ಸಮಾಜದ ಆಶೋತ್ತರಗಳ ವಿಷಯದಲ್ಲಿ ಒಂದೇ ಧ್ವನಿ ಇರಲಿ: ಸಮುದಾಯದ ಒಳಿತಿಗಾಗಿ ಒಂದಾಗಲು ಸಿಎಂ ಸಲಹೆ

Harihara
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಶನಿವಾರ ಸ್ವಾತಂತ್ರ್ಯ ಅಮೃತ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ವಚನಾನಂದ ಸ್ವಾಮೀಜಿ ದೀಪ ಬೆಳಗಿದರು. ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಶಂಕರ ಪಾಟೀಲ್ ಮುನೇನಕೊಪ್ಪ, ಸಂಸದ ಜಿ.ಎಂ.ಸಿದ್ದೇಶ್ವರ ಮತ್ತಿತರರು ಉಪಸ್ಥಿತರಿದ್ದರು.
Published on

ದಾವಣಗೆರೆ: ನಾಡಿನ ನೆಲ, ಜಲ, ಭಾಷೆ, ಗಡಿಯ ವಿಚಾರ ಬಂದಾಗ ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯ ಮರೆತು ಕೈಜೋಡಿಸುತ್ತವೆ. ಅದೇ ರೀತಿ ಸಮುದಾ ಯದ ಒಳಿತಿಗಾಗಿ, ಭವಿಷ್ಯದ ದೃಷ್ಟಿಯಿಂದ ಇಡೀ ಸಮಾಜ ಒಂದಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಶನಿವಾರ ಆಯೋಜಿಸಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ಆಶೋತ್ತರಗಳ ವಿಷಯದಲ್ಲಿ ಒಂದೇ ಧ್ವನಿ ಇರಬೇಕು. ಭಕ್ತರನ್ನು ಒಗ್ಗೂಡಿಸಬೇಕು. ಆಗ ಮಾತ್ರ ದೊಡ್ಡ ಶಕ್ತಿಯಾಗಿ ಬೆಳೆದು ಗುರಿ ತಲುಪಲು ಸಾಧ್ಯ. ಈ ಮಾತನ್ನು ಮುಖ್ಯಮಂತ್ರಿಯಾಗಿ ಅಲ್ಲ, ಭಕ್ತನಾಗಿ ಕಳಕಳಿಯಿಂದ ಹೇಳುತ್ತಿರುವುದಾಗಿಯೂ, ಯಾರೂ ತಪ್ಪಾಗಿ ಭಾವಿಸುವುದು ಬೇಡ ಎಂದು ತಿಳಿಸಿದರು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂಬುದು ಬಹಳ ದಿನಗಳ ಬೇಡಿಕೆಯಾಗಿದೆ. ಯಾರಿಗೆ ಎಷ್ಟು ಮೀಸಲಾತಿ ನೀಡಬೇಕೆಂಬ ಅಧಿಕಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿ ಜಿಲ್ಲೆಗೆ ಹೋಗಿ ಜನಾಂಗದ ಸ್ಥಿತಿಗತಿಗಳ ಅಧ್ಯಯನ ನಡೆಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಆ ಕಾರ್ಯ ಪೂರ್ಣಗೊಳ್ಳಲಿದ್ದು, ಅದರ ವರದಿ ಬಂದ ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದರು. ಎಲ್ಲ ಸಮಾಜಗಳನ್ನು ಸಮಾನವಾಗಿ ನೋಡಬೇಕಾದ ದೊಡ್ಡ ಜವಾಬ್ದಾರಿ ತಮ್ಮ ಮೇಲಿದೆ. ಸಾಮಾಜಿಕ ನ್ಯಾಯ ಮತ್ತು ಅವಕಾಶಗಳನ್ನು ಕಲ್ಪಿಸಬೇಕಿದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಆ ಕಾರ್ಯ ನಿಭಾಯಿಸುವುದಾಗಿ ತಿಳಿಸಿದ ಸಿಎಂ, ಪಂಚಮಸಾಲಿ ಸಮಾಜ ಕೃಷಿಯನ್ನೇ ಆಧರಿಸಿದೆ. ಈಗ ಭೂಮಿ ಅಷ್ಟೇ ಇದೆ, ಅವಲಂಬಿತರು ಹೆಚ್ಚಾಗಿದ್ದಾರೆ. ಸಣ್ಣ ಹಿಡುವಳಿಗಳಾಗಿವೆ. ಇಂಥ ಸಂದರ್ಭದಲ್ಲಿ ಶಿಕ್ಷಣ ಪಡೆದು ಮುಂದೆ ಬರಬೇಕು, ಉದ್ಯೋಗ ಹಿಡಿಯಬೇಕು ಎಂಬ ಭಾವನೆ ಎಲ್ಲರಲ್ಲಿ ಬೇರೂರಿದೆ ಎಂದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಮಾತನಾಡಿ, ಮುಂದಿನ 3 ತಿಂಗಳಲ್ಲಿ 7 ಹೊಸ ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸಲಾಗುವುದು. ಪ್ರತಿ ಜಿಲ್ಲೆಯಲ್ಲಿ ಒಂದು ವಿವಿ ಆಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. 7 ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಉನ್ನತೀಕರಣ ಮಾಡಲಾಗುವುದು. ಎಲ್ಲರಿಗೂ ಉದ್ಯೋಗ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ 150 ಐಟಿಐಗಳನ್ನು ಉನ್ನತೀಕರಣ ಮಾಡಲಾಗಿದೆ. ರಾಜ್ಯದಲ್ಲಿ ಅತ್ಯುತ್ತಮ ಪಾಲಿಟೆಕ್ನಿಕ್ ಕೋರ್ಸಗಳಿವೆ ಎಂದು ತಿಳಿಸಿದರು. ವಾರಾಣಸಿಯ ಮಹಾಯೋಗಿ ಶ್ರೀ ಸ್ವಾಮಿ ಶಿವಾನಂದರು, ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಸಂಸದರಾದ ಜಿ.ಎಂ.ಸಿದ್ದೇಶ್ವರ, ದೇವೇಂದ್ರಪ್ಪ, ಶಾಸಕರಾದ ಎಸ್.ವಿ. ರಾಮಚಂದ್ರ, ಅರುಣಕುಮಾರ್, ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಭಾಗವಹಿಸಿದ್ದರು.

