

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮದ ವತಿಯಿಂದ ಬಿಡದಿ ಬಳಿ ನಿರ್ಮಿಸಲಿರುವ ತ್ಯಾಜ್ಯ ಆಧಾರಿತ 11.5 ಮೆಗಾ ವಾಟ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ಶಿಲಾನ್ಯಾಸವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವರ್ಚುವಲ್ ಕಾರ್ಯಕ್ರಮದ ಮೂಲಕ ಬುಧವಾರ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕ ಯೋಜನೆಯು ಕರ್ನಾಟಕ ರಾಜ್ಯದಲ್ಲೇ ಪ್ರ-ಪ್ರಥಮ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ನಗರ-ಪುರಸಭೆಗಳಲ್ಲಿನ ಘನತ್ಯಾಜ್ಯ ನಿರ್ವಹಣೆಯು ಪರಿಸರಕ್ಕೆ ಸಂಬಂಧಿಸಿದ ಮಹತ್ವದ ವಿಷಯ. ರಾಜ್ಯದ ರಾಜಧಾನಿಯಾದ ಬೆಂಗಳೂರು, ಏಷ್ಯಾ ಖಂಡದಲ್ಲೇ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲೊಂದು. ದಿನಂಪ್ರತಿ ಸುಮಾರು 5,000 ಮೆಟ್ರಿಕ್ ಟನ್‍ಗಳಷ್ಟು ಘನತ್ಯಾಜ್ಯವನ್ನು ಬೆಂಗಳೂರು ನಗರ ಉತ್ಪಾದಿಸುತ್ತಿದೆ.
ತ್ಯಾಜ್ಯದ ಸಮರ್ಪಕ ನಿರ್ವಹಣೆ ಆಗದಿದ್ದಲ್ಲಿ, ಅಂತರ್ಜಲದ ಗುಣಮಟ್ಟ ಕುಸಿಯ ತೊಡಗುತ್ತದೆ. ಜೈವಿಕ ಇಂಧನ, ಗೊಬ್ಬರ, ನೈರ್ಮಲ್ಯದ ಗುಂಡಿಗಳು ಹಾಗೂ ತ್ಯಾಜ್ಯ ವಿದ್ಯುತ್ ಉತ್ಪಾದನೆ ಮೂಲಕ ಅತ್ಯಧಿಕ ಮಿಶ್ರ ಅಥವಾ ಸಂಸ್ಕರಿಸಿದ ತ್ಯಾಜ್ಯವನ್ನು ಕಡಿಮೆ ಖರ್ಚಿನೊಂದಿಗೆ ವೈಜ್ಞಾನಿಕ ರೀತಿಯಲ್ಲಿ (Incineration method) ವಿಲೇವಾರಿ ಮಾಡಬಹುದಾಗಿದೆ ಎಂದು ಬಿಎಸ್ ವೈ ತಿಳಿಸಿದರು.
ರಾಜ್ಯ ಸರ್ಕಾರವು ಕರ್ನಾಟಕ ವಿದ್ಯುತ್ ನಿಗಮದ ಮೂಲಕ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಕ್ರಮಕೈಗೊಂಡಿದೆ. ಅದರಂತೆ ನಿಗಮವು ದಿನ ಒಂದಕ್ಕೆ ಸುಮಾರು 600 ಟನ್‍ಗಳಷ್ಟು ಸಂಸ್ಕರಿತ ತ್ಯಾಜ್ಯವನ್ನು ಬಳಸಿ 11.5 ಮೆಗಾವ್ಯಾಟ್ ಸಾಮರ್ಥ್ಯ ದ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕವನ್ನು ಬಿಡದಿಯ ಬಳಿ ನಿಗಮದ ಜಾಗದಲ್ಲಿ ಸ್ಥಾಪಿಸಲು ಉದ್ದೇಶಿಸಿದೆ. ಇದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ವೈಜ್ಞಾನಿಕವಾಗಿ ಬೆಂಗಳೂರಿನ ಶೇಕಡಾ 25 ರಷ್ಟು ಮಿಶ್ರ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತದೆ ಎಂದರು.
