ಸಿಎಂ ಸೇಫ್... ಸಸ್ಪೆನ್ಸ್: ಬಿಎಸ್​ವೈ ಹೊಗಳಿದ ನಡ್ಡಾ | ಇಂದು ನಾಯಕತ್ವ ಕ್ಲೈಮ್ಯಾಕ್ಸ್

nadda
Published on

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ನಿರ್ಣಾಯಕ ಘಟ್ಟ ತಲುಪಿದರೂ ತುಟಿಬಿಚ್ಚದ ವರಿಷ್ಠರ ನಡೆಯಿಂದಾಗಿ ಕುತೂಹಲ ಇಮ್ಮಡಿಗೊಂಡಿದೆ. ಭಾನುವಾರ ಇಡೀ ದಿನ ದೆಹಲಿಯಿಂದ ಸಂದೇಶ ಬರಬಹುದೆಂಬ ನಿರೀಕ್ಷೆ ಹುಸಿಯಾಗಿದ್ದು ಒಂದೆಡೆಯಾದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬಹಿರಂಗವಾಗಿ ಯಡಿಯೂರಪ್ಪ ಅವರನ್ನು ಹೊಗಳಿ, ನಿಮ್ಮಲ್ಲಷ್ಟೇ(ಮಾಧ್ಯಮ) ಗೊಂದಲ ಇದೆ ಎಂದು ಹೇಳಿದ್ದು ಯಾವ ಬದಲಾವಣೆಯೂ ಇಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ. ಆದರೂ ವರಿಷ್ಠರ ಸೂಚನೆಯನ್ನು ಪಾಲಿಸುವುದಾಗಿ ಪುನರುಚ್ಚರಿಸುವ ಮೂಲಕ ಸಿಎಂ ಯಡಿಯೂರಪ್ಪ ಅಂತಿಮ ತೀರ್ವನದ ಚೆಂಡನ್ನು ಬಿಜೆಪಿ ಹೈಕಮಾಂಡ್ ಅಂಗಳಕ್ಕೆ ಎಸೆದಿದ್ದಾರೆ. ಈ ಎಲ್ಲ ಗೊಂದಲಗಳಿಗೆ ತೆರೆಬಿದ್ದು ಸೋಮವಾರ ಸ್ಪಷ್ಟ ರೂಪ ಸಿಗುವ ಸಾಧ್ಯತೆ ಇದೆ.

ಸೋಮವಾರ ರಾಜ್ಯದ ಬಿಜೆಪಿ ಸರ್ಕಾರ ಎರಡು ವರ್ಷ ಪೂರೈಸುತ್ತದೆ, ಇದೇ ಸಂದರ್ಭದಲ್ಲಿ ಹೊಸ ನಾಯಕತ್ವ ಘೋಷಣೆಯಾಗಬಹುದೆಂಬ ಚರ್ಚೆ ಬಿಜೆಪಿ ವಲಯದಲ್ಲಿ ನಡೆದಿದೆಯಾದರೂ ರಾಜ್ಯಾಧ್ಯಕ್ಷ ಸಹಿತ ಯಾವ ಮುಖಂಡರಿಗೂ ಈ ಕುರಿತು ಸ್ಪಷ್ಟತೆ ಇಲ್ಲ. ಬಿಎಸ್​ವೈ ಅವರಿಗೂ ಈ ವಿಷಯದಲ್ಲಿ ಯಾವುದೇ ಸಂದೇಶ ಬಂದಿಲ್ಲ. ಬೆಳಗಾವಿ ಪ್ರವಾಸ ಮುಗಿಸಿ ಭಾನುವಾರ ಸಂಜೆ ಬೆಂಗಳೂರಿಗೆ ಬಂದ ಯಡಿಯೂರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಇದುವರೆಗೂ ವರಿಷ್ಠರಿಂದ ಸಂದೇಶ ಬಂದಿಲ್ಲ. ಸೋಮವಾರ ಎರಡು ವರ್ಷ ಪೂರ್ಣಗೊಳಿಸಿದ ಕಾರ್ಯಕ್ರಮ ಇದೆ. ಎರಡು ವರ್ಷದ ಸಾಧನೆ ಬಗ್ಗೆ ಮಾತನಾಡುತ್ತೇನೆ ಎಂದರು.

ನಡ್ಡಾರಿಂದ ಯಡಿಯೂರಪ್ಪ ಗುಣಗಾನ: ‘ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ. ಉಳಿದಂತೆ, ಯಡಿಯೂರಪ್ಪನವರು ಕೂಡ ಎಲ್ಲ ವಿಷಯಗಳನ್ನೂ ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ’- ಬಿಎಸ್​ವೈ ಆಡಳಿತ ಕುರಿತಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನೀಡಿರುವ ಪ್ರತಿಕ್ರಿಯೆ ಇದು. ಗೋವಾದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆಯೇ ಎಂಬ ಪೂರಕ ಪ್ರಶ್ನೆಗೆ ಉತ್ತರ ಮುಂದುವರಿಸಿದ ಅವರು ‘ಅದು ನಿಮ್ಮ ಊಹೆ. ನಮಗೆ ಆ ರೀತಿ ಅನ್ನಿಸುವುದಿಲ್ಲ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net