ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಸಿಎಂ ಮುಂದಾಗಲಿ: ಮಾಜಿ ಮೇಯರ್ ಶಿವಕುಮಾರ್

shivkumar
Published on

ಮೈಸೂರು: ರಾಜ ಪರಂಪರೆಯನ್ನು ಹೊಂದಿರುವ ಸಾಂಸ್ಕೃತಿಕ ನಗರಿಯಲ್ಲಿ ಪಾರಂಪರಿಕ ಕಟ್ಟಡಗಳು ಕುಸಿಯುತ್ತಿದ್ದು, ಅವುಗಳನ್ನು ಸಂರಕ್ಷಣೆಗೆ ತವರು ಜಿಲ್ಲೆಯವರೇ ಅದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಬೇಕು ಎಂದು ಮಾಜಿ ಮೇಯರ್ ಶಿವಕುಮಾರ್ ಆಗ್ರಹಿಸಿದರು.

ಮೈಸೂರು ಪಾರಂಪರಿಕ ತಾಣವಾಗಿದ್ದು 100 ವರ್ಷ ಪೂರೈಸಿರುವ 234 ಪಾರಂಪರಿಕ ಕಟ್ಟಡಗಳನ್ನು ಗುರುತಿಸಲಾಗಿದೆ. ಅದರಲ್ಲಿ ಸರ್ಕಾರಿ ಕಚೇರಿಗಳಿರುವ 129 ಕಟ್ಟಡಗಳನ್ನು ಪಾರಂಪರಿಕ ಕಟ್ಟಡಗಳು ಎಂದು ಅಧಿಕೃತವಾಗಿ ಘೋಷಿಸಿದೆ. ಆದರೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಎಫ್‌ಟಿಆರ್‌ಐ ಸೇರಿದಂತೆ ಒಂದೆರಡು ಕಟ್ಟಡಗಳನ್ನು ಬಿಟ್ಟು ಉಳಿದೆಲ್ಲವೂ ಕುಸಿಯುವ ಹಂತದಲ್ಲಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ಮಹಾರಾಣಿ ಕಾಲೇಜಿನ ಕಟ್ಟಡ, ಲ್ಯಾನ್ಸ್‌ಡೌನ್, ದೇವರಾಜ ಮಾರುಕಟ್ಟೆಯ ಒಂದು ಭಾಗ ಕುಸಿದು ಬಿದ್ದಿದೆ. ಈಗ ಮಹಾರಾಜ ಕಾಲೇಜು ಕಟ್ಟಡಕ್ಕೆ 170 ವರ್ಷಗಳಾಗಿದ್ದು, ಕಾಲೇಜಿನ ಕಟ್ಟಡ ಬೀಳುವ ಸ್ಥಿತಿಯಲ್ಲಿದೆ. ಗ್ರಂಥಾಲಯದ ಬಾಗಿಲನ್ನು ಮುಚ್ಚಲಾಗಿದೆ. ಇದರ ಸಮೀಪದಲ್ಲಿರುವ ಮಹಾರಾಜ ಹಾಸ್ಟೆಲ್ ಕಟ್ಟಡದಲ್ಲಿ ಶಿಥಿಲಗೊಂಡ ಭಾಗಕ್ಕೆ ವಿದ್ಯಾರ್ಥಿಗಳು ಪ್ರವೇಶ ಮಾಡದಂತೆ ಮಾಡಲಾಗಿದೆ ಎಂದು ಹೇಳಿದರು.

ವೇದ, ಆಗಮ ಅಭ್ಯಾಸಕ್ಕಾಗಿ ಮಹಾರಾಜರು ಕಟ್ಟಿಸಿದ ಸಂಸ್ಕೃತ ಪಾಠಶಾಲೆ ಕಟ್ಟಡ ಕುಸಿಯುತ್ತಿದೆ. ಪ್ರಾಚ್ಯವಸ್ತು ಸಂಗ್ರಹಾಲಯದ ಕಟ್ಟಡದಲ್ಲಿ ಕೌಟಿಲ್ಯನ ಅರ್ಥಶಾಸ್ತ ಸೇರಿದಂತೆ 46 ಸಾವಿರ ತಾಳೆಗರಿಗಳಿದ್ದು, ಕಟ್ಟಡ ಸಂರಕ್ಷಿಸಬೇಕಿದೆ. ಕೆ.ಆರ್.ವೃತ್ತದ ಕಟ್ಟಡಗಳ ಸೆಲ್ಲರ್‌ಗಳ ಕಬ್ಬಿಣ ಹೊರಗೆ ಬಂದಿದೆ. ಕಾವೇರಿ ಎಂಪೋರಿಯಮ್, ಇಲವಾಲ ಪ್ಯಾಲೇಸ್ ಮುಂತಾದ ಕಟ್ಟಡಗಳ ಸ್ಥಿತಿ ಶೋಚನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಲಲಿತಮಹಲ್, ಸರ್ಕಾರಿ ಅತಿಥಿಗೃಹ, ಮಹಾರಾಣಿ ಕಾಲೇಜು, ಸಬ್‌ಅರ್ಬನ್ ಬಸ್ ನಿಲ್ದಾಣ ಸಮೀಪದಲ್ಲಿರುವ ಗೇಟ್‌ಗಳು ಮತ್ತು ವೀರನಗೆರೆ ಕೋಟೆಗಳ ಮೇಲೆ ಗಿಡಗಂಟಿಗಳು ಬೆಳೆದುಕೊಂಡಿವೆ. ಇವು ನಮ್ಮ ಪಾರಂಪರಿಕ ಹೆಗ್ಗುರುತುಗಳಾಗಿದ್ದು, ಇವುಗಳನ್ನು ಸಂರಕ್ಷಣೆ ಮಾಡಬೇಕಿದೆ ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಯುವರಾಜ ಕಾಲೇಜಿನಲ್ಲಿ ಬಿ.ಎಸ್ಸಿ. ವ್ಯಾಸಂಗ ಮಾಡಿದ್ದಾರೆ. ಅವರು ಓದಿದ ಕಾಲೇಜು ಕಟ್ಟಡವೂ ಸೋರುತ್ತಿದೆ. ಸಿದ್ದರಾಮಯ್ಯ ಅವರಿಗೆ ಮೈಸೂರು, ಇಲ್ಲಿನ ಪರಂಪರೆಯ ಬಗ್ಗೆ ಅಪಾರ ಪ್ರೀತಿ ಇದೆ. ಅವರು ಮನಸ್ಸು ಮಾಡಿದರೆ ಮೈಸೂರಿನ ಪಾರಂಪರಿಕ ಕಟ್ಟಡಗಳು ಉಳಿಯಲಿವೆ ಎಂದರು.

