

ಬೆಂಗಳೂರು : ಯಾವುದೇ ಪಕ್ಷದ ಆಡಳಿತವಿರುವ ಸರ್ಕಾರ ಬಜೆಟ್ ಮಂಡಿಸಿದಾಗ ವಿರೋಧ ಪಕ್ಷದ ಟೀಕೆ ಸಹಜ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 2025-26ನೇ ಸಾಲಿನ ಬಜೆಟ್ ಕುರಿತು ವಿರೋಧ ಪಕ್ಷದ ನಾಯಕರ ಅತಿ ಹೆಚ್ಚು ಟೀಕೆಗಳು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ನೀಡಿರುವ ಅನುದಾನ ಮತ್ತು ಯೋಜನೆಗಳಿಗೆ ಸಂಬಂಧಿಸಿದ್ದಾಗಿವೆ. ‘ಹಲಾಲ್ ಬಜೆಟ್, ತಾಲಿಬಾನ್ ಬಜೆಟ್, ಪಾಕಿಸ್ತಾನ್ ಬಜೆಟ್’ ಇತ್ಯಾದಿ ಕಟುಟೀಕೆಗೆ ಕಾರಣವಾಗಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ ಅನುದಾನದ ವಿವರ ಇಂತಿದೆ.
ಕವಿ ಕೆ.ಎಸ್.ನಿಸಾರ್ ಅಹಮದ್ ಕವನದ ಸಾಲುಗಳನ್ನು ಉಲ್ಲೇಖಿಸಿರುವ ಸಿಎಂ ಸಿದ್ದರಾಮಯ್ಯ 250 ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳನ್ನು ಹಂತ ಹಂತವಾಗಿ ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸಲು 500 ಕೋಟಿ ರೂ. ಘೋಷಿಸಿದ್ದು, ಪ್ರಸಕ್ತ ಸಾಲಿನಲ್ಲಿ 100 ಕೋಟಿ ಒದಗಿಸಿದ್ದಾರೆ. ಆಯ್ದ 100 ಉರ್ದು ಮಾಧ್ಯಮ ಶಾಲೆಗಳನ್ನು ಕೆಪಿಎಸ್ ಮಾದರಿಯಲ್ಲಿ ಮೌಲಾನಾ ಆಜಾದ್ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು 400 ಕೋಟಿ ರೂ. ಘೋಷಿಸಲಾಗಿದ್ದು, ಪ್ರಸಕ್ತ ಸಾಲಿಗೆ 100 ಕೋಟಿ ರೂ. ಒದಗಿಸಲಾಗಿದೆ.
ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಯಡಿ 1,000 ಕೋಟಿ ರೂ. ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, 2025-26ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುವುದು.
ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣದೊಂದಿಗೆ ಔಪಚಾರಿಕ ಶಿಕ್ಷಣವನ್ನು ನೀಡಲು ಕಂಪ್ಯೂಟರ್, ಸ್ಮಾರ್ಟ್ ಬೋರ್ಡ್ ಇತ್ಯಾದಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ.
ವಕ್ಫ್ ಸಂಸ್ಥೆಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಖಬರಸ್ತಾನಗಳಲ್ಲಿ ಮೂಲಸೌಕರ್ಯಕ್ಕಾಗಿ ಹಾಗೂ ಆಸ್ತಿಗಳ ಸಂರಕ್ಷಣೆಗಾಗಿ 150 ಕೋಟಿ ರೂ. ಮೀಸಲು.
ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಾಮೂಹಿಕ ವಿವಾಹಗಳ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ 50,000 ರೂ. ನೀಡಲಾಗುವುದು. ಹಜ್ ಯಾತ್ರಿಕರು ಹಾಗೂ ಸಂಬಂಧಿಕರ ಸೌಕರ್ಯಗಳಿಗಾಗಿ ಬೆಂಗಳೂರಿನ ಹಜ್ ಭವನದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣ. ವಕ್ಫ್ ಸಂಸ್ಥೆಗಳ ಖಾಲಿ ನಿವೇಶನಗಳಲ್ಲಿ 15 ಮಹಿಳಾ ಕಾಲೇಜುಗಳ ನಿರ್ಮಾಣ ಹಾಗೂ 16 ಹೊಸ ಮಹಿಳಾ ಕಾಲೇಜುಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದ ಗುರುದ್ವಾರಗಳ ಮೂಲಸೌಕರ್ಯಕ್ಕೆ 2 ಕೋಟಿ ರೂ, ಮಹಾಭೋಧಿ ಅಧ್ಯಯನ ಕೇಂದ್ರದ ಶತಮಾನದ ಗ್ರಂಥಾಲಯ ಉನ್ನತೀಕರಣಕ್ಕೆ 1 ಕೋಟಿ ರೂ, ಜೈನ, ಬೌದ್ಧ ಹಾಗೂ ಸಿಖ್ಖ್ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ. ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿಗಾಗಿ 250 ಕೋಟಿ ರೂ ನೀಡಲಾಗಿದೆ.
ಅಲ್ಪಸಂಖ್ಯಾತ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗೆ ಹೋಬಳಿ ಮತ್ತು ತಾಲ್ಲೂಕು ಮಟ್ಟದಲ್ಲಿ 50 ಲಕ್ಷ ರೂ. ಹಾಗೂ ಜಿಲ್ಲಾ ಮತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಬಹುಪಯೋಗಿ ಭವನಗಳ ನಿರ್ಮಾಣಕ್ಕೆ ಕ್ರಮ.
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿವೇತನವನ್ನು 20 ರಿಂದ 30 ಲಕ್ಷಕ್ಕೆ ಏರಿಕೆ ಸೇರಿದಂತೆ ಮತ್ತಿತರ ಯೋಜನೆಗಳನ್ನು ಸಿಎಂ ಘೋಷಿಸಿದ್ದಾರೆ.
* 62 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ವಾಣಿಜ್ಯ ವಿಭಾಗ ಪ್ರಾರಂಭ.
*ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವತಿಯಿಂದ ನವೋದ್ಯಮ ಪ್ರಾರಂಭಿಸಲು ಉತ್ತೇಜನ.
*ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ವೃತ್ತಿ ಮಾರ್ಗದರ್ಶನ ತರಬೇತಿ.
* ಹಜ್ ಭವನದಲ್ಲಿ ಕೆಎಸ್‌ಓಯು ಪ್ರಾದೇಶಿಕ ಕೇಂದ್ರ ತೆರೆದು ಪದವಿ/ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ ಅವಕಾಶ.
* 25 ಸಾವಿರ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶಲ ತರಬೇತಿ.
* ಬೆಂಗಳೂರಿನಲ್ಲಿ ಬೌದ್ಧ ಅಧ್ಯಯನ ಅಕಾಡೆಮಿಯನ್ನು ಸ್ಥಾಪನೆ
* ಕಲುಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಲ್ಲಿ ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕ್ರಮ
* ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳಲ್ಲಿರುವ ಐ.ಟಿ.ಐಗಳಲ್ಲಿ ಹೊಸ ಕೋರ್ಸ್ ಹಾಗೂ ಹೆಚ್ಚುವರಿ ತರಗತಿ ಪ್ರಾರಂಭ
*ಉಳ್ಳಾಲದಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರಿಗಾಗಿ ವಸತಿ ಸಹಿತ ಪಿ.ಯು. ಕಾಲೇಜನ್ನು ಸ್ಥಾಪನೆ.