

ಉಡುಪಿ: ಮುಡಾ ಹಗರಣ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದರಿಂದ ಸಿದ್ದರಾಮಯ್ಯ ಅವರು ನೈತಿಕ ಹೊಣೆಹೊತ್ತು ತಕ್ಷಣವೇ ರಾಜಿನಾಮೆ ನೀಡಬೇಕು. ಎರಡು ದಿನಗಳಲ್ಲಿ ರಾಜಿನಾಮೆ ನೀಡದಿದ್ದಲ್ಲಿ, ರಾಜ್ಯದಾದ್ಯಂತ ಬಿಜೆಪಿ ಜನಾಂದೋಲನ ನಡೆಸಲಿದೆ ಎಂದು ಶಾಸಕ ವಿ. ಸುನೀಲ್ ಕುಮಾರ್ ಹೇಳಿದರು.
ಶನಿವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ತನಿಖೆ ಪೂರ್ಣಗೊಂಡು, ಆರೋಪ ಮುಕ್ತರಾಗುವ ತನಕ ಹುದ್ದೆ ಬಿಡಬೇಕು. ನೈತಿಕತೆಯ ಪಾಠ ಮಾಡುವವರು ಭಂಡತನ ಬಿಡಬೇಕು. ಈ ಹಿಂದೆ ಸಿದ್ದರಾಮಯ್ಯ ಅವರ ಮೇಲೆ ಆರೋಪ ಬಂದಾಗ ಲೋಕಾಯುಕ್ತ ತೆಗೆದು ಎಸಿಬಿ ರಚನೆ ಮಾಡಿ, ಸಾಂವಿಧಾನಿಕ ಹುದ್ದೆಯನ್ನು ಬುಡಮೇಲು ಮಾಡಿದ್ದಾರೆ. ರಾಜ್ಯಪಾಲರನ್ನು ಅನಾವಶ್ಯಕ ಟೀಕೆ ಮಾಡಬಾರದು. ಅವರು ಕಾನೂನು ತಜ್ಞರ ಅಭಿಪ್ರಾಯ ಪಡೆದು ಈ ನಿರ್ಧಾರ ಮಾಡಿದ್ದಾರೆ ಎಂದರು.
ರಾಜ್ಯಪಾಲರ ವಿರುದ್ದ ಆಡಳಿತ ಪಕ್ಷದಲ್ಲಿರುವವರು ಜನ ಆಂದೋಲನ ಚಳುವಳಿ ಮಾಡುವುದು ಶೋಭೆ ತರಲ್ಲ, ಹಿಂದೆ ಲಾಲು ಪ್ರಸಾದ್ ಯಾದವ್, ಜಯಲಲಿತಾ, ಯಡಿಯೂರಪ್ಪ ರಾಜೀನಾಮೆ ಕೊಟ್ಟು ತನಿಖೆ ಎದುರಿಸಿದ್ದರು. ತನಿಖೆ ಎದುರಿಸುವಾಗ ಆ ಸ್ಥಾನದಲ್ಲಿ ಇರಬಾರದು ಎಂದರು.
ಮೂಡ ಹಗರಣ ಸಂಬಂಧಪಟ್ಟಂತೆ ಮೂರು ಮಂದಿ ಖಾಸಗಿ ವ್ಯಕ್ತಿಗಳು ದೂರು ಕೊಟ್ಟಿದ್ದಾರೆ. ರಾಜ್ಯಪಾಲರಿಗೆ ಬಿಜೆಪಿ ದೂರು ಕೊಟ್ಟಿಲ್ಲ. ಸಾಮಾಜಿಕ ಕಾರ್ಯಕರ್ತರು ದೂರಿದ್ದಾರೆ. ರಾಜ್ಯಪಾಲರು ವಿವರಣೆ ಕೇಳಿದ್ದರೂ ಯಾವುದೇ ವಿವರಣೆಯನ್ನು ಮುಖ್ಯಮಂತ್ರಿಗಳು ಅಥವಾ ಸರ್ಕಾರ ಕೊಟ್ಟಿಲ್ಲ. ತಮಗೆ ವಿರುದ್ಧವಾಗಿದ್ದರೆ ನ್ಯಾಯಾಲಯವನ್ನು ಕೂಡ ಕಾಂಗ್ರೆಸ್ ಪ್ರಶ್ನೆ ಮಾಡಿದರೆ ಆಶ್ಚರ್ಯವಿಲ್ಲ ಎಂದರು.