ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ವಾಣಿಜ್ಯ ಮೇಳಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

siri
Published on

ಬೆಂಗಳೂರು: ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ದೇಶದಲ್ಲಿ ಆಹಾರದ ಕೊರತೆ ಇತ್ತು. ಆದರೆ ಸದ್ಯ ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ರಾಜ್ಯ ಕೃಷಿ ಇಲಾಖೆ ಆಯೋಜಿಸಿರುವ ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ವಾಣಿಜ್ಯ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಸಾವಯವ ಕೃಷಿ ಪದ್ಧತಿ, ಸಿರಿಧಾನ್ಯಗಳ ಬಳಕೆ ಬಹಳ ಹಿಂದಿನ ಕಾಲದಿಂದಲೂ ಇದೆ. ವಿಸ್ತೀರ್ಣದ ದೃಷ್ಟಿಯಿಂದ 2ನೇ ಅತಿದೊಡ್ಡ ರಾಷ್ಟ್ರವಾಗಿರುವ ಭಾರತದಲ್ಲಿ ಸಿರಿಧಾನ್ಯ ಉತ್ಪಾದನೆಯಲ್ಲಿ ಜಗತ್ತಿನಲ್ಲೆ ಮೊದಲ ಸ್ಥಾನದಲ್ಲಿದೆ. ಜಗತ್ತಿನಲ್ಲಿ ಉತ್ಪಾದನೆಯಾಗುವ ಸಿರಧಾನ್ಯದಲ್ಲಿ ಶೇ.38ರಷ್ಟು ಭಾರತವೊಂದರಲ್ಲೇ ಉತ್ಪಾದನೆಯಾಗುತ್ತಿದೆ. ದೇಶದಲ್ಲಿ ಕರ್ನಾಟಕ ವಿಸ್ತೀರ್ಣದಲ್ಲಿ 3ನೇ ರಾಜ್ಯವಾಗಿದ್ದು, ಸಿರಿಧಾನ್ಯ ಉತ್ಪಾದನೆಯಲ್ಲೂ 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಸಿರಿಧಾನ್ಯದ ಶೇ.25ರಷ್ಟು ವಿದೇಶಗಳಿಗೆ ರ‌್ತಾಗುತ್ತಿದೆ. 2017ರಲ್ಲಿ ಸಾವಯವ ಕೃಷಿ ನೀತಿ ಜಾರಿಯಾದ ನಂತರ ಸಾವಯವ ಕೃಷಿಯ ಬಗ್ಗೆ ರೈತರು ಹೆಚ್ಚು ಆಸಕ್ತರಾಗಿದ್ದಾರೆ. ರೈತಸಿರಿ ಯೋಜನೆಯಡಿ ಸಿರಿಧಾನ್ಯ ಬೆಳೆಯುವ ರೈತರಿಗೆ ಹೆಕ್ಟೇರ್ ಒಂದಕ್ಕೆ 10 ಸಾವಿರ ಪ್ರೋತ್ಸಾಹ ಧನ ದೊರೆಯುತ್ತಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಎಪಿಎಂಸಿ ವ್ಯಾಪ್ತಿಯಲ್ಲಿ ಸಿರಿಧಾನ್ಯದ ಮಾರುಕಟ್ಟೆ ಸ್ಥಾಪನೆಗೆ ಪ್ರಯತ್ನಿಸುವುದಾಗಿ ಸಿಎಂ ಭರವಸೆ ನೀಡಿದರು. ಹೆಬ್ಬಾಳದಲ್ಲಿ ನಿರ್ಮಿಸಲು ಉದ್ದೇಶಿಸಿರುವ 20 ಕೋಟಿ ರೂ.ವೆಚ್ಚದ ಮಿಲೆಟ್ ಹಬ್ ಕಟ್ಟಡಕ್ಕೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ರಾಜ್ಯದ ಸಾವಯವ ಸಿರಿಧಾನ್ಯ ಕೃಷಿಯಲ್ಲಿ ಶೇ90ರಷ್ಟು ಸಾಧನೆ ಮಾಡಿರುವ ಹೊಸದುರ್ಗ ಕ್ಷೇತ್ರದ ಶಾಸಕ ಹಾಗೂ ಮೂಲತಃ ಕೃಷಿಕರಾಗಿರುವ ಗೋವಿಂದಪ್ಪ ಅವರನ್ನು ಸನ್ಮಾನಿಸಲಾಯಿತು. ಹಾಗೂ ಮಹಿಳೆಯರಿಗಾಗಿ ಏರ್ಪಡಿಸಿದ್ದ ಅಡುಗೆ ಮಾಡುವ ಸ್ಪರ್ಧೆಯ ವಿಜೇತರಿಗೆ ಸಿಎಂ ಬಹುಮಾನ ವಿತರಿಸಿದರು. ಸಮಾರಂಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಅರುಣಾಚಲ ಪ್ರದೇಶ, ಪಾಂಡಿಚೆರಿ ಮತ್ತು ಜಾರ್ಖಂಡ್ ರಾಜ್ಯಗಳ ಕೃಷಿ ಸಚಿವರು ಸೇರಿ ವಿವಿಧ ರಾಜ್ಯ ಮತ್ತು ವಿದೇಶಗಳ ಗಣ್ಯರು ಪಾಲ್ಗೊಂಡಿದ್ದರು.