ನಾನು ಲಿಂಗಾಯತ ಸಮಾಜ ಒಡೆದಿಲ್ಲ

‘ನಾನು ಲಿಂಗಾಯತ ಸಮಾಜವನ್ನು ಒಡೆದಿಲ್ಲ, ನನ್ನ ಸಮುದಾಯಕ್ಕೆ ಶಕ್ತಿ ತುಂಬಿದ್ದೇನೆ’ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು. ಲಿಂಗಾಯತ ಸಮುದಾಯದಲ್ಲಿ 2ಎ, 3ಎ, ಸಾಮಾನ್ಯ ವರ್ಗ ಹೀಗೆ ಒಬ್ಬೊಬ್ಬರು ಒಂದೊಂದು ಮೀಸಲಾತಿಯಲ್ಲಿದ್ದಾರೆ, ನಾವು 3ಬಿ ಯಲ್ಲಿದ್ದೇವೆ. ಎಲ್ಲ ಲಿಂಗಾಯತರೂ ಒಂದಾಗಬೇಕಾದರೆ ಎಲ್ಲರಿಗೂ ಒಂದೇ ಮೀಸಲಾತಿ ಸಿಗಬೇಕು ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ತರಿಸಿಕೊಂಡು 2ಎ ಮೀಸಲಾತಿಯ ಬೇಡಿಕೆ ಈಡೇರಿಸುತ್ತಾರೆ, ಒಟ್ಟು ಲಿಂಗಾಯತರಿಗೆ ಒಬಿಸಿ ಮೀಸಲಾತಿ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಬಹಳ ಜನರು ಏನೇನೋ ಮಾತನಾಡುತ್ತಾರೆ, ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net