

ಮಂಡ್ಯ: ಮೇಕೆದಾಟು ಯೋಜನೆ ಮಾಡುವುದು ನಮ್ಮ ಹಕ್ಕು. ಆದರೆ ರಾಜಕಾರಣಕ್ಕೆ ತಮಿಳುನಾಡು ಖ್ಯಾತೆ ತೆಗೆಯುತ್ತಾರೆ. ಇವತ್ತಿನವರೆಗೂ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಮಂಜೂರಾತಿ ಕೊಟ್ಟಿಲ್ಲ. ಮಂಡ್ಯ ಸಂಸದರೂ ಆದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿಸುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೆಆರ್ಎಸ್ ಬೃಂದಾವನದಲ್ಲಿ ವೇದಿಕೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾವೇರಿ ವಿವಾದ 4 ರಾಜ್ಯಗಳಿಗೆ ಸಂಬಂಧಿಸಿದ್ದಾಗಿದೆ. ಜಲವಿವಾದ ಸುಪ್ರೀಂ ಕೋರ್ಟ್ನಲ್ಲಿ ತೀರ್ಮಾನ ಆಗಲಿದೆ. ಈ ವರ್ಷ ನಿಗದಿಗಿಂತ ಹೆಚ್ಚು ನೀರು ಹೋಗುವ ಸಾಧ್ಯತೆ. ಮೆಟ್ಟೂರು ಜಲಾಶಯ ಭರ್ತಿ ಬಳಿಕ ನೀರು ಸಮುದ್ರ ಸೇರಲಿದೆ. ಹೆಚ್ಚುವರಿ ನೀರು ಸಂಗ್ರಹಿಸಲು ಮೇಕೆದಾಟು ಯೋಜನೆ ಆಗಬೇಕು. ಇದರಿಂದಾಗಿ 65 ಟಿಎಂಸಿ ನೀರು ಸಂಗ್ರಹ ಮಾಡಬಹುದು. ವಿದ್ಯುತ್ ತಯಾರಿಸಬಹುದು, ಬೆಂಗಳೂರು, ತಮಿಳುನಾಡಿಗೆ ನೀರು ಕೊಡಬಹುದು. ಹಾಗೆ ನೋಡಿದರೆ ಈ ಯೋಜನೆಯಿಂದ ತ.ನಾಡಿಗೆ ಹೆಚ್ಚಿನ ಅನುಕೂಲ ಎಂದರು.
ಕಾವೇರಿ ನಮ್ಮೆಲ್ಲರ ಜೀವನದಿ. ಕಳೆದ ವರ್ಷ ಜಲಾಶಯ ತುಂಬಿರಲಿಲ್ಲ. ನಾನು ಇವತ್ತು ಅತ್ಯಂತ ಸಂತೋಷದಲ್ಲಿದ್ದೇವೆ. ಕಾವೇರಿ ತಾಯಿಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಣೆ ಮಾಡಿ ಪ್ರತಿವರ್ಷ ಇದೇ ರೀತಿ ತುಂಬಲು ಎಂದು ಪ್ರಾಥಿಸಿದ್ದೇನೆ. ಪ್ರಕೃತಿ ವಿಕೋಪದಿಂದ ಅಣೆಕಟ್ಟು ಹಲವು ಬಾರಿ ತುಂಬಿಲ್ಲ. ಮೂರನೇ ಬಾರಿ ಬಾಗಿನ ಅರ್ಪಿಸಿದ್ದೇನೆ. ಕೆಲವೊಮ್ಮೆ ನಮ್ಮ ನಿರೀಕ್ಷೆಯಂತೆ ಮಳೆಯಾಗಲ್ಲ. ಜುಲೈನಲ್ಲೇ ಈ ಬಾರಿ ಜಲಾಶಯಗಳು ತುಂಬಿದೆ. ಕಾವೇರಿ ಜಲಾನಯನದಲ್ಲಿರುವ 4 ಡ್ಯಾಂ ಭರ್ತಿಯಾಗಿದೆ. ಇನ್ನು 1932ರಲ್ಲಿ ವಿಶ್ವೇಶ್ವರಯ್ಯ ನಾಲೆ ನಿರ್ಮಾಣ ಆಗಿತ್ತು. ಹಲವು ಬಾರಿ ನಾಲಾ ಆಧುನಿಕರಣ ನಡೆದಿದೆ. ಕೊನೆ ಭಾಗದ ರೈತರಿಗೆ ನೀರು ಕೊಡಲು ನಾಲಾ ಆಧುನಿಕರಣ ಮಾಡಲು ನಮ್ಮ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ಮೇಕೆದಾಟು ಬಗ್ಗೆ ಬಿಜೆಪಿ, ಜೆಡಿಎಸ್ ಸಂಸದರು ಮಾತನಾಡಲ್ಲ. ಕರ್ನಾಟಕಕ್ಕೆ ಅನ್ಯಾಯದ ಬಗ್ಗೆ ಅವರು ದನಿ ಎತ್ತುವುದಿಲ್ಲ. ಅದನ್ನು ಬಿಟ್ಟು ಕೆಲಸಕ್ಕೆ ಬಾರದ ವಿಚಾರ ಮಾತ್ರ ಮಾತನಾಡುತ್ತಾರೆ. ಬಜೆಟ್ನಲ್ಲಿ ಕರ್ನಾಟಕಕ್ಕೆ ಒಂದು ರೂಪಾಯಿ ಕೊಟ್ಟಿಲ್ಲ. ಆದರೆ ಕರ್ನಾಟಕಕ್ಕೆ ಏನು ಆಗಿಲ್ಲ ಎನ್ನುತ್ತಾರೆ. ಇದರೊಂದಿಗೆ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸುಳ್ಳುಗಳನ್ನು ಹೇಳಿಕೊಂಡು ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಇವರ ಸುಳ್ಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ರಾಜ್ಯದ ಜನರಿಗಿದೆ. ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿದ್ದೇವೆ. ಜೆಡಿಎಸ್, ಬಿಜೆಪಿಯವರಿಂದ ನಮ್ಮ ಸರ್ಕಾರ ಬಂದಿಲ್ಲ. ಆದರೆ ಸುಳ್ಳು ಆರೋಪ ಮಾಡಿ ಸರ್ಕಾರ ದುರ್ಬಲ ಮಾಡುವ ಹುನ್ನಾರ ಮಾಡುತ್ತಿದ್ದಾರೆ. ಆದ್ದರಿಂದ ಯಾವುದು ಸತ್ಯ, ಸುಳ್ಳು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.
