

ಮಡಿಕೇರಿ:
ಮಧ್ಯಾಹ್ನ ೧೨.೩೫ಕ್ಕೆ ಸಮೀಪದ ಕೆ. ಬಾಡಗದಲ್ಲಿರುವ ಗಾಲ್ಫ್ ಗ್ರೌಂಡ್ ಹೆಲಿಪ್ಯಾಡ್ ಹೆಲಿಪ್ಯಾಡ್‌ಗೆ ಬಂದಿಳಿಯಬೇಕಿದ್ದ ಸಿಎಂ ಬಸವರಾಜ ಬೊಮ್ಮಾಯಿ ಸರಿಯಾಗಿ ೨ ಗಂಟೆ ತಡವಾಗಿ ೨.೩೫ಕ್ಕೆ ಆಗಮಿಸಿದರು. ನೆತ್ತಿ ಸುಡುವಂತೆ ಬಿಸಿಲಿದ್ದರೂ ಸಿಎಂ ಆಗಮನಕ್ಕೂ ೧೫ ನಿಮಿಷ ಮೊದಲು ಹೆಲಿಪ್ಯಾಡ್ ವ್ಯಾಪ್ತಿಯಲ್ಲಿ ದಟ್ಟ ಮೋಡ ಕವಿದಿತ್ತು. ಬೊಮ್ಮಾಯಿ ಪತ್ರಕರ್ತರ ಬಳಿ ಮಾತನಾಡಲು ಆಗಮಿಸುತ್ತಿದ್ದಂತೆಯೇ ಒಂದೆರಡು ಹನಿ ಮಳೆ ಸುರಿದ ಅನುಭವ ಆಯಿತು.
ಜಿಲ್ಲೆಯ ವಿವಿಧೆಡೆಯಿಂದ ಬೆಳಗ್ಗೆಯೇ ಕಾರ್ಯಕ್ರಮ ಸ್ಥಳಕ್ಕೆ ಬಂದು ಆಸೀನರಾಗಿದ್ದ ಫಲಾನುಭವಿಗಳು ಮತ್ತು ಪಕ್ಷದ ಕಾರ್ಯಕರ್ತರು ಹೊತ್ತೇರುತ್ತಿದ್ದಂತೆಯೇ ಚಡಪಡಿಕೆ ಶುರು ಮಾಡಿದರು. ಮಧ್ಯಾಹ್ನ ಹಸಿವನ್ನು ತಡೆದುಕೊಂಡು ಕುಳಿತುಕೊಳ್ಳುವಂತಾಯಿತು. ಪಕ್ಷದ ಪ್ರಮುಖರು ಕುಳಿತಲ್ಲಿಗೆ ಬಿಸ್ಕೆಟ್, ನೀರು ಪೂರೈಕೆ ಮಾಡಿದರು. ಕೊನೆಗೆ ಒಂದು ಬದಿಯಲ್ಲಿ ಊಟ ಕೊಡಲು ಶುರು ಮಾಡಿದರು. ಅಷ್ಟರಲ್ಲಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಿಎಂ ಆಗಮನವಾಯಿತು.
ತಮ್ಮ ಆಗಮನ ತಡವಾದರೂ ತಾಳ್ಮೆಯಿಂದ ಕಾದಿದ್ದ ಫಲಾನುಭವಿಗಳು ಮತ್ತು ಕಾರ್ಯಕರ್ತರನ್ನು ನೋಡಿ ಮುಖ್ಯಮಂತ್ರಿ ಖುಷಿಯಾದರು. ಕಾರ್ಯಕ್ರಮ ನಡೆಯುವ ಸ್ಥಳದ ಪಕ್ಕದಲ್ಲೇ ಪಿಯುಸಿ ಪರೀಕ್ಷೆ ನಡೆಯುತ್ತಿದ್ದ ಕಾರಣ ತಡ ಮಾಡಬೇಕಾಯ್ತು ಎಂದು ತಡವಾಗಿ ಆಗಮಿಸಿದ್ದಕ್ಕೆ ಕ್ಷಮೆ ಕೇಳಿದರು.
