

ಹುಬ್ಬಳ್ಳಿ : ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ರಾಜಕೀಯವಾಗಿ ಆಗುತ್ತಿರುವ ನಷ್ಟ ತುಂಬಿಕೊಳ್ಳಲು ಸಿಎಂ ಸಾಂತ್ವನದ ನಾಟಕವಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಜೋಶಿ, ನೇಹಾ ಹತ್ಯೆ ನಡೆದು ನಾಲ್ಕಾರು ದಿನಗಳ ಬಳಿಕ ಕಾಂಗ್ರೆಸ್ ಅನುಕಂಪ ತೋರುತ್ತಿದೆ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇಹಾ ಕುಟುಂಬದ ಮೇಲೆ ನಿಜವಾದ ಕಾಳಜಿ ಇಲ್ಲ. ಇದ್ದಿದ್ದರೆ ಘಟನೆ ನಡೆದ ದಿನವೇ ನೇರವಾಗಿ ಕಾಪೋೕ ರೇಟರ್ ನಿರಂಜನ್ ಅವರಿಗೆ ಕರೆ ಮಾಡಿ, ಅವರ ಧಾಟಿ, ಭಾಷೆಯಲ್ಲೇ ಸಾಂತ್ವನ, ಧೈರ್ಯ ನೀಡಿರುತ್ತಿದ್ದರು ಎಂದು ಹೇಳಿದರು.
ನೇಹಾ ಮನೆಗೆ ಸಚಿವ ಸಂತೋಷ ಲಾಡ್, ಲಕ್ಷ್ಮೀ ಹೆಬ್ಬಾಳ್ಕರ ಭೇಟಿ ನೀಡಿದಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಫೋನ್ ಮಾಡಿ, ಮಾತನಾಡಬಹುದಿತ್ತು. ಆದರೆ, ಸಚಿವ ಎಚ್.ಕೆ. ಪಾಟೀಲ ಅವರನ್ನು ಕಳಿಸಿ, ಫೋನ್ ಮೂಲಕ ಸಾಂತ್ವನ ಹೇಳಬೇಕಿತ್ತೆ ಎಂದು ಪ್ರಶ್ನಿಸಿದರು.
ನೇಹಾ ಹತ್ಯೆ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಪ್ರತಿ ಮನೆಯ ಮಾತಾಗಿದೆ. ಸರ್ಕಾರದ ನಡೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮತದಾರರು ತಿರುಗಿ ಬೀಳುವ ಭಯದಿಂದ ಈಗ ಕಾಂಗ್ರೆಸ್ ಸಾಂತ್ವನದ ನಾಟಕ ವಾಡುತ್ತಿದೆ ಎಂದು ಸಚಿವ ಜೋಶಿ ಟೀಕಿಸಿದರು.
ಯಾರಿಗೇ ಅನ್ಯಾಯವಾದರೂ ಧ್ವನಿ ಎತ್ತುತ್ತೇನೆ. ಇದರಲ್ಲಿ ಹಿಂದು, ಮುಸ್ಲಿಂ ಎಂದು ಬೇಧ ತೋರುವುದಿಲ್ಲ. ನನ್ನ ಕ್ಷೇತ್ರದಲ್ಲೇ ಮಹಿಳೆಯರಿಗೆ ಅನ್ಯಾಯ ನಡೆಯುತ್ತಿದ್ದರೆ ಸುಮ್ಮನಿರಬೇಕಿತ್ತೆ ಎಂದು ಪ್ರಶ್ನಿಸಿದ ಸಚಿವ ಜೋಶಿ, ನೇಹಾ ಹತ್ಯೆ ಪ್ರಕರಣದಲ್ಲಿ ರಾಜಕಾರಣ ಮಾಡಿಲ್ಲ. ಬದಲಾಗಿ ನ್ಯಾಯ ದೊರಕಿಸಿ ಕೊಡುವ ಪ್ರಯತ್ನ ಮಾಡಿದ್ದೇನೆ ಎಂದರು.
ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ, ಹಿಂದುಗಳ ಕೊಲೆ, ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆದರೆ ಧ್ವನಿ ಎತ್ತದಿದ್ದರೆ ಹೇಗೆ ? ಮತ ಬ್ಯಾಂಕ್ ಗಾಗಿ ಕಾಂಗ್ರೆಸ್ ರಾಜಕಾರಣ ಮಾಡುತ್ತುತ್ತಿದ್ದು, ಬಿಜೆಪಿ ಮೇಲೆ ಆರೋಪ ಹೊರಿಸುತ್ತಿದೆ ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದರು.