10 ರಷ್ಟಿರುವ ಶ್ರೀಮಂತರ ಬಳಿ 80 ರಷ್ಟು ಸಂಪತ್ತು ಸಂಗ್ರಹ: ಸಿಎಂ ಸಿದ್ದರಾಮಯ್ಯ ಸ್ವಾತಂತ್ರ್ಯೋತ್ಸವ ಭಾಷಣದ ಹೈಲೆಟ್ಸ್! CM Siddaramaiah

CM Siddaramaiah
Published on

CM Siddaramaiah : ಜನರ ಕಲ್ಯಾಣಕ್ಕಾಗಿ ನಾವು ಗ್ಯಾರಂಟಿ ಮತ್ತು ಇನ್ನಿತರ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಗ್ಯಾರಂಟಿ ಯೋಜನೆಗಳು ರಾಜ್ಯದ ಅಭಿವೃದ್ಧಿಯ ದಿಕ್ಕನ್ನೇ ಬದಲಾಯಿಸುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜ್ಯ ರಾಜಧಾನಿಯ ಮಾಣಿಕ್​ ಷಾ ಪರೇಡ್​ ಗ್ರೌಂಡ್​ನಲ್ಲಿ ಧ್ವಜಾರೋಹಣ ನೇರವೇರಿಸಿದ ಬಳಿಕ ರಾಜ್ಯದ ಜನತೆಯನ್ನು ಉದ್ದೇಶಿಸಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದರು.

ಪ್ರೀತಿಯ ನಾಡ ಬಾಂಧವರೇ, ಭಾರತದ 79ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಿಮಗೆಲ್ಲರಿಗೂ ಹೃತ್ಪೂರ್ವಕ ಶುಭಾಗಳನ್ನು ತಿಳಿಸುತ್ತೇನೆ ಎಂದು ಮಾತು ಆರಂಭಿಸಿದ ಸಿಎಂ ಸಿದ್ದರಾಮಯ್ಯ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿ, ಮಡಿದ ದೇಶಪ್ರೇಮಿಗಳಿಗೆ ಗೌರವ ಸೂಚಿಸಿದರು. ಅಲ್ಲದೆ, ಇತ್ತೀಚೆಗೆ ಪಹಲ್ಗಾಮ್​ನಲ್ಲಿ ಭಯೋತ್ಪಾದಕ ದಾಳಿಯಲ್ಲಿ ಮಡಿದವರು ಮತ್ತು ಆನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಎಲ್ಲರನ್ನು ದೇಶದ ಜನರು ಋಣಪೂರ್ವಕವಾಗಿ ಸದಾ ನೆನಪಿನಲ್ಲಿಡುತ್ತದೆ ಎಂದರು.

ದೇಶ ಸೇವೆ ಎಂದರೆ, ಸಂಕಷ್ಟದಲ್ಲಿರುವ ಕೋಟ್ಯಂತರ ಜನರ ಸೇವೆ. ಬಡತನ, ಅಜ್ಞಾನ, ರೋಗ-ರುಜಿನಗಳಲ್ಲಿ ನರಳುವವರ ಬದುಕನ್ನು ಸರಿಪಡಿಸುವುದು ಎಂದು ಪಂಡಿತ ಜವಹರ್​ ಲಾಲ್​ ನೆಹರೂರವರು ಹೇಳಿದ್ದಾರೆ. ಈ ಮಾತನ್ನು ಈ ಸಂದರ್ಭದಲ್ಲಿ ನೆನೆಪಿಸಿಕೊಳ್ಳುವುದು ಸೂಕ್ತ ಎನಿಸುತ್ತದೆ. ನುಡಿದಂತೆ ನಡೆಯಬೇಕು ಎನ್ನುವುದು 12ನೇ ಶತಮಾನದ ಸಾಮಾಜಿಕ ಹರಿಕಾರ ಬಸವಣ್ಣನವರ ನಿಶ್ಚಲ ನಿಲುವಾಗಿದೆ. ನಮ್ಮ ಸರ್ಕಾರ ಈ ಧ್ಯೇಯ ವಾಕ್ಯದಲ್ಲಿ ನಂಬಿಕೆ ಇಟ್ಟು, ರಾಜ್ಯವು ತನ್ನದೇಯಾದ ಅಭಿವೃದ್ಧಿ ಮಾದರಿಗಳನ್ನು ನಿರ್ಮಿಸಿದೆ. ಅಲ್ಲದೆ, ಇದಕ್ಕೆ ಕರ್ನಾಟಕದ ಅಭಿವೃದ್ಧಿ ಮಾದರಿ ಎಂದು ಮನ್ನಣೆ ಸಿಕ್ಕಿರುವುದು ಹೆಮ್ಮೆಯ ಸಂಗತಿಯಾಗಿದೆ.

ವಿಶ್ವಸಂಸ್ಥೆಯ ಮುಖ್ಯಸ್ಥರಾದ ಫಿಲೆಮನ್ ಯಾಂಗ್ ಅವರು ಕರ್ನಾಟಕಕ್ಕೆ ಬಂದು ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಈ ಮೂಲಕ ನಮ್ಮ ಯೋಜನೆಗಳು ವಿಶ್ವಮಾನ್ಯಗೊಂಡಿವೆ. ದೇಶದ ಪ್ರಮುಖ ಸಂಸ್ಥೆಗಳು ಮಾಡಿರುವ ಸಮೀಕ್ಷೆಗಳ ಪ್ರಕಾರ ಶೇ. 10 ರಷ್ಟಿರುವ ಶ್ರೀಮಂತರ ಬಳಿ ಶೇ. 80 ರಷ್ಟು ಸಂಪತ್ತು ಶೇಖರಣೆಯಾಗಿದೆ. ಆದರೆ, ಶೇ. 10ರಲ್ಲಿ ಕೇವಲ 3 ರಷ್ಟು ಮಾತ್ರ ಜಿಎಸ್​ಟಿ ಪಾವತಿಸಿದ್ದಾರೆಂದು ಅಧ್ಯಯನಗಳು ಹೇಳುತ್ತಿವೆ. ಉಳಿದ ಶೇ. 90 ರಷ್ಟು ಜನ ಹೊಟ್ಟೆ, ಬಟ್ಟೆಗೆ ದುಡಿಯುತ್ತಿರುವುದು ಶೇ. 97ರಷ್ಟು ಜಿಎಸ್​ಟಿ ಪಾವತಿ ಮಾಡುತ್ತಿದ್ದಾರೆ. ಇಂಥಾ ಪರಿಸ್ಥಿತಿಯಲ್ಲಿ ಯಾವ ಆರ್ಥಿಕತೆ ಮುಂದುವರಿಯಲು ಸಾಧ್ಯ? ಸಂವಿಧಾನದ ಆಶಯಗಳನ್ನು ಈಡೇರಿಸುವುದು ಹೇಗೆ? ಬೃಹದಾಕಾರವಾಗಿ ಬೆಳೆಯುತ್ತಿರುವ ಅಸಮಾನತೆಯನ್ನು ತಗ್ಗಿಸುವುದು ಹೇಗೆ? ಎಂಬ ಪ್ರಶ್ನೆಗಳು ನಮ್ಮನ್ನು ಬಾಧಿಸಲಾರಂಭಿಸಿದವು. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲೆಂದೇ ನಾವು ಗ್ಯಾರಂಟಿ ಮತ್ತು ಇನ್ನಿತರ ಯೋಜನೆಗಳನ್ನು ಹಾಗೂ ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಗ್ಯಾರಂಟಿ ಯೋಜನೆಗಳು ರಾಜ್ಯದ ಅಭಿವೃದ್ಧಿಯ ದಿಕ್ಕನ್ನೇ ಬದಲಾಯಿಸುತ್ತಿವೆ. 2023 ಮೇ ತಿಂಗಳಲ್ಲಿ ನಾವು ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಆರಂಭಿಸಿದೆವು. ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹ ಜ್ಯೋತಿ ಹಾಗೂ ಯುವನಿಧಿ ಯೋಜನೆಗಳಿಗೆ ಇದುವರೆಗೂ 96 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ವಿನಿಯೋಗಿಸಿದ್ದೇವೆ. ಶಕ್ತಿ ಯೋಜನೆಯಲ್ಲಿ 500 ಕೋಟಿ ಟ್ರಿಪ್ಪುಗಳ ಮೂಲಕ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದನ್ನು ಇತ್ತೀಚೆಗೆ ಆಚರಣೆ ಮಾಡಿದ್ದೇವೆ. ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಜನರಿಗೆ ತಲುಪುವ ಈ ಯೋಜನೆಗಳು ರಾಜ್ಯದ ಜನರ ತಲಾದಾಯವನ್ನು ಹೆಚ್ಚಿಸುತ್ತಿರುವುದಲ್ಲದೆ ಕಾರ್ಮಿಕ ಶಕ್ತಿಯಲ್ಲಿಮಹಿಳೆಯರ ಭಾಗವಹಿಸುವಿಕೆಯನ್ನು ಶೇ.23 ರಷ್ಟು ಹೆಚ್ಚಿಸಿವೆ ಎಂದು ಹಲವು ಅಧ್ಯಯನಗಳು ಹೇಳುತ್ತಿವೆ. ನಾವು ಶಕ್ತಿ ಯೋಜನೆಯನ್ನು ಜಾರಿಗೊಳಿಸುವುದರ ಜೊತೆಗೆ ಸಾರಿಗೆ ಇಲಾಖೆಗೆ ವಿವಿಧ ಮಾದರಿಯ ವಾಹನಗಳು ಸೇರಿದಂತೆ ಒಟ್ಟು 5,049 ಹೊಸ ಬಸ್ಸುಗಳ ಖರೀದಿ ಮತ್ತು 8,473 ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದ್ದೇವೆ ಎಂದರು.

