ಸಿಎಂ ಸಿದ್ದರಾಮಯ್ಯ ಹುಚ್ಚು ದೊರೆ: ಈಶ್ವರಪ್ಪ ಕಿಡಿ

K.S. Eshwarappaa
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಶಿವಮೊಗ್ಗ: ಹಿಂದೆ ರಾಜರ ಆಳ್ವಿಕೆ ಕಾಲದಲ್ಲಿ ಮಹಮ್ಮದ್ ಬಿನ್ ತುಘಲಕ್ ಹುಚ್ಚು ದೊರೆ ಎಂದೇ ಪ್ರಸಿದ್ಧನಾಗಿದ್ದ. ಅವನಂತೆಯೇ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಒಬ್ಬ ಹುಚ್ಚು ದೊರೆಯಾಗಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.

ನ್ಯಾಯಾಲಯದ ತೀರ್ಪು ಧಿಕ್ಕರಿಸಿ ರಾಜ್ಯದಲ್ಲಿ ಹಿಜಾಬ್ ನಿಷೇಧ ಹಿಂಪಡೆಯುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಈಗಾಗಲೇ ಪ್ರಕರಣ ಸುಪ್ರಿಂಕೋರ್ಟ್‌ನಲ್ಲಿದ್ದು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇದು ಮುಂದುವರಿದು ರಾಜ್ಯದಲ್ಲಿ ದಂಗೆ, ಗಲಭೆ ಉಂಟಾದರೆ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಎಚ್.ಕೆ.ಪಾಟೀಲ್ ನೇರ ಕಾರಣ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಹಿಜಾಬ್ ನಿಷೇಧ ಬಳಿಕ ರಾಜ್ಯದಲ್ಲಿ ಶಾಂತಿ ನೆಲೆಸಿದೆ. ಇಂತಹ ಸಂದರ್ಭದಲ್ಲಿ ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಹಿಜಾಬ್ ನಿಷೇಧ ಆದೇಶ ಹಿಂಪಡೆಯುವುದಕ್ಕೆ ಮುಸ್ಲಿಮರಾರೂ ಮನವಿ ಮಾಡಿಲ್ಲ. ಪ್ರಕರಣ ಸದ್ಯ ಸುಪ್ರೀಂಕೋರ್ಟ್‌ನಲ್ಲಿದ್ದು ವಿದ್ಯಾರ್ಥಿಗಳ ನಡುವೆ ಭೇದ ಮೂಡಿಸುತ್ತಿದ್ದು ನ್ಯಾಯಾಂಗ ನಿಂದನೆ ಕಾರಣಕ್ಕೆ ಕಾನೂನು ಸಚಿವ ಎಚ್.ಕೆ.ಪಾಟೀಲ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರ ಬಳಿಕ ಇದೀಗ ದಲಿತರ ಸರದಿಯಾಗಿದೆ. ಈ ಮೂರು ಸಮುದಾಯಗಳನ್ನು ರಾಜಕೀಯ ಗೊಂಬೆಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಹಾಸ್ಯಾಸ್ಪದವಾಗಿದೆ. ಅಧಿಕಾರಕ್ಕೆ ಬರುತ್ತಿದ್ದಂತೆ ಅಲ್ಪಸಂಖ್ಯಾತ ಸಮುದಾಯಕ್ಕೆ 10 ಸಾವಿರ ಕೋಟಿ ರೂ. ಕೊಡುತ್ತೇವೆಂದು ಹೇಳಿದ್ದರು. ಬರ ಪರಿಹಾರವನ್ನೇ ಕೊಡದ ಸರ್ಕಾರದಿಂದ 10 ಸಾವಿರ ಕೋಟಿ ರೂ. ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net