‘ರಸ್ತೆ ಬೇಕಾದರೆ ಗ್ಯಾರಂಟಿ ಬಂದ್’ ವಿಚಾರ, ರಾಯರಡ್ಡಿ ಮೂಲಕ ಸತ್ಯ ಬಿಚ್ಚಿಟ್ಟ ಸಿಎಂ, ಸರ್ಕಾರದ ವಿರುದ್ಧ ಸಂಸದ ರಮೇಶ ಜಿಗಜಿಣಗಿ ವಾಗ್ದಾಳಿ

ramesh jigajinagi
Published on

ವಿಜಯಪುರ: ‘ರಸ್ತೆ ಬೇಕಾದರೆ ಗ್ಯಾರಂಟಿ ಬಂದ್’ ಎಂಬ ವಿಚಾರವನ್ನು ಸಿಎಂ ಸಿದ್ದರಾಮಯ್ಯ ತಮ್ಮ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮೂಲಕ ಬಿಚ್ಚಿಟ್ಟಿದ್ದಾರೆಂದು ಸಂಸದ ರಮೇಶ ಜಿಗಜಿಣಗಿ ಕಿಡಿಕಾರಿದರು.

ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿಗೆ ಅನುದಾನವೇ ಇಲ್ಲ. ಹೀಗಾಗಿ ಗ್ಯಾರಂಟಿ ಯೋಜನೆ ಬಂದ್ ಮಾಡುವ ಕುರಿತ ಮಾತುಗಳು ಹೊರಬೀಳುತ್ತಿವೆ. ರಾಯರಡ್ಡಿ ಅವರು ಹೇಳಿದ್ದು ಸಿಎಂ ಸಿದ್ದರಾಮಯ್ಯ ಅವರ ಮನದಾಳದ ಮಾತು. ಇಲ್ಲದೇ ಹೋದರೆ ಸಿಎಂ ಆರ್ಥಿಕ ಸಲಹೆಗಾರರಾಗಿರುವ ರಾಯರಡ್ಡಿ ಅವರು ಹೀಗೆಲ್ಲ ಹೇಳಲು ಸಾಧ್ಯವಿತ್ತೇ? ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.

ರಾಜ್ಯದಲ್ಲಿ ಕಳೆದ ಆರು ತಿಂಗಳಿನಿಂದ ನರೇಗಾ ಸಿಬ್ಬಂದಿಗೆ ಸಂಬಳವನ್ನೇ ನೀಡಿಲ್ಲ. ಗ್ರಾಮೀಣ ಕುಡಿಯುವ ನೀರು ಸರಬರಾಜು ಸಿಬ್ಬಂದಿಗೂ ಸಂಬಳವಿಲ್ಲ. ಹೀಗಾಗಿ ಸಂಬಳಕ್ಕಾಗಿ ಸಿಬ್ಬಂದಿ ಪರದಾಡುತ್ತಿದ್ದಾರೆ. ಸುಮಾರು 270 ಜನ ನರೇಗಾ ಸಿಬ್ಬಂದಿ ಸಂಬಳಕ್ಕಾಗಿ ಪರದಾಡುತ್ತಿದ್ದು, ಅದರಲ್ಲೊಬ್ಬ ಫೋನ್ ಮಾಡಿ ಕಣ್ಣೀರು ಸುರಿಸಿದನು. ಕರಳು ಚುರ್ ಎಂದಿತು. ಈ ಸಿದ್ದರಾಮಯ್ಯಗೆ ಜನ ಗ್ಯಾರಂಟಿ ಯೋಜನೆ ಕೇಳಿದ್ದರಾ? ತಮ್ಮ ಅಧಿಕಾರ ದಾಹಕ್ಕಾಗಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಇದೀಗ ಎಲ್ಲ ಅಭಿವೃದ್ಧಿ ಕಾರ್ಯಗಳಿಗೂ ಹಿನ್ನಡೆಯುಂಟು ಮಾಡಿದ್ದಲ್ಲದೇ ಸಿಬ್ಬಂದಿಗೂ ಸಂಬಳ ನೀಡದ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಮಾತೆತ್ತಿದರೆ ಆರ್‌ಎಸ್‌ಎಸ್ ನಿಷೇಧಿಸುವ ಬಗ್ಗೆ ಮಾತನಾಡುವ ಪ್ರಿಯಾಂಕ್ ಖರ್ಗೆ ಮೊದಲು ತನ್ನ ಇಲಾಖೆಯ ಅಭಿವೃದ್ಧಿಯತ್ತ ಗಮನ ಹರಿಸಲಿ. ಮನೀಷ್ ಮ್ಯಾನ್ ಪವರ್ ಎಂಬ ಕಲಬುರಗಿಯ ಏಜೆನ್ಸಿಗೆ ಹೊರಗುತ್ತಿಗೆ ಜವಾಬ್ದಾರಿ ನೀಡಲಾಗಿದ್ದು, ಅದೇ ಏಜೆನ್ಸಿ ಸಂಬಳ ನೀಡದೇ ಸತಾಯಿಸುತ್ತಿದೆ. ಈ ಹಿಂದೆ ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದಾಗ ಸಾಕಷ್ಟು ಒತ್ತಾಯ ಮಾಡಿ ಇಂಡಿ ತಾಲೂಕಿನ 76 ಹಳ್ಳಿಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ 110 ಕೋಟಿ ರೂಪಾಯಿ ಅನುದಾನ ತಂದಿದ್ದೆ. ಆದರೆ, ಈಗ ಅಲ್ಲಿನ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸಂಬಳವಿಲ್ಲದ ಸಿಬ್ಬಂದಿ ನಿರಾಕರಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿದರೂ ಈ ಸರ್ಕಾರದಲ್ಲಿ ಸ್ಪಂದಿಸುವವರಿಲ್ಲ. ಈ ಹಿಂದೆ ಯಾವ ಸರ್ಕಾರದಲ್ಲೂ ಇಂಥ ರಾದ್ದಾಂತ ಇರಲಿಲ್ಲ. ಇದೇ ರೀತಿ ಸರ್ಕಾರ ನಡೆಸಿದರೆ ಜನ ರೊಚ್ಚಿಗೇಳುವುದು ನಿಶ್ಚಿತ ಎಂದು ಜಿಗಜಿಣಗಿ, ಕೂಡಲೇ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಸಂಬಳ ಪಾವತಿಸುವಂತೆ ಒತ್ತಾಯಿಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net