

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜ್ಯದ ಪ್ರತೀ ಜಿಲ್ಲೆಯಲ್ಲಿಯೂ ಕ್ಯಾಬಿನೆಟ್ ಸಭೆ ನಡೆಸಬೇಕೆಂದು ತೀರ್ಮಾನಿಸಲಾಗಿದೆ, ಚಾಮರಾಜನಗರದ ಮಾದಪ್ಪನ ಬೆಟ್ಟದಲ್ಲಿ ಕಳೆದ ಸಭೆ ನಡೆದಿದೆ, ಮುಂದಿನ ಬಾರಿ ಗ್ರಾಮಾಂತರ ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರದ ಗಡಿಯಲ್ಲಿನ ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗುವುದು, ಈ ಮೂಲಕ ಆಯಾ ಜಿಲ್ಲೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ದೇವನಹಳ್ಳಿಯಲ್ಲಿ ಸರ್ಕಾರದ ಎರಡು ವರ್ಷದ ಸಾಧನೆ ಸಮಾವೇಶದಲ್ಲಿ ಮಾತನಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಾವಿರಕ್ಕೂ ಹೆಚ್ಚು ಕೋಟಿ ರೂ.ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದಾಗ ಜಿಲ್ಲೆಗೆ ಕೇಂದ್ರ ಕಚೇರಿ (ಜಿಲ್ಲಾಡಳಿತಭವನ) ಸ್ಥಾಪನೆಗೆ ಕಾರಣವಾಗಿದ್ದೆ. ಅಂದು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಕೃಷ್ಣಬೈರೇಗೌಡರ ಒತ್ತಾಸೆಯಿಂದ ಕೇಂದ್ರ ಕಚೇರಿ ಸ್ಥಾಪನೆಯಾಯಿತು. ನಂತರದ ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದಾದರೂ ಶಾಶ್ವತ ಕಾರ್ಯಗಳು ನಡೆದಿವೆಯೇ ಎಂಬುದನ್ನು ಜನರೇ ಗಮನಿಸಬೇಕು ಎಂದು ಹೇಳಿದರು.
ಜಿಲ್ಲೆಗೆ ಎತ್ತಿನ ಹೊಳೆ ನೀರು: ಗ್ರಾಮಾಂತರ ಜಿಲ್ಲೆಗೆ ಶೀಘ್ರದಲ್ಲಿ ಎತ್ತಿನಹೊಳೆ ನೀರು ಹರಿಸುವ ಕೆಲಸ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ತುಮಕೂರಿಗೆ ಎತ್ತಿನಹೊಳೆ ನೀರು ಬಂದರೆ ಗ್ರಾಮಾಂತರ ಜಿಲ್ಲೆಗೂ ಬಂದಂತೆ ಶೀಘ್ರದಲ್ಲೇ ಕೆಲಸ ಆಗಲಿದೆ ಎಂದು ಭರವಸೆ ನೀಡಿದರು. ಎತ್ತಿನಹೊಳೆ ನೀರನ್ನು ಬಯಲು ಸೀಮೆ ಪ್ರದೇಶಗಳಿಗೆ ಹಾಗೂ ಬೆಂಗಳೂರು ಗ್ರಾಮಾಂತರ ಗ್ರಾಮಾಂತರ ಜಿಲ್ಲೆಗೆ ಆದಷ್ಟು ಶೀಘ್ರ ಹರಿಸಲಾಗುವುದು ಎಂದರು. ಜಿಲ್ಲೆಯ ಮೂರು ತಾಲೂಕುಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿದ್ದೀರಿ ಮುಂದಿನ ದಿನಗಳಲ್ಲಿ ನಾಲ್ಕೂ ತಾಲೂಕಿನಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳ ಕೈ ಬಲಪಡಿಸುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೈಜೋಡಿಬೇಕು ಎಂದು ಮನವಿ ಮಾಡಿದರು.
