

ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಎರಡು ಹಗರಣಗಳು ಸುತ್ತಿಕೊಂಡಿವೆ. ಈಗಲಾದರೂ ಎಚ್ಚೆತ್ತುಕೊಳ್ಳಬೇಕಿತ್ತು. ಆದರೀಗ, ಜಿಂದಾಲ ಕಂಪನಿಗೆ ಜಮೀನು ನೀಡುವ ಮೂಲಕ ಮತ್ತೊಂದು ಹಗರಣಕ್ಕೆ ಕೈ ಹಾಕಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ದೂರಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬೆಲ್ಲದ, ಮುಖ್ಯಮಂತ್ರಿ ಸ್ಥಾನ ಶೀಘ್ರದಲ್ಲಿಯೇ ತಪ್ಪಲಿದೆ ಎಂಬುದು ಸಿದ್ದರಾಮಯ್ಯ ಅವರಿಗೆ ಮನವರಿಕೆ ಆದಂತಾಗಿದೆ. ಹೀಗಾಗಿಯೇ, ಎಷ್ಟು ಸಾಧ್ಯವೋ ಅಷ್ಟು ಹಣ ದೋಚಲು ಮುಂದಾದಂತಿದೆ ಎಂದು ವ್ಯಂಗ್ಯವಾಡಿದರು.
ಬಳ್ಳಾರಿ ಜಿಲ್ಲೆಯ ಸಾವಿರಾರು ಎಕರೆ ಜಮೀನನ್ನು ಸರ್ಕಾರ ಜಿಂದಾಲ ಕಂಪನಿಗೆ ಕವಡೆ ಕಾಸಿಗೆ ನೀಡುತ್ತಿದ್ದು, ಇದಕ್ಕೆ ಅವಕಾಶ ಕೊಡುವುದಿಲ್ಲ. ಸರ್ಕಾರದ ಈ ನಿರ್ಧಾರದ ವಿರುದ್ಧ ಕಾನೂನಾತ್ಮಕ ಹೋರಾಟದ ಜತೆಗೆ ಸಾರ್ವಜನಿಕರೊಂದಿಗೆ ಬೀದಿಗಿಳಿದು ಹೋರಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಅಲ್ಲಿನ ಭೂಮಿಗೆ ಬಂಗಾರದ ಬೆಲೆ ಇದೆ. ಸರ್ಕಾರ ಅಷ್ಟು ಕಿಮ್ಮತ್ತಿನ ಭೂಮಿಯನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿರುವುದು ಸರಿಯಲ್ಲ. ಇದರಲ್ಲಿಯೂ ಸಹ ಸರ್ಕಾರ ಎಷ್ಟು ಹಣ ಹೊಡೆಯಲು ಯೋಚಿಸಿದೆ. ಇನ್ನೂ ಎಷ್ಟು ಭ್ರಷ್ಟಾಚಾರದಲ್ಲಿ ತೊಡಗಬೇಕು ಎಂದುಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಪಾಲರು ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಲ್ಲ. ಭ್ರಷ್ಟ ರಾಜಕಾರಣಿಗಳನ್ನು ಗುರಿಯಾಗಿಸಿದ್ದಾರೆ. ರಾಜ್ಯಪಾಲರ ನೋಟಿಸ್ಗೆ ಮುಖ್ಯಮಂತ್ರಿ ಸಿದ್ದರಾಮಯ ಸಮರ್ಪಕ ಉತ್ತರ ನೀಡದ ಕಾರಣ ವಿಚಾರಣೆಗೆ ಅನುಮತಿ ನೀಡಿದ್ದಾರೆ. ಭಷ್ಟಾಚಾರದಲ್ಲಿ ಸಿಲುಕಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತ ಎಂದರು.
ದ್ವೇಷ ರಾಜಕಾರಣ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ಕುಮಾರಸ್ವಾಮಿ, ಮುರುಗೇಶ ನಿರಾಣಿ ಹಾಗೂ ಇತರ ಬಿಜೆಪಿ ಮುಖಂಡರ ಹೆಸರು ತಂದು, ವಿಷಯಾಂತರ ಮಾಡುತ್ತಿದ್ದಾರೆ ಎಂದು ದೂರಿದರು.