10. ಕರ್ನಾಟಕವು ಈಗ ತಲಾದಾಯದ ವಿಚಾರದಲ್ಲಿ ಮೊದಲ ಸ್ಥಾನದಲ್ಲಿದೆ. ತಲಾದಾಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಶೇ.101 ರಷ್ಟು ಪ್ರಗತಿಯನ್ನು ಸಾಧಿಸಿದ ರಾಜ್ಯ ನಮ್ಮ ಕರ್ನಾಟಕವಾಗಿದೆ. 2013-14 ರಲ್ಲಿ ಸ್ಥಿರ ದರಗಳಲ್ಲಿ 1,01,858 ರೂಪಾಯಿಗಳಷ್ಟಿದ್ದ ತಲಾದಾಯವು 2024-25 ರ ವೇಳೆಗೆ 2,04,605 ರೂಪಾಯಿಗಳಿಗೆ ತಲುಪಿದೆ. ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆಗಳೂ ಸೇರಿದಂತೆ ಸಹಾಯಧನ, ಪ್ರೋತ್ಸಾಹ ಧನ, ವಿದ್ಯಾರ್ಥಿವೇತನ, ಸಾಮಾಜಿಕ ಯೋಜನೆಗಳಿಗಾಗಿ ವಿನಿಯೋಗಿಸುತ್ತಿರುವ ಪಿಂಚಣಿ ಮುಂತಾದವುಗಳಿಗಾಗಿ 1.12 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ಜನ ಕಲ್ಯಾಣಕ್ಕಾಗಿ ಖರ್ಚು ಮಾಡುತ್ತಿದೆ ಎಂದು ಹೇಳಿದರು.