ಸಿಎಂಗೆ ಉಸ್ತುವಾರಿ ಮನವಿ: ಎತ್ತಿನಹೊಳೆ ಯೋಜನೆಯ ಮೂಲಕ ಕುಡಿಯುವ ನೀರನ್ನು ಕೊಟ್ಟ ಮೇಲೆ ಕೆರೆಗಳ ತುಂಬಿಸುವ ಭರವಸೆ ನೀಡಿದ್ದೀರಿ ಆದಷ್ಟು ಬೇಗನೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು. ಜಿಲ್ಲೆಯ ಕಟ್ಟ ಕಡೆಯ ಗ್ರಾಮಕ್ಕೂ ನೀರು ಸಿಗುವಂತಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಸ್ತುವಾರಿ ಸಚಿವ ಕೆ.ಎಚ್.ಮುನಿಯುಪ್ಪ ಮನವಿ ಮಾಡಿದರು. ಸರ್ಕಾರದ ಎರಡು ವರ್ಷದ ಸಾಧನೆ ಬಗ್ಗೆ ಸಮಾವೇಶವನ್ನು ಮೊದಲ ಜಿಲ್ಲೆಯಾಗಿ ಬೆಂಗಳೂರು ಗ್ರಾಮಾಂತರ ಆರಂಭಿಸಿದ್ದೇವೆ ಎಂದು ಹೇಳಿದರು. ಜಿಲ್ಲೆಯಲ್ಲಿ ಸಿಎಸ್‌ಆರ್ ಅನುದಾನದ ಮೂಲಕ 150 ಕೋಟಿ ರೂ.ವೆಚ್ಚದಲ್ಲಿ ಶಾಲೆಗಳು ಅಭಿವೃದ್ಧಿ ಮಾಡ್ತಿದ್ದೇವೆ. ಜಿಲ್ಲೆಯ 2.50 ಲಕ್ಷ ಕುಟುಂಬಗಳಿಗೆ ಕುಟುಂಬ ಸದಸ್ಯರೊಬ್ಬರಿಗೆ ಉದ್ಯೋಗ ಕೊಡಿಸುವ ಮಹತ್ತರ ಉದ್ದೇಶ ಹೊಂದಿದ್ದು, ಮೊದಲ ಹಂತದಲ್ಲಿ 5 ಸಾವಿರ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಮೇಳದ ಮೂಲಕ ಉದ್ಯೋಗ ಕೊಡಿಸಿದ್ದೇವೆ ಎಂದು ಸಚಿವರು ಹೇಳಿದರು.
ಕಾಂಗ್ರೆಸ್‌ನಿಂದ ಜಿಲ್ಲಾಡಳಿತಭವನ: ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಜತೆಗೆ ಸಾವಿರಾರೂ ಕೋಟಿ ರೂ. ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಜನಪರ ಮೆಚ್ಚುಗೆ ಗಳಿಸಿದೆ. ಬೆಂಗಳೂರು ಗ್ರಾಮಾಂತರಕ್ಕೆ ಜಿಲ್ಲಾಡಳಿತಭವನ ಮಾಡಿಸಿದ್ದು ಕಾಂಗ್ರೆಸ್ ಸರ್ಕಾರವೇ ಆಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಜಿಲ್ಲೆಗೆ 4 ಶಾದಿ ಮಹಲ್: ಅಲ್ಪಸಂಖ್ಯಾತರ ಮದುವೆ-ಶುಭ ಸಮಾರಂಭಗಳ ಅನುಕೂಲಕ್ಕಾಗಿ 4 ಶಾದಿ ಮಹಲ್ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಲಾಗಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹಮದ್ ತಿಳಿಸಿದರು. ಜಿಲ್ಲೆಯ ವಸತಿ ರಹಿತ ಬಡವರಿಗಾಗಿ 2500 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ ಎಂದರು.
2 ಸಾವಿರ ಕೋಟಿ ರೂ.ಕಾಮಗಾರಿ:
ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ 2 ವರ್ಷದ ಅವಧಿಯಲ್ಲಿ 5 ಸಾವಿರ ಕೋಟಿ ರೂ.ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ. ನಿವೇಶನ ರಹಿತರಿಗೆ 10 ಸಾವಿರ ಹಕ್ಕುಪತ್ರ ವಿತರಿಸಲಾಗುತ್ತಿದೆ. ಸಿಎಸ್‌ಆರ್ ನಿಧಿಯಿಂದ 125 ಕೋಟಿ ರೂ.ಕಾಮಗಾರಿಗಳಿಗೆ ಶಂಕುಸ್ಥಾಪನೆ. 465 ಕೋಟಿ ರೂ.ಕಾಮಗಾರಿಗಳ ಉಧ್ಘಾಟನೆ ಸೇರಿ 1ಸಾವಿರ ಕೋಟಿ ರೂಗಳ ಕಾಮಗಾರಿ, ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಸವಲತ್ತುಗಳ ವಿತರಣೆ ಕಾರ್ಯಕ್ರಮ ನಡೆಯಿತು.
