ ಅನೇಕ ವಿಚಾರಗಳು ಸಮಾಜಕ್ಕೆ ಸಂಬಂಧಿಸಿದ್ದಲ್ಲ. ಬಾನು ಮುಷ್ತಾಕ್ ದಸರಾ ಉದ್ಘಾಟನೆಯನ್ನು ವಿಷಯವನ್ನಾಗಿಸಲು ಹೊರಟರು. ಆದರೆ, ಈ ಅರ್ಜಿಯನ್ನು ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್ ವಜಾ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದರು. ದಸರಾ ಹಬ್ಬ ಧಾರ್ಮಿಕ ವಿಚಾರವಲ್ಲ, ಅದು ನಾಡಹಬ್ಬವಾಗಿದೆ. ನಮ್ಮಲ್ಲಿ ಸಹಬಾಳ್ವೆ ಇರಬೇಕು. ಸಮಾಜದಲ್ಲಿ ವೈವಿಧ್ಯತೆಯಲ್ಲಿ ಏಕತೆ ನಿರ್ಮಾಣ ಮಾಡಬೇಕು. ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ನಾವು ವೈರುಧ್ಯಗಳಿಂದ ಕೂಡಿದ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ಸಮಾಜದ ದುರ್ಬಲ ವರ್ಗದವರ ಅಭಿವೃದ್ಧಿಯಾದರೆ ಮಾತ್ರ ನಿಜವಾದ ಅಭಿವೃದ್ಧಿ ಎಂದು ಅಂಬೇಡ್ಕರ್ ಹೇಳಿದ್ದರು ಎಂದು ಸಿಎಂ ತಿಳಿಸಿದರು.

ಪತ್ರಕರ್ತರಿಗೆ ಸನ್ಮಾನ

ಹಿರಿಯ ಪತ್ರಕರ್ತ ಡಿ.ಉಮಾಪತಿ ಅವರಿಗೆ 2024ನೇ ಸಾಲಿನ ‘ವಡ್ಡರ್ಸೆ ರಘುರಾಮ ಶೆಟ್ಟಿ’ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಜಯಲಕ್ಷ್ಮಿ ಶಿಬರೂರು, ಬಿಎಂಟಿ ರಾಜೀವ್, ವಿನೋದ ಕುಮಾರ್ ಬಿ.ನಾಯ್ಕ, ಮಾಲತೇಶ ಅಂಗೂರ, ಸುಧೀರ್ ಶೆಟ್ಟಿ, ಮಲ್ಲಿಕಾರ್ಜುನ ಹೊಸಪಾಳ್ಯ, ಆರ್.ಮಂಜುನಾಥ್‌ಗೆ ‘ಪರಿಸರ ಪತ್ರಿಕೋದ್ಯಮ’ ಪ್ರಶಸ್ತಿ ಹಾಗೂ ಚೀ.ಜ. ರಾಜೀವ್, ದೇವಯ್ಯ ಗುತ್ತೇದಾರ್, ಗಿರೀಶ್ ಲಿಂಗಣ್ಣ, ಎಂ.ಎನ್.ಯೋಗೇಶ್, ನೌಶಾದ್ ಬಿಜಾಪುರ, ಜಿ.ಟಿ.ಸತೀಶ್, ಎಸ್.ಗಿರೀಶ್ ಬಾಬು ಅವರಿಗೆ ‘ಅಭಿವೃದ್ಧಿ ಪತ್ರಿಕೋದ್ಯಮ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net