ನಾನು ಮೇಯರ್ ಆಗಿದ್ದ ಅವಧಿಯಲ್ಲೇ ಪಾರಂಪರಿಕ ತಜ್ಞ ಪ್ರೊ.ರಂಗರಾಜು ಅವರ ಸಲಹೆಯಂತೆ 2.80 ಕೋಟಿ ರೂ. ವೆಚ್ಚದಲ್ಲಿ ಕಮಾನುಗಳ ಸಂರಕ್ಷಣೆಗೆ ವರದಿ ಸಿದ್ಧಪಡಿಸಿ ಪಾರಂಪರಿಕ ಸಮಿತಿಗೆ ಸಲ್ಲಿಸಲಾಗಿತ್ತು. ಇದುವರೆಗೂ ಯಾವುದೇ ಕ್ರಮ ಆಗಿಲ್ಲ ಎಂದರು.

ಜಿಲ್ಲಾಧಿಕಾರಿಯಾಗಿದ್ದ ಡಾ.ಕೆ.ವಿ.ರಾಜೇಂದ್ರ ಅವರು ಪಾರಂಪರಿಕ ತಜ್ಞರೊಂದಿಗೆ ಶಿಥಿಲಾವಸ್ಥೆಯಲ್ಲಿರುವ 10 ಕಟ್ಟಡಗಳನ್ನು ಗುರುತಿಸಿದ್ದರು. ಅವುಗಳ ಪುನಶ್ಚೇತನಕ್ಕೆ 96 ಕೋಟಿ ರೂ.ಗಳ ಅನುದಾನ ನೀಡುವಂತೆ ಸರ್ಕಾರಕ್ಕೆ ಮೇ ತಿಂಗಳಲ್ಲೇ ಪ್ರಸ್ತಾವನೆ ಕಳುಹಿಸಿದ್ದಾರೆ. ಈ ಮನವಿಯನ್ನು ಸರ್ಕಾರ ಪರಿಗಣಿಸಿ ತ್ವರಿತವಾಗಿ ಕ್ರಮಕೈಗೊಳ್ಳಬೇಕು. ಜಿಲ್ಲೆಯವರೇ ಅದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ಪಾರಂಪರಿಕ ಕಟ್ಟಡಗಳನ್ನು ರಕ್ಷಿಸಲು ಅಗತ್ಯ ನೆರವು, ತಜ್ಞರ ನೇಮಕಗೊಳಿಸಬೇಕು ಎಂದು ಆಗ್ರಹಿಸಿದರು.

ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ವಿಚಾರದಲ್ಲಿ ಯಾವುದೇ ರಾಜಕೀಯ ಲಾಭ ನಷ್ಟದ ಪ್ರಶ್ನೆಯೇ ಇಲ್ಲ. ನಗರದ ಘನತೆ ಉಳಿಯಬೇಕೆಂಬುದು ಮಾತ್ರ ನಮ್ಮ ಉದ್ದೇಶ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ ಇದ್ದರೆ ಪಕ್ಷಾತೀತವಾಗಿ ಸಂಸದರು, ಶಾಸಕರು, ಮಾಜಿ ಶಾಸಕರು, ಪಾರಂಪರಿಕ ತಜ್ಞರನ್ನು ಒಳಗೊಂಡ ನಿಯೋಗ ಮುಖ್ಯಮಂತ್ರಿ ಭೇಟಿಯಾಗಿ ಮನವರಿಕೆ ಮಾಡಿಕೊಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾಜಿ ಉಪ ಮೇಯರ್ ರೂಪಾ, ನಗರಪಾಲಿಕೆ ಮಾಜಿ ಸದಸ್ಯರಾದ ಬಿ.ವಿ.ಮಂಜುನಾಥ್, ಸುಬ್ಬಯ್ಯ, ರಂಗಸ್ವಾಮಿ ಇತರರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net