ಕೆಸಿಸಿಐನಿಂದ ಶೀಘ್ರ ಸಿಎಂ ಭೇಟಿ, ಈ ಭಾಗದ ಸಮಸ್ಯೆಗಳ ಚರ್ಚೆ, ಪರಿಹಾರಕ್ಕಾಗಿ ಹಕ್ಕೊತ್ತಾಯಕ್ಕೆ ನಿರ್ಧಾರ

IMG_20250401_123640_923.jpg
Published on

ಹುಬ್ಬಳ್ಳಿ: ಅವಳಿ ನಗರದ ವಿವಿಧೆಡೆಯ ಕೈಗಾರಿಕಾ ವಸಾಹತುವಿನಲ್ಲಿರುವ ಉದ್ಯಮಿಗಳಿಗೆ ಇ- ಸ್ವತ್ತು ಸಿಗದಿರುವುದು, ಕೆಐಎಡಿಬಿಯಿಂದ ಮಹಾನಗರ ಪಾಲಿಕೆಗೆ ಹಸ್ತಾಂತರ ಆಗದಿರುವುದು, ನಗರದ ಫ್ಲೈಓವರ್ ಕಾಮಗಾರಿ ವಿಳಂಬವಾಗುತ್ತಿರುವುದು ಸೇರಿ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶೀಘ್ರ ಭೇಟಿ ಮಾಡಲಾಗುವುದು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ದಿನಗಳಿಂದ ಈ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಹಾಗಾಗಿ ಸಿಎಂ ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.

ಸಂಸ್ಥೆಯ ಉಪಾಧ್ಯಕ್ಷರಾದ ಸಂದೀಪ ಬಿಡಸಾರಿಯಾ, ಪ್ರವಿಣ ಅಗಡಿ ಮಾತನಾಡಿ, ಕೈಗಾರಿಕಾ ವಸಾಹತು ಹಸ್ತಾಂತರ ಆಗಿಲ್ಲ ಎನ್ನುವ ಕಾರಣಕ್ಕೆ ಉದ್ಯಮದಾರರಿಗೆ ಇ-ಸ್ವತ್ತು ಸಿಗುತ್ತಿಲ್ಲ. ಮೂರ್ನಾಲ್ಕು ದಶಕದಿಂದ ಸಮಸ್ಯೆ ಹಾಗೇ ಉಳಿದಿದೆ. ಇದರಿಂದ ಬ್ಯಾಂಕ್ ನಲ್ಲಿ ಸಾಲ ಲಭ್ಯವಾಗುತ್ತಿಲ್ಲ. ಓವರ್ ಡ್ರಾಪ್ಟ್ ಸೌಲಭ್ಯ ಸ್ಥಗಿತಗೊಳಿಸಲಾಗಿದೆ. ಇದರ ಪರಿಣಾಮವಾಗಿ ಹೊಸ ಉದ್ಯಮಗಳು ಇಲ್ಲಿಗೆ ಬರುತ್ತಿಲ್ಲ. ಇದು ಈ ಭಾಗದಲ್ಲಿ ಉದ್ಯಮ ಬೆಳವಣಿಗೆಗೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ದೂರಿದರು.

ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ ಮಾತನಾಡಿ, ಅವಳಿ ನಗರ ಮಧ್ಯೆ ಜಾರಿಯಾಗಿರುವ ಬಿಆರ್ ಟಿಎಸ್ ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದೆ. ಪ್ರಸ್ತುತ ಸಂಚಾರ ಸಿಕ್ಕು ಕಿರಿಕಿರಿ ನಿತ್ಯ ಅನುಭವಿಸುವಂತಾಗಿದೆ. ಹಾಗಾಗಿ ನಗರ ವ್ಯಾಪ್ತಿಯಲ್ಲಾದರೂ ಪ್ರತ್ಯೇಕ ಕಾರಿಡಾರ್ ಗೆ ಅಳವಡಿಸಿರುವ ಬ್ಯಾರಿಕೇಡ್ ತೆಗೆದು ಮಿಶ್ರಪಥದಲ್ಲಿ ಓಡಾಡುವವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ನಗರದಲ್ಲಿ ದಿನೇದಿನೆ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಇದರ ನಿರ್ವಹಣೆಗೆ ಪೊಲೀಸ್ ಸಿಬ್ಬಂದಿ ಹೆಚ್ಚಿಸಬೇಕು. ಸರಿಯಾದ ಪಾಕಿರ್ಂಗ್ ವ್ಯವಸ್ಥೆ ಕಲ್ಪಿಸಬೇಕು. ನಗರದಲ್ಲಿ ನಡೆದಿರುವ ಫ್ಲೈಓವರ್ ಕಾಮಗಾರಿಗೆ ವೇಗ ನೀಡಬೇಕು. ಧೂಳುಮುಕ್ತ ನಗರ ಮಾಡಬೇಕು. ಅಗತ್ಯವೆನಿಸಿದರೆ ಈ ಮಾರ್ಗದಲ್ಲಿ ಎರಡು ತಿಂಗಳು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಮೇಲ್ಸೇತುವೆ ಕೆಲಸ ಮುಗಿಸಿ ಕೊಡಬೇಕು ಎಂದು ಜತೆ ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ, ಇತರರು ಮನವಿ ಮಾಡಿದರು.

ಉತ್ತರ ಕರ್ನಾಟಕದ ಪ್ರಮುಖ ನಗರ ಹುಬ್ಬಳ್ಳಿ ಹಾಗೂ ಧಾರವಾಡದ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಅಭಿವೃದ್ಧಿ ಪೂರಕ ಯೋಜನೆ ರೂಪಿಸಲು ನಿಯೋಗ ಕೊಂಡೊಯ್ದು ಸಿಎಂ ಭೇಟಿ ಮಾಡಲು ಉದ್ದೇಶಿಸಲಾಗಿದೆ. ಇದೇ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳ ಸಚಿವರನ್ನು ಭೇಟಿ ಮಾಡಲಿದ್ದೇವೆ ಎಂದು ಸಿಂಘಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net