

ಹೊಳೆನರಸೀಪುರ: ಹಿಂದುಳಿದ, ಶೋಷಿತರ, ದಲಿತರ ಅಲ್ಪಸಂಖ್ಯಾತರ ಬೆಂಬಲದಿಂದ ಸಿದ್ದರಾಮಯ್ಯ 2ನೇ ಬಾರಿ ಮುಖ್ಯಮಂತ್ರಿ ಆಗಿದ್ದಾರೆ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಅಣ್ಣೇಚಾಕನಹಳ್ಳಿ ಹೊನ್ನಾಳಮ್ಮ ದೇವಾಲಯ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಮಂಗಳವಾರ ಅನಾವರಣಗೊಳಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ನೀಡಿದ್ದ 165 ಭರವಸೆಗಳಲ್ಲಿ 160 ಭರವಸೆಗಳನ್ನು ಈಡೇರಿಸಿದ್ದಾರೆ ಎಂದರು.
ಎರಡೇ ಬಾರಿ ಮುಖ್ಯಮಂತ್ರಿ ಆದಾಗ ಚುನಾವಣೆಗೆ ಮುನ್ನ ನೀಡಿದ್ದ 5 ಗ್ಯಾರಂಟಿಗಳಲ್ಲಿ 5ನ್ನೂ ಈಡೇರಿಸಿದ್ದಾರೆ. ಇದಕ್ಕಾಗಿ ವಾರ್ಷಿಕ 56 ಸಾವಿರ ಕೋಟಿ ರೂ.ಗಳನ್ನು ಸರ್ಕಾರ ನೀಡುತ್ತಿದೆ. ಇಂತಹ ಮಹತ್ತರವಾದ ಕಾರ್ಯದ ಅನುಕೂಲ ನಿಮಗೆಲ್ಲ ಆಗಿದ್ದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ, ನಿಮಗೆಲ್ಲರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ನೀಡಲು ಸಹಕರಿಸಿ. ಹಳ್ಳಿಮೈಸೂರು ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಿ ಎನ್ನುವ ಬೇಡಿಕೆ ಇದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿ ಜತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.
ಕೆ.ಆರ್.ನಗರ ಶಾಸಕ ರವಿಶಂಕರ್ ಮಾತನಾಡಿ, ಹಿಂದುಳಿದವರು ಬೆಳೆಯಬೇಕೆಂದರೆ ರಾಜಕೀಯ ಶಕ್ತಿ ಬೇಕು. ಅಂತಹ ರಾಜಕೀಯ ಶಕ್ತಿಯನ್ನು ಹಿಂದುಳಿದ ಹಾಗೂ ಉತ್ತಮ ನಾಯಕರಿಗೆ ನೀಡಿ ಎಂದರು.
ಕಾಂಗ್ರೆಸ್ ಮುಖಂಡ ಶ್ರೇಯಶ್ ಪಟೇಲ್ ಮಾತನಾಡಿ, ಹಳ್ಳಿಮೈಸೂರು ಹೋಬಳಿ ಮೊದಲು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿತ್ತು. ಕುರುಬ ಸಮಾಜದ ಜನರನ್ನು ನಂಬದ ನಾಯಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅರಕಲಗೂಡು ಕ್ಷೇತ್ರಕ್ಕೆ ಸೇರಿಸಿದ್ದು ಎಲ್ಲರಿಗೂ ಗೊತ್ತಿರುವ ಸತ್ಯ. ಇಂತಹ ತಪ್ಪು ನಿರ್ಧಾರಕ್ಕೆ ತಕ್ಕ ಉತ್ತರ ನೀಡಲು ಜನ ಲೋಕಸಭಾ ಚುನಾವಣೆಗಾಗಿ ಕಾಯುತ್ತಿದ್ದಾರೆ ಎಂದರು.
ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಪಟೇಲ್ ಶಿವಪ್ಪ ಮಾತನಾಡಿದರು. ಪ್ರತಿಮೆ ದಾನಿ ದಿವಾಕರಗೌಡ, ಹೊನ್ನಿಕೊಪ್ಪಲು ಮಂಜು, ಬಾಗೀವಾಳು ಮಂಜು, ಶರತ್, ಭರತ್, ಡಾ.ಬೀರೇಶ್, ನಿವೃತ್ತ ಐಎಎಸ್ ಅಧಿಕಾರಿ ಎಸ್.ಪುಟ್ಟಸ್ವಾಮಿ, ಎ.ಡಿ.ಚಂದ್ರಶೇಖರ್, ಇತರರು ಇದ್ದರು.