ರೈತರಿಗೆ ಪ್ರತ್ಯೇಕ ರಫ್ತು ವಿಭಾಗ ಅಗತ್ಯ

ರಾಜ್ಯದಲ್ಲಿ ಇರುವ ರಫ್ತು ವಿಭಾಗ ಇಂಡಸ್ಟ್ರಿ ಇಲಾಖೆಯ ಅಧೀನದಲ್ಲಿದ್ದು, ಇದರಿಂದ ರೈತರಿಗೆ ಸಮರ್ಪಕ ಸೇವೆ ಸಾಧ್ಯವಿಲ್ಲ. ಆ ಕಾರಣಕ್ಕೆ ಹಿಂದೆ ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ರೈತರು ಬೆಳೆದ ಬೆಳೆಗಳ ರಫ್ತಿಗೆ ಪ್ರತ್ಯೇಕ ವಿಭಾಗ ಸ್ಥಾಪಿಸುವ ಬಗ್ಗೆ ಚಿಂತನೆ ನಡೆದಿತ್ತು. ಸರ್ಕಾರ ಅದನ್ನು ಜಾರಿಗೊಳಿಸಿದರೆ ರೈತರು ಬೆಳೆದ ಹಣ್ಣು, ತರಕಾರಿ, ಹೂವು ಇತ್ಯಾದಿ ಬೆಳೆಗಳನ್ನು ಸಕಾಲಕ್ಕೆ ರಫ್ತು ಮಾಡಲು ಸಹಾಯವಾಗುತ್ತದೆ ಎಂದು ಕೆಂದ್ರ ಎಂಎಸ್‌ಎಂಇ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

‘ರೆಡಿ ಟು ಕುಕ್, ರೆಡಿ ಟು ಈಟ್’ ಪರಿಕಲ್ಪನೆ ವಿದೇಶಗಳ ಬೇಡಿಕೆಯ ಪ್ರಮುಖಾಂಶ ಇದನ್ನು ಗಮನದಲ್ಲಿಟ್ಟುಕೊಂಡು ರೈತರು ಗುಣಮಟ್ಟದ ಬೆಳೆ ಬೆಳೆಯಬೇಕು ಎಂದು ಸಚಿವರು ಸಲಹೆ ನೀಡಿದರು.

