

ಹುಬ್ಬಳ್ಳಿ : ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎನ್ನುವಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಇದ್ದೂ ಸತ್ತ ಹಾಗೇ ಆಗಿದೆ. ಸಿದ್ದರಾಮಯ್ಯ ಅವರು ಪಂಜರದ ಗಿಳಿಯಂತೆ ಆಗಿದ್ದಾರೆ. ಮೊದಲಿನ ಹಾಗೆ ಅವರು ಸಿಎಂ ಆಗಿ ಉಳಿದಿಲ್ಲ. ಸ್ವಇಚ್ಛೆಯಿಂದ ಒಂದೇ ಒಂದು ಸಣ್ಣ ಅಭಿವೃದ್ಧಿ ಕಾರ್ಯ ಮಾಡಲು ಆಗುತ್ತಿಲ್ಲ ಎಂದು ಕೇಂದ್ರದ ರಾಜ್ಯ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಹೇಳಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದುವರೆಯುತ್ತದೆ ಎಂಬ ನಂಬಿಕೆ ಇಲ್ಲ. ಈ ಉಪ ಚುನಾವಣೆಯಲ್ಲಿ ಸರ್ಕಾರದ ಆಟಾಟೋಪ ನಡೆಯಲ್ಲ. ಜನ ರಾಜ್ಯ ಸರ್ಕಾರಕ್ಕೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಕಾನೂನು ಮುಂದೆ ಯಾರೂ ದೊಡ್ಡವರಲ್ಲ. ಅದು ತನ್ನದೆಯಾದ ಕೆಲಸ ಮಾಡುತ್ತದೆ. ಈ ಹಿಂದೆ ಸಿದ್ದರಾಮಯ್ಯ ಅವರೊಂದಿಗೆ ನಾವೆಲ್ಲ ಒಟ್ಟಿಗೆ ಕೆಲಸ ಮಾಡಿದ್ದೇವೆ. ಸಿದ್ದರಾಮಯ್ಯ ಅವರು ಮೊದಲಿನ ವರ್ಚಸ್ಸು ಉಳಿಸಿಕೊಂಡಿಲ್ಲ. ಅವರು ಬದಲಾಗಿದ್ದಾರೆ. ಅವರಿಂದ ರಾಜ್ಯಕ್ಕೆ ಒಳ್ಳೆಯದಾಗುವ ಭರವಸೆ ಉಳಿದಿಲ್ಲ ಎಂದರು.
ರಾಜ್ಯಕ್ಕೆ ಜೆಪಿಸಿ ತಂಡ ಆಗಮಿಸುತ್ತಿರುವುದೇ ಅನಧಿಕೃತ ಎಂಬ ವಕ್ಪ್ ಸಚಿವ ಜಮೀರ್ ಅಹ್ಮದ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಿ. ಸೋಮಣ್ಣ, ಮೊದಲು ಅವರು ಕಾನೂನು ಅರಿತುಕೊಳ್ಳಲಿ. ಈ ರೀತಿಯಾಗಿ ಏಕೆ ಹೇಳಿಕೆ ಕೊಟ್ಟರು ಎಂಬುದು ಗೊತ್ತಿಲ್ಲ. ಅವರಿಗೆ ಮುಸ್ಲಿಮರು ಮಾತ್ರ ಮತ ಹಾಕಿಲ್ಲ. ಎಲ್ಲರೂ ಹಾಕಿದ್ದಾರೆ. ಅವರು ಮೊದಲು ಮಂತ್ರಿ ಕೆಲಸ ಮಾಡಲಿ. ಅದನ್ನು ಬಿಟ್ಟು ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಷ್ಟ್ರಕ್ಕೆ ಬಸವರಾಜ ಬೊಮ್ಮಾಯಿ ಅವಶ್ಯಕತೆ ಇದೆ ಎಂಬ ಪ್ರಧಾನಿ ಮೋದಿಯವರ ಅಪೇಕ್ಷೆ ಮೇರೆಗೆ ಅವರು ಸಂಸದರಾಗಿದ್ದು, ಅವರ ಮಗನನ್ನು ಶಿಗ್ಗಾಂವಿ ಕ್ಷೇತ್ರದ ಚುನಾವಣೆ ಕಣಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲಿಸಲಾಗಿದೆ. ಮಾಜಿ ಸಿಎಂ ಬೊಮ್ಮಾಯಿ ಅವರು ತಮ್ಮ ಕ್ಷೇತ್ರದಲ್ಲಿ ಈ ಹಿಂದೆ ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ಪ್ರಧಾನಿ ಮೋದಿಯವರು ಕೈಗೊಂಡ ಕಾರ್ಯಗಳು ಗೆಲುವಿಗೆ ಸಹಕಾರಿ ಆಗಲಿದೆ. ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.