ರಾಜೀನಾಮೆ ನೀಡಿ ವಾಲ್ಮೀಕಿ ಆದರ್ಶ ಪಾಲಿಸಿ; ಸಿಎಂ ಸಿದ್ದರಾಮಯ್ಯಗೆ ಸಂಸದ ಬ್ರಿಜೇಶ್ ಚೌಟ ಆಗ್ರಹ

chauta
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ರಾಮಾಯಣ ಮೂಲಕ ಮಾನವ ಜನಾಂಗಕ್ಕೆ ನೈತಿಕತೆಯ ಸಂದೇಶವನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರ ಆದರ್ಶವನ್ನು ಪಾಲಿಸಿ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಸಿದ್ದರಾಮಯ್ಯ ಅವರು ವಾಲ್ಮೀಕಿ ಜಯಂತಿ ಸಂದರ್ಭ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ವಾಲ್ಮೀಕಿ ನಿಗಮ ಹಗರಣದ ಆರೋಪಿ ನಾಗೇಂದ್ರ ಅವರು ಜಾಮೀನು ಮೇಲೆ ಬಿಡುಗಡೆಗೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಭೇಟಿಯಾಗಿ ಅವರಿಗೆ ಶಾಲು ಹಾಕಿ ವಿಜಯೋತ್ಸವ ಆಚರಿಸಿದ್ದಾರೆ. ಇದು ಹಗರಣದಲ್ಲಿ ಮುಖ್ಯಮಂತ್ರಿಗಳ ಪಾತ್ರವಿರುವ ಬಗ್ಗೆ ಮತ್ತಷ್ಟು ಆಧಾರ ಒದಗಿಸುತ್ತದೆ. ಆರೋಪಗಳ ಪಾರದರ್ಶಕ ತನಿಖೆಗೆ ಪೂರಕವಾಗಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಪಕ್ಷಕ್ಕೆ ಸದ್ಯ ಕರ್ನಾಟಕವೇ ಎಟಿಎಂ ಆಗಿದ್ದು, ಇದೀಗ ಮಹಾರಾಷ್ಟ್ರ ಚುನಾವಣೆಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಾಲ್ಮೀಕಿ ಹಗರಣದ ಎ1 ಆರೋಪಿ ನಾಗೇಂದ್ರ ಅವರಿಂದ ಸಲಹೆ ಸೂಚನೆ ಪಡೆದಿರುವ ಸಾಧ್ಯತೆಗಳಿವೆ ಎಂದು ಅವರು ಶಂಕೆ ವ್ಯಕ್ತಪಡಿಸಿದರು.
ಸಿಎಂ ನಿರ್ದೇಶನದ ಮೇರೆಗೆ ವಾಲ್ಮೀಕಿ ಹಗರಣ ನಡೆದಿದೆ ಎಂಬ ಬಿಜೆಪಿ ಆರೋಪಕ್ಕೆ ಪೂರಕವಾಗಿ ಮುಖ್ಯಮಂತ್ರಿಯವರೇ ವಿಧಾನಸಭೆಯಲ್ಲಿ ಆ ಹಗರಣ 187 ಕೋಟಿ ರೂ. ಅಲ್ಲ, 84 ಕೋಟಿ ರೂ. ಎಂದು ಹೇಳುವ ಮೂಲಕ ಹಗರಣ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ. ಕಳೆದ ಒಂದು ವರ್ಷದ ಆಡಳಿತಾವಧಿಯಲ್ಲಿ ಹೊಸ ಹೊಸ ಭ್ರಷ್ಟಾಚಾರಗಳು ಹೊರ ಬರುತ್ತಿವೆ. ಮೈಸೂರು ಮುಡಾ ಹಗರಣದಲ್ಲಿ ದಲಿತರ ಭೂಮಿ, ವಾಲ್ಮೀಕಿ ಹಗರಣದಲ್ಲಿ ದಲಿತ ಹಣ ಕಬಳಿಸಲಾಗಿದೆ ಎಂದು ಅವರು ಟೀಕಿಸಿದರು.
ಬಿಜೆಪಿಯ ಕೆಲ ನಾಯಕರು, ಮಾಜಿ ಸಚಿವರ ಬಗ್ಗೆ ಕಾಂಗ್ರೆಸ್‌ನವರಿಂದ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆಯಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗ ಅವರದೇ ಸರ್ಕಾರ ರಾಜ್ಯದಲ್ಲಿದೆ. ತನಿಖೆ ಆಗಲಿ ಎಂದು ಪ್ರತಿಕ್ರಿಯಿಸಿದರು.
ಗೋಷ್ಠಿಯಲ್ಲಿ ಮೇಯರ್ ಮನೋಜ್ ಕುಮಾರ್, ಪ್ರೇಮಾನಂದ ಶೆಟ್ಟಿ, ಮುಖಂಡರಾದ ಕದ್ರಿ ಮನೋಹರ್ ಶೆಟ್ಟಿ, ಯತೀಶ್ ಆರ್ವರ್, ಕ್ಯಾ.ಗಣೇಶ್ ಕಾರ್ಣಿಕ್, ಸಂಜಯ್ ಪ್ರಭು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net