

ಬೆಂಗಳೂರು: ಕಸ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಸಿಎಂ ಕರೆದಿದ್ದ ಸಭೆಗೆ ಶಾಸಕ ಹಾಗೂ ಹೋರಾಟಗಾರರು ಗೈರಾಗುವ ಮೂಲಕ ಕೇವಲ ಪೊಳ್ಳು ಭರವಸೆ ಬೇಡ ಶಾಶ್ವತ ಪರಿಹಾರ ದೊರಕಿಸಿಕೊಡಬೇಕೆಂಬ ಪಟ್ಟು ಬಿಗಿಗೊಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸರ್ಕಾರದ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ೋಷಿಸುವವರಗೆ ಹೋರಾಟ ಕೈಬಿಡುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಉಗ್ರರೂಪ ಪಡೆಯುವ ಸೂಚನೆ: ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಸಮೀಪದ ಮೂಗೇನಹಳ್ಳಿ ಗೇಟಿನ ಬಳಿ ಶುಕ್ರವಾರ ಆರಂಭವಾದ ಶಾಂತರೀತಿಯ ಹೋರಾಟ ಮುಂದಿನ ದಿನಗಳಲ್ಲಿ ಉಗ್ರ ರೂಪ ತಳೆಯುವ ಸೂಚನೆ ಕಂಡುಬರುತ್ತಿದೆ. ಆಹೋರಾತ್ರಿ ನಡೆಯುತ್ತಿರುವ ಧರಣಿಗೆ ಸರ್ಕಾರದಿಂದ ಸಮರ್ಪಕ ಸ್ಪಂದನೆ ವ್ಯಕ್ತವಾಗದಿರುವುದು ಹೋರಾಟಗಾರರನ್ನು ಕೆರಳುವಂತೆ ಮಾಡಿದೆ.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹಾಗೂ ಖುದ್ದು ಬಿಬಿಎಂಪಿ ಆಯುಕ್ತ ಅನಿಲ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರೂ ಉಸ್ತುವಾರಿ ಸಚಿವ ಆರ್.ಅಶೋಕ್ ತಲೆಹಾಕದಿರುವುದು ಹೋರಾಟಗಾರ ತಾಳ್ಮೆಗೆಡೆಸುತ್ತಿದೆ ಎನ್ನಲಾಗಿದೆ. ಹೋರಾಟದ ಆರಂಭದಿಂದಲೂ ಸ್ಥಳದಲ್ಲೇ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಹೋರಾಟಗಾರರ ಪಟ್ಟು ಮತ್ತಷ್ಟು ಬಿಗಿಯಾಗುತ್ತಿದೆ.
ಶಾಂತಿಯುತ ಹೋರಾಟ ಮುಂದುವರೆಯಲಿದೆ: ಅಧಿಕಾರಿಗಳು ಈ ಹಿಂದೆ ನೀಡಿದಂತೆ ಎಲ್ಲ ಭರವಸೆ ಹುಸಿಯಾಗಿವೆ. ನಾವು ಶಾಂತರೀತಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಸರ್ಕಾರ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದೆ ಎನಿಸುತ್ತಿದೆ. ನಾವು ಶಾಂತಿಧೂತ ಮಹತ್ಮಾ ಗಾಂಧಿ ಅವರ ಭಾವಚಿತ್ರದೆದರು ಹೋರಾಟ ನಡೆಸುತ್ತಿರುವುದರಿಂದ ಸರ್ಕಾರ ಧರಣಿಯನ್ನು ಕೇವಲವಾಗಿ ನೋಡುವಂತೆ ಭಾಸವಾಗುತ್ತಿದೆ ಎಂದು ಶ್ರೀ ಹನುಮಂತನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಮಸ್ಯೆ ಬಗೆಹರಿಯುವವರೆಗೂ ನಾವು ಶಾಂತಿಯುತ ಪ್ರತಿಭಟನೆ ಮಾಡುತ್ತೇವೆ. ಸರ್ಕಾರ ಕೂಡಲೇ ಸಮಸ್ಯೆಗೆ ಪರಿಹಾರ ನೀಡಬೇಕು. ಸಮಸ್ಯೆಗೆ ಸ್ಪಂದಿಸುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.
ದೊಡ್ಡಬಳ್ಳಾಪುರ ತಾಪಂ ಅಧ್ಯಕ್ಷ ಶಶಿಧರ್ ಮಾತನಾಡಿ, ಸದನದ ಶೂನ್ಯ ವೇಳೆಯಲ್ಲಿ ಕಸದ ಸಮಸ್ಯೆ ಬಗ್ಗೆ ಶಾಸಕ ವೆಂಕಟರಮಣಯ್ಯ ಮಾತನಾಡಲು ಮುಂದಾದರೆ ಅವಕಾಶ ನೀಡಿಲ್ಲ. ಇದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ರೈತ ಪ್ರಾಂತ ಸಂಘದ ಕಾರ್ಯದರ್ಶಿ ರಾಮಕೃಷ್ಣ, ರೈತ ಸಂಘ, ಕನ್ನಡಪರ ಸಂಘ, ದಲಿತ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿದ್ದರು.