ಆರಂಭದಲ್ಲಿ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಸಿಎಂ ಭಾಷಣ ನಂತರ ಚುನಾವಣಾ ಭಾಷಣದ ರೀತಿಯಲ್ಲಿ ಪರಿವರ್ತನೆ ಆಯಿತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುತ್ತಲೇ ಕಾಂಗ್ರೆಸ್ ಕಡೆಗೆ ತಮ್ಮ ಮಾತನ್ನು ತಿರುಗಿಸಿದರು. ಭಾಗ್ಯಗಳ ಘೋಷಣೆ ಮಾತ್ರ ಆಗಿದೆ. ಯಾವುದೇ ಕೆಲಸ ನಡೆದಿಲ್ಲ. ಕಾಂಗ್ರೆಸ್ ಈಗ ಗ್ಯಾರೆಂಟಿ ಕಾರ್ಡ್ ಕೊಡುತ್ತಿದೆ. ಆದರೆ ಅದು ಕೆಲಸಕ್ಕೆ ಬಾರದ ವಿಸಿಟಿಂಗ್ ಕಾರ್ಡ್
ಎಂದು ಛೇಡಿಸಿದರು.
ಈ ಹಿಂದೆಯೂ ಪ್ರವಾಹ ಬರುತ್ತಿತ್ತು, ಕೃಷಿಗೆ ಹಾನಿಯೂ ಆಗುತ್ತಿತ್ತು ಆದರೆ ಭಿಕ್ಷೆಯ ರೂಪದಲ್ಲಿ ಪರಿಹಾರ ಕೊಡಲಾಗುತ್ತಿತ್ತು. ಆದರೆ ತಮ್ಮ ಸರಕಾರ ಬಂದ ನಂತರ ಪರಿಹಾರದ ಮೊತ್ತವನ್ನು ಹೆಚ್ಚಿಸಲಾಗಿದೆ. ತಂತ್ರಜ್ಞಾನ ಬಳಕೆ ಮಾಡಿಕೊಂಡು ಶೀಘ್ರದಲ್ಲೇ ಪರಿಹಾರ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಆಗಿದೆ ಎಂದರು. ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡಿದವರು ಮುಂದೆ ಹೋಗಿದ್ದಾರೆ. ಅದರೆ ಉಪಯೋಗ ಪಡೆಯಬೇಕಿದ್ದವರು ಅಲ್ಲೇ ಇದ್ದಾರೆ ಎಂದು ಕಾಂಗ್ರೆಸ್‌ನ ಮುಖಂಡರಿಗೆ ಟಾಂಗ್ ಕೊಟ್ಟರು.
ಕೊಡಗಿನ ಶಾಸಕರ ಕಾರ್ಯವೈಖರಿಯನ್ನು ಹೊಗಳಿ ಮಾತನಾಡಿದ ಸಿಎಂ, ಜನಪ್ರಿಯ ಶಾಸರು ತುಂಬಾ ಮಂದಿ ಇದ್ದಾರೆ. ಆದರೆ ಜನಪರ ಶಾಸಕರ ಸಂಖ್ಯೆ ಕಡಿಮೆ. ಕೊಡಗಿನವರು ಇಂತಹ ಜನಪರ ಶಾಸಕರಾಗಿದ್ದು, ಮುಂದೆಯೂ ಅವರಿಗೆ ಆಶೀರ್ವಾದ ಮಾಡಿದರೆ ಮತ್ತಷ್ಟು ಕೆಲಸ ಮಾಡುತ್ತಾರೆ ಎನ್ನುವ ಮೂಲಕ ಈ ಇಬ್ಬರಿಗೆ ಟಿಕೆಟ್ ಸಿಗುತ್ತದೆ ಎನ್ನುವ ಪರೋಕ್ಷ ಸೂಚನೆ ನೀಡಿದರು.
ಮೀಸಲು ಹೆಚ್ಚಳ ತೀರ್ಮಾನದ ಬಗ್ಗೆ ಮಾತನಾಡಿ, ಈ ನಿರ್ಧಾರ ತೆಗೆದುಕೊಳ್ಳಲು ಮುಂದಾದಾಗ ಕೆಲವರು ಜೇನು ಗೂಡಿಗೆ ಕೈ ಹಾಕಬೇಡ ಎಂದರು. ಆದರೆ ಜೇನು ಗೂಡಿಗೆ ಕೈ ಹಾಕಿ ತುಳಿತಕ್ಕೊಳಗಾದ ಜನರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಜೇನು ಹುಳ ಕಚ್ಚಿದರೂ ಪರವಾಗಿಲ್ಲ. ನೊಂದ ಜನತೆಗೆ ಜೇನು ಹಂಚುತ್ತೇನೆ ಎಂದು ಹೇಳಿದರು.