300ಕ್ಕೂ ಹೆಚ್ಚಿನ ಮಳಿಗೆ, ವಿವಿಧ ಗೋಷ್ಠಿ

ಮೂರು ದಿನಗಳ ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ವಾಣಿಜ್ಯ ಮೇಳ ಶನಿವಾರ (ಜ.25) ದವರೆಗೆ ನಡೆಯಲಿದ್ದು, ಹತ್ತು ಹಲವು ವಿಷಯಗಳನ್ನು ಒಳಗೊಂಡಿದೆ. 300ಕ್ಕೂ ಹೆಚ್ಚಿನ ಮಳಿಗೆಗಳನ್ನು ತೆರೆಯಲಾಗಿದ್ದು, ರೈತರು ಬೆಳೆದ ಸಿರಿಧಾನ್ಯದ ಜೊತೆಗೆ ಗೃಹ ಕೈಗಾರಿಕೆಯಲ್ಲಿ ತಯಾರಾದ ಹಲವು ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ದೇಸಿ ತುಪ್ಪ, ಕೊಬ್ಬರಿ ಎಣ್ಣೆ, ಶೇಂಗಾ ಎಣ್ಣೆ, ಜೇನುತುಪ್ಪ, ಸಾವಯವ ಬೆಲ್ಲ, ಮಿಲೆಟ್ ಐಸ್‌ಕ್ರೀಮ್, ಮಿಲೆಟ್ ಮಾಲ್ಟ್ ಇತ್ಯಾದಿ ತರಹೇವಾರಿ ವಸ್ತುಗಳು ಮಾರಾಟಕ್ಕಿವೆ. ಜೊತೆಗೆ ಕೃಷಿಕ್ಷೇತ್ರದ ಆವಿಷ್ಕಾರ, ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ, ರೈತರಿಗೆ ಸಂಬಂಧಪಟ್ಟ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಮಣ್ಣಿನ ಕುರಿತ ಪ್ರಾತ್ಯಕ್ಷಿಕೆ, ದೇಸಿ ತಳಿಗಳ ಪ್ರದರ್ಶನ, ಉತ್ಪಾದಕರು ಮತ್ತು ಗ್ರಾಹಕರ ಸಭೆ, ಉತ್ಪಾದಕರು ಮತ್ತು ಮಾರುಕಟ್ಟೆದಾರರ ಸಭೆ, ಅಂತಾರಾಷ್ಟ್ರೀಯ ಸಮ್ಮೇಳನ, ವಿದೇಶಿ ತಜ್ಞರಿಂದ ರೈತರಿಗಾಗಿ ಕಾರ್ಯಾಗಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ರಾಜ್ಯ ಸರ್ಕಾರ ಸಿರಿಧಾನ್ಯವನ್ನು ಜನರಿಗೆ ಪರಿಚಯಿಸುವುದು ಹಾಗೂ ರೈತರಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಮೇಳವನ್ನು ಆಯೋಜಿಸಿದ್ದು, ವರ್ಷದಿಂದ ವರ್ಷಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಹಿಂದೊಂದು ಕಾಲಕ್ಕೆ ಬಡವರ ಆಹಾರವೆನ್ನಲಾಗುತ್ತಿದ್ದ ಸಿರಿಧಾನ್ಯಗಳು ಇಂದು ಉತ್ತಮ ಆರೋಗ್ಯದಿಂದ ಶ್ರೀಮಂತರ ಆಹಾರವಾಗಿದೆ. ಸರ್ಕಾರ ಸಿರಿಧಾನ್ಯ ಬೆಳಗಾರರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದ್ದು, ವಿದ್ಯಾವಂತರು ಕೂಡಾ ಕೃಷಿಯತ್ತ ಮರಳುತ್ತಿದ್ದಾರೆ. -ಎನ್.ಚೆಲುವರಾಯಸ್ವಾಮಿ, ಕೃಷಿ ಸಚಿವ
ನಮ್ಮ ರಾಜ್ಯ ಕೇವಲ ಐಟಿ, ಬಿಟಿಯಲ್ಲಿ ಮಾತ್ರವಲ್ಲ ಕೃಷಿ, ತೋಟಗಾರಿಕೆ, ಹಾಲು ಉತ್ಪಾದನೆಯಲ್ಲೂ ಮುಂಚೂಣಿಯಲ್ಲಿದೆ. ಹಿಂದೆ ಪ್ರಾಣಿಗಳಿಗೆ ಮಾತ್ರ ಬಳಸುತ್ತಿದ್ದ ಸಿರಿಧಾನ್ಯ ಇಂದು ಬಹುಬೇಡಿಕೆಯ ಆಹಾರವಾಗಿದೆ. ರೈತರಿಗೆ ಪವರ್ ಫ್ರೀ ಕೊಡ್ತಾ ಇರೋದರಿಂದ ಅದರ ಬೆಲೆ ಗೊತ್ತಾಗುತ್ತಿಲ್ಲ. ಶೇ.1ರಷ್ಟಾದರೂ ಸರ್ಕಾರಕ್ಕೆ ಹಣ ಪಾವತಿಸಿದರೆ ಅದರ ಬೆಲೆ ಗೊತ್ತಾಗುತ್ತದೆ. -ಡಿ.ಕೆ.ಶಿವಕುಮಾರ್, ಡಿಸಿಎಂ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net