ಕರ್ನಾಟಕದ ಜನರು ಪ್ರಬುದ್ದರು. ನಮ್ಮ ಸರ್ಕಾರ ಬಂದಮೇಲೆ ರೈತರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಹಿಂದೆಲ್ಲ ಗೋಲಿಬಾರ್ ನಡೆದು ರೈತರು ಸತ್ತಿದ್ದಾರೆ. ಆದರೆ ನಮ್ಮ ಸರ್ಕಾರದಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಚಲುವರಾಯಸ್ವಾಮಿಗೆ ಸೂಚನೆ ನೀಡಿದ್ದೇನೆ. ಕಳೆದ ವರ್ಷ ಭೀಕರ ಬರಗಾಲವಿದ್ದರೂ ಕೇಂದ್ರ ಸರ್ಕಾರ ಪರಿಹಾರ ಕೊಡಲಿಲ್ಲ. ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಳಿಕ 3,454 ಕೋಟಿ ರೂ ಪರಿಹಾರ ಸಿಕ್ಕಿತು. ಬೇರೆ ರಾಜ್ಯದವರಿಗೆ ಪರಿಹಾರ ಇನ್ನು ಸಿಕ್ಕಿಲ್ಲ. ಪ್ರತಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 700 ಕೋಟಿ ರೂ.ಗೂ ಹೆಚ್ಚು ಹಣವಿದೆ. ಆದರೂ ಸರ್ಕಾರದಲ್ಲಿ ಹಣವಿಲ್ಲ, ಅಭಿವೃದ್ಧಿ ಆಗುತ್ತಿಲ್ಲ ಎನ್ನುತ್ತಾರೆ. ರಾಜ್ಯದಲ್ಲಿ ಯಾವ ಅಭಿವೃದ್ಧಿ ನಿಂತಿದೆ. ಬಡವರಿಗೆ ಪ್ರತಿ ತಿಂಗಳು 4 ರಿಂದ 5 ಸಾವಿರ ರೂ ಸಿಗುವಂತೆ ಮಾಡಿದ್ದೇವೆ. ಬಿಜೆಪಿ, ಜೆಡಿಎಸ್ಗೆ ತಾಕತ್ತಿದ್ದರೆ ಬಡವರ ವಿರುದ್ಧ ಹೇಳಿಕೆ ನೀಡಲಿ. ಗ್ಯಾರಂಟಿ ನಿಲ್ಲಿಸಲಿ ಎಂದು ಧಮ್ಮಿದ್ದರೆ ಹೇಳಲಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ದಲಿತ ವಿರೋಧಿ ಎನ್ನುತ್ತಾರೆ. ಆದರೆ ನಾವು ದಲಿತರಿಗೆ ಮಾಡಿದ ಕೆಲಸ ಬೇರೆ ಯಾವ ಸರ್ಕಾರವೂ ಮಾಡಿಲ್ಲ. ಬಿಜೆಪಿ ದಲಿತರ ವಿರೋಧಿಗಳು. ಎಸ್ಸಿಪಿಟಿಎಸ್ಪಿ ಕಾಯ್ದೆ ನಮ್ಮ ಸರ್ಕಾರ ಬಿಟ್ಟರೆ, ಬಿಜೆಪಿ ನೇತೃತ್ವದ ಯಾವ ರಾಜ್ಯದಲ್ಲಿದೆ.? ವಿಪಕ್ಷ ನಾಯಕ ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರನಿಗೆ ಇದನ್ನ ಕೇಳುತ್ತೇನೆ. ದಲಿತರ ಬಗ್ಗೆ ಮಾತನಾಡಲು ನಿಮಗೆ ನೈತಿಕತೆ ಇದೆಯಾ?. ಇವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಬಿಜೆಪಿಯವರು ಹಿಟ್ಲರ್ ವಂಶಸ್ಥರು. ಹೇಳಿದ ಸುಳ್ಳನ್ನೇ ನೂರು ಸಲ ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.