ಬಾಬಾಸಾಹೇಬ್ ಅಂಬೇಡ್ಕರ್ ಅವರು ನವೆಂಬರ್ 25, 1949 ರಂದು ತಮ್ಮ ಸಂವಿಧಾನ ಸಮರ್ಪಣಾ ಭಾಷಣದಲ್ಲಿ, “ನಾವು ಕೇವಲ ರಾಜಕೀಯ ಪ್ರಜಾಪ್ರಭುತ್ವದಿಂದ ಸಂತೃಪ್ತರಾಗಬಾರದು. ರಾಜಕೀಯ ಪ್ರಜಾಪ್ರಭುತ್ವಕ್ಕೆ ಆಧಾರವಾಗಿ ಆರ್ಥಿಕ ಪ್ರಜಾಪ್ರಭುತ್ವವನ್ನು ಏರ್ಪಡಿಸಿಕೊಳ್ಳಬೇಕು. ಆರ್ಥಿಕ ಪ್ರಜಾಪ್ರಭುತ್ವದ ಬುನಾದಿ ಇಲ್ಲದೆ ಹೋದರೆ, ರಾಜಕೀಯ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ. ಸಾಮಾಜಿಕ ಪ್ರಜಾಪ್ರಭುತ್ವವೂ ಬಹಳ ಮುಖ್ಯ. ಸ್ವಾತಂತ್ರ್ಯವನ್ನು ಸಮಾನತೆಯಿಂದ ಬೇರ್ಪಡಿಸುವಂತಿಲ್ಲ. ಹಾಗೆ ಬೇರ್ಪಡಿಸಿದರೆ ಕೆಲವರ ಸರ್ವಾಧಿಕಾರವಾಗುತ್ತದೆ. ಸ್ವಾತಂತ್ರ್ಯ ಮತ್ತು ಸಮಾನತೆಗಳನ್ನೂ ಬಂಧುತ್ವದಿಂದ ಬೇರ್ಪಡಿಸುವಂತಿಲ್ಲ”ಎಂದಿದ್ದಾರೆ. ಬಲಾಢ್ಯರು ಮಾತ್ರ ಬದುಕಬೇಕು ಉಳಿದವರು ಗುಲಾಮರಾಗಿ ಬಲಾಢ್ಯರಿಗಾಗಿ ದುಡಿಯಬೇಕು ಎನ್ನುವ ಮನುವಾದಿ ಸಿದ್ಧಾಂತದ ಮಾದರಿಯೇ ಸಾಮಾಜಿಕ ಡಾರ್ವಿನ್ವಾದ. ಈ ಮೃಗೀಯ ಸಿದ್ಧಾಂತಕ್ಕೆ ಎದುರಾಗಿ ಅಸಹಾಯಕರಿಗೆ ಮೊದಲು ಆದ್ಯತೆ ಸಿಗಬೇಕು ಎನ್ನುವುದು ನಮ್ಮ ಸಂವಿಧಾನವಾದ. ಆದ್ದರಿಂದ ನಾವು ಸಂವಿಧಾನದ ಉಳಿವಿಗಾಗಿ ಪಣ ತೊಡೋಣ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಜನರ ಬದುಕಿನ ಸ್ಥಿತಿಗತಿಗಳನ್ನು ಅರಿತುಕೊಳ್ಳಲು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಲು ತೀರ್ಮಾನಿಸಿದ್ದೇವೆ. ಸಮರ್ಪಕವಾದ ಅಂಕಿ-ಅಂಶಗಳು ಮಾತ್ರ ಜನರ ಬದುಕಿನ ಗತಿಯನ್ನು ಬದಲಾಯಿಸಲು ಕಾರಣವಾಗಬಲ್ಲವು. ನಮ್ಮ ಮೊದಲ ಆದ್ಯತೆ ಅಂಕಿ-ಅಂಶಗಳ ಸಂಗ್ರಹ. ಆ ನಂತರ ರೂಪಿಸುವ ಯೋಜನೆಗಳಲ್ಲಿ ವಿಶೇಷ ಪ್ರಾತಿನಿಧ್ಯ ಕೊಡಬೇಕಾಗುತ್ತದೆ. ಹಾಗೆ ಮಾಡದಿದ್ದರೆ ನಾವು ನಮ್ಮ ಸಂವಿಧಾನಕ್ಕೆ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಅನ್ಯಾಯ ಮಾಡುತ್ತಿದ್ದೇವೆ ಎಂದು ಭಾವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿಯೆ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಹಾಗೂ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವಿಚಾರಗಳನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿ ಮಾದರಿಗೆ 250ಕ್ಕಿಂತ ಹೆಚ್ಚಿನ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇಂಡಿಯಾ ಜಸ್ಟೀಸ್ ರಿಪೋರ್ಟ್ ವರದಿಗಳ ಪ್ರಕಾರ ನಮ್ಮ ರಾಜ್ಯವು ನ್ಯಾಯ ವ್ಯವಸ್ಥೆ, ಪೊಲೀಸು, ಕಾನೂನು ಸುವ್ಯವಸ್ಥೆ, ಕಾನೂನು ನೆರವು ಮುಂತಾದ ವಿಚಾರಗಳಲ್ಲಿ ಇಡೀ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದರು.

ರಾಜ್ಯದಲ್ಲಿ ಉತ್ತಮವಾದ ಮುಂಗಾರು ಮಳೆಯಾಗುತ್ತಿದೆ. ಅಣೆಕಟ್ಟೆಗಳು ತುಂಬಿವೆ. ರೈತರ ಮುಖದಲ್ಲಿ ಮಂದಹಾಸವಿದೆ.ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೆಚ್ಚಿನ ಭೂ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. 2024-25ರಲ್ಲಿ ಕೂಡ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ಬೆಳೆಯಲಾಗಿದೆ. ಹಿಂದಿನ ಸರ್ಕಾರವು ಎಪಿಎಂಸಿಗಳನ್ನು ಖಾಸಗೀಕರಿಸಿ ರೈತರ ಬದುಕನ್ನು ಕಾರ್ಪೊರೇಟ್ ಬಂಡವಾಳಿಗರ ಕೈಗೆ ಕೊಡಲು ಹೊರಟಿತ್ತು. ಆದರೆ, ನಮ್ಮ ಸರ್ಕಾರವು ಎಪಿಎಂಸಿಗಳನ್ನು ಬಲಿಷ್ಠಗೊಳಿಸಿದ ಕಾರಣ 2024-25 ರಲ್ಲಿ 164 ಲಕ್ಷ ಮೆಟ್ರಿಕ್ ಟನ್ನುಗಳಷ್ಟು ಕೃಷಿ ಉತ್ಪನ್ನಗಳು ಆವಕವಾಗಿದ್ದು ಶೇ. 447 ರಷ್ಟು ಹೆಚ್ಚಿನ ಪ್ರಮಾಣವಾಗಿದೆ. ಇದು ರಾಜ್ಯದ ಎ.ಪಿ.ಎಂ.ಸಿ.ಗಳ ಇತಿಹಾಸದಲ್ಲಿಯೇ ದಾಖಲೆಯಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net