ಸಿಎಂ ರಾಜೀನಾಮೆ ನೀಡುವುದು ಸೂಕ್ತ: ಯದುವೀರ್

Yaduveer Krishnadatta Chamaraja Wadiyar
ಸಂಸದ, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್
Published on

ಶಿವಮೊಗ್ಗ: ಮುಡಾ ಹಗರಣದ ತನಿಖೆ ಮುಕ್ತ ಮತ್ತು ಪಾರದರ್ಶಕವಾಗಿ ಆಗಬೇಕಾದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಸಂಸದ, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನ ಜವಾಬ್ದಾರಿಯುತವಾದುದು. ಅದಕ್ಕೆ ಎಲ್ಲರೂ ಗೌರವ ನೀಡಲೇಬೇಕು. ಈಗಾಗಲೇ ಸಿದ್ದರಾಮಯ್ಯ ಮೇಲೆ ಎಫ್‌ಐಆರ್ ದಾಖಲಾಗಿರುವ ಕಾರಣ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.
ಮುಡಾ ಹಗರಣದಲ್ಲಿ ಏನೆಲ್ಲ ಆಗಿದೆ ಎಂಬುದು ಈಗಾಗಲೇ ಜಗ್ಗಜಾಹೀರಾಗಿದೆ. ಹೈಕೋರ್ಟ್ ಆದೇಶದ ಮೇರೆಗೆ ಲೋಕಾಯುಕ್ತ ಸಂಸ್ಥೆ ಎಫ್‌ಐಆರ್ ದಾಖಲಿಸಿದೆ. ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಮುಂದುವರಿಯುವುದರಿಂದ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿದೆ. ಆ ಕಾರಣಕ್ಕೆ ಅವರು ರಾಜೀನಾಮೆ ನೀಡುವುದೇ ಸೂಕ್ತ ಎಂದು ಪುನರುಚ್ಛರಿಸಿದರು.
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ವಿಚಾರದಲ್ಲಿ ರಾಜ್ಯ ಸರ್ಕಾರದ ಪಾತ್ರ ಇರದಿದ್ದರೆ ಒಳ್ಳೆಯದು ಎಂಬುದು ನಮ್ಮ ಅಭಿಪ್ರಾಯ. ಅದನ್ನು ಈಗಾಗಲೇ ಸರ್ಕಾರದ ಗಮನಕ್ಕೂ ತರಲಾಗಿದೆ. ಆ ವಿಚಾರ ಈಗಾಗಲೇ ಹೈಕೋರ್ಟ್‌ನಲ್ಲಿದ್ದು ಆ ಬಗ್ಗೆ ಹೆಚ್ಚು ಸ್ಪಷ್ಟನೆ ನೀಡುವುದಿಲ್ಲ. ಕಾನೂನಾತ್ಮಕವಾಗಿ ಮುಂದುವರಿಯುತ್ತೇವೆ ಎಂದು ಯದುವೀರ್ ಹೇಳಿದರು.
ಎಂಎಲ್‌ಸಿ ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಪ್ರಮುಖರಾದ ಎಸ್.ದತ್ತಾತ್ರಿ, ಶಿವರಾಜ್, ಸಿ.ಎಚ್.ಮಾಲತೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net