ಪರಿಸರ ಸ್ನೇಹಿ ಮತ್ತು ಆರ್ಥಿಕವಾಗಿ ಸಮರ್ಥನೀಯ ತಂತ್ರಜ್ಞಾನದೊಂದಿಗೆ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸಲಾಗುವುದು. ಮಿಶ್ರ ತ್ಯಾಜ್ಯವನ್ನು ತಿಪ್ಪೆಗೆ ಸುರಿಯುವುದನ್ನು ತಪ್ಪಿಸುವ ಮೂಲಕ ಪರಿಸರವನ್ನು ಉತ್ತಮಗೊಳಿಸುವುದು. ಈ ಘಟಕದ ಉಪ ಉತ್ಪನ್ನವಾಗಿ 80.59 ಮಿಲಿಯನ್ ಯೂನಿಟ್ ನಷ್ಟು ಏರಿಕೆ ಪ್ರಮಾಣದ ವಿದ್ಯುತ್ ರಾಜ್ಯದ ಜನತೆಯ ಬಳಕೆಗೆ ಲಭ್ಯವಾಗಲಿರುವುದು ಸಂತಸದ ವಿಚಾರವೆಂದರು.
ಪ್ರಧಾನಿ ಮೋದಿ ಚಾಲನೆ ನೀಡಿರುವ "ಆತ್ಮನಿರ್ಭರ ಭಾರತ" ಯೋಜನೆಯನ್ವಯ ಈ ಯೋಜನೆಯ ನಿರ್ಮಾಣ ಕಾರ್ಯದಲ್ಲಿ ಬಳಸುವ ಹೆಚ್ಚಿನ ವಸ್ತುಗಳು ಸ್ವದೇಶಿಯದ್ದೇ ಆಗಿರುತ್ತದೆ. ಈ ಘಟಕದ ನಿರ್ಮಾಣ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ, 2022ರ ಅಂತ್ಯದಲ್ಲಿ ಘಟಕವನ್ನು ಚಾಲನೆಗೊಳಿಸಬೇಕು ಎಂದು ಬಿಎಸ್ ವೈ ತಿಳಿಸಿದರು.
ಯೋಜನೆಗೆ 260 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಶೇಕಡಾ 50 ರಂತೆ ಕರ್ನಾಟಕ ವಿದ್ಯುತ್ ನಿಗಮ 130 ಕೋಟಿ ರೂ. ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 130 ಕೋಟಿ ರೂ. ಗಳನ್ನು ಹೂಡಲಿವೆ.
ಬಿಬಿಎಂಪಿ ಗೆ ವಾರ್ಷಿಕ 14 ಕೋಟಿ ರೂ ಉಳಿತಾಯ: ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯ ಈ ಯೋಜನೆಯಿಂದ ಬಿಬಿಎಂಪಿಗೆ ವಾರ್ಷಿಕವಾಗಿ 14 ಕೋಟಿ ರೂ. ಉಳಿತಾಯವಾಗಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಗರಿಷ್ಠ ಶೇಕಡಾ 35 ಹಾಗೂ ರಾಜ್ಯ ಸರ್ಕಾರದ ವತಿಯಿಂದ ಗರಿಷ್ಠ ಶೇಕಡಾ 23.3 ರಷ್ಟು ಪ್ರೋತ್ಸಾಹ ಧನವನ್ನು ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಬಿಡುಗಡೆಗೊಳಿಸಲಾಗುವುದು. ತ್ಯಾಜ್ಯ ವಿದ್ಯುತ್ ಉತ್ಪಾದನಾ ಯೋಜನೆಯಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗದ ಅವಕಾಶಗಳು ಸೃಷ್ಠಿಯಾಗುವುದರೊಂದಿಗೆ, ನಾಗರೀಕ ಸೌಲಭ್ಯಗಳೂ ಲಭಿಸಲಿವೆ, ಇದಕ್ಕೆ ಪೂರಕವಾದ ಕೈಗಾರಿಕಾ ಸಹ ಘಟಕಗಳು ಸ್ಥಾಪಿತಗೊಳ್ಳಲಿವೆ. ಪರಿಸರ ಸಂರಕ್ಷಣೆಗಾಗಿ ರಾಜ್ಯದಲ್ಲಿ ತ್ಯಾಜ್ಯ ವಿಲೇವಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸರ್ಕಾರ ಬದ್ಧವಾಗಿದೆ ಎಂದು ಬಿಎಸ್ ವೈ ಹೇಳಿದರು.