ಪ್ರಮುಖ ಉದ್ಘಾಟನೆ ಕಾಮಗಾರಿಗಳ ವಿವರ
*406 ಕೋಟಿ ರೂ.ವೆಚ್ಚದಲ್ಲಿ ದೇವನಹಳ್ಳಿಯ ಹರಳೂರು ಮುದ್ದೇನಹಳ್ಳಿ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾಕ್ ಹಂತ 2 ರಲ್ಲಿ ನಿರ್ಮಿಸಿರುವ 220/66/11 ಕೆ.ವಿ ವಿದ್ಯುತ್ ಉಪಕೇಂದ್ರ ಉದ್ಘಾಟನೆ.
*9.91 ಕೋಟಿ ರೂ.ವೆಚ್ಚದಲ್ಲಿ ಜಿಲ್ಲಾ ಪಂಚಾಯಿತಿಯ ಹೆಚ್ಚುವರಿ ಕಟ್ಟಡ ಉದ್ಘಾಟನೆ.
*6 ಕೋಟಿ ರೂ.ವೆಚ್ಚದಲ್ಲಿ ವಿಶ್ವನಾಥಪುರ ಗ್ರಾಮದಲ್ಲಿ ಜಿಪಂ ಸಂಪನ್ಮೂಲ ಕೇಂದ್ರ ಕಟ್ಟಡ ಮತ್ತು ವಾಣಿಜ್ಯ ಸಂಕೀರ್ಣ ಕಟ್ಟಡ ಉದ್ಘಾಟನೆ.
*4.6 ಕೋಟಿ ರೂ.ವೆಚ್ಚದಲ್ಲಿ ದೊಡ್ಡಬಳ್ಳಾಪುರದ ನಗರದ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಪರಿಸರ ಪರಿಹಾರ ನಿಧಿಯಡಿ ಡಿ ಕ್ರಾಸ್‌ರಸ್ತೆಯಲ್ಲಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿ.
ಪ್ರಮುಖ ಶಂಕುಸ್ಥಾಪನೆ ಕಾಮಗಾರಿಗಳ ವಿವರ
*100 ಕೋಟಿ ರೂ.ವೆಚ್ಚದಲ್ಲಿ ದೇವನಹಳ್ಳಿಯಲ್ಲಿ 600 ಬಂಧಿಗಳ ಸಾಮರ್ಥ್ಯದ ಕೇಂದ್ರದ ಕಾರಾಗೃಹ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ.
*40 ಕೋಟಿ ರೂ.ವೆಚ್ಚದಲ್ಲಿ ದೇವನಹಳ್ಳಿ ನಗರದಲ್ಲಿ ಹಾಲಿ ಇರುವ ಎಚ್.ಟಿ ಮತ್ತು ಎಲ್.ಟಿ ಮೇಲ್ತಂತಿ ಮಾರ್ಗಗಳನ್ನು ಭೂಗತ ಕೇಬಲ್ಗಳಾಗಿ ಪರಿವರ್ತಿಸಲು ಶಂಕುಸ್ಥಾಪನೆ.
*9 ಕೋಟಿ ರೂ.ವೆಚ್ಚದಲ್ಲಿ ದೇವನಹಳ್ಳಿ ರಾಜ್ಯ ಹೆದ್ದಾರಿ 170 ನಂದಿ ಗ್ರಾಮದಿಂದ ಆಂಧ್ರ ಪ್ರದೇಶದ ಗಡಿಯವರೆಗೆ ಸೇರುವ ರಸ್ತೆಯ ಮಾರ್ಗ ವಿಜಯಪುರ, ಶಿಡ್ಲಘಟ್ಟ, ದಿಟ್ಟೂರಹಳ್ಳಿ, ಇ-ತಿಮ್ಮಸಂದ್ರ ಚೇಳೂರು ರಸ್ತೆಯ ಸರಪಳಿ 14.53 ರಿಂದ 15.35 ಕಿ.ಮೀ ವರೆಗೆ ನಾಲ್ಕು ಪಥದ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