

ಮಂಡ್ಯ: ಮದ್ದೂರು ತಾಲೂಕು ತಿಪ್ಪೂರು ಗ್ರಾಮದ ಟಿ.ಸಿ.ರಾಜಣ್ಣ ಎಂಬುವವರನ್ನು ಬಲವಂತವಾಗಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಹತ್ತಿಸಿದ್ದು, ಇದರಿಂದಾಗಿ ಅವರು ಸಾವನ್ನಪ್ಪಿದ್ದಾರೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ನೈಜ ಪರಿಶಿಷ್ಟ ಜಾತಿ ಸಮುದಾಯಗಳ ಸಂವಿಧಾನಿಕ ಹಕ್ಕು ಅವಕಾಶಗಳ ಸಂರಕ್ಷಣೆ ವೇದಿಕೆ ರಾಜ್ಯಾಧ್ಯಕ್ಷ ಸಿ.ಎಂ.ಕೃಷ್ಣ ಒತ್ತಾಯಿಸಿದರು.
2023 ಡಿ.24ರಂದು ಈ ಘಟನೆ ನಡೆದಿದೆ. ಈ ಸಂಬಂಧ ಮರುದಿನವೇ ರಾಜಣ್ಣ ಅವರ ಪತ್ನಿ ಲಿಖಿತ ದೂರು ನೀಡಿದ್ದು, ಮದ್ದೂರು ಠಾಣಾ ಪೊಲೀಸರು ಯುಡಿಆರ್ ದಾಖಲಿಸಿ ಅಂತಿಮ ವರದಿ ಸಲ್ಲಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ನಂತರ ನ್ಯಾಯ ಪಂಚಾಯಿತಿ ಮಾಡಿ ಸಂತ್ರಸ್ತ ಕುಟುಂಬಕ್ಕೆ 4 ಲಕ್ಷ ರೂ ಒದಗಿಸುವುದಾಗಿ ಮಾತನಾಡಿದ್ದು, ಇದುವರೆವಿಗೂ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಪೂರ್ಣಚಂದ್ರ, ಮಹಾಲಕ್ಷ್ಮೀ, ಮಕ್ಕಳಾದ ಟಿ.ಆರ್.ಅಮೃತಾ, ಟಿ.ಆರ್.ಅರ್ಪಿತಾ, ಟಿ.ಆರ್.ಅಕ್ಷತಾ ಇದ್ದರು.