ರಾಜ್ಯದ ಅಭಿವೃದ್ಧಿಗೆ ಸಿಎಂ ಅಡ್ಡಗಾಲು

IMG-20241014-WA0112
Published on


ಹೊಳೆನರಸೀಪುರ : ನಾನು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಂಡು ರಾಜ್ಯಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಆದರೆ ಕೇಂದ್ರ ಸಚಿವನಾಗಿ ರಾಜ್ಯದ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಡ್ಡಗಾಲು ಹಾಕುತ್ತಾ ಸಣ್ಣತನದ ರಾಜಕೀಯ ಮಾಡುತ್ತಿದ್ದಾರೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ತಾಲೂಕಿನ ಬಿದರಕ್ಕ ಗ್ರಾಮದ ಕೊಳಲು ವೇಣುಗೋಪಾಲಸ್ವಾಮಿ ದೇವಾಲಯದ ಮಂಡಲಪೂಜೆಯಲ್ಲಿ ಸೋಮವಾರ ಭಾಗವಹಿಸಿ ಅವರು ಮಾತನಾಡಿದರು.


ರಾಜ್ಯದಲ್ಲಿ 30 ಪಬ್ಲಿಕ್ ಸೆಕ್ಟರ್ ಬೃಹತ್ ಕಾರ್ಖಾನೆಗಳು ಮುಚ್ಚುವ ಸ್ಥಿತಿ ತಲುಪಿದೆ. ಅದರಲ್ಲಿ ಎಚ್‌ಎಂಟಿ, ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಗಳೂ ಸೇರಿವೆ. ಕುದುರೆಮುಖದ ಐರನ್ ಸ್ಟೋರ್ ಫ್ಯಾಕ್ಟರಿಯ ಪುನಶ್ಚೇತನಕ್ಕೆ 1700 ಕೋಟಿ ರೂ. ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಆದರೆ ಅದಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ. ಅಲ್ಲಿನ 350 ನೌಕರರನ್ನು ರಜೆ ಮೇಲೆ ಕಳುಹಿಸಿ ಸಣ್ಣತನದ ರಾಜಕೀಯ ಮಾಡುತ್ತಿದೆ. ಸಾರ್ವಜನಿಕರ ಉದ್ಯೋಗ ಕಸಿಯುವಲ್ಲಿ ಚೆಲ್ಲಾಟ ಆಡುತ್ತಿದೆ ಎಂದು ಕಿಡಿಕಾರಿದರು.

ಉತ್ತರ ಭಾರತದ ರಾಜ್ಯಗಳಾದ ಮೇಘಾಲಯ, ತ್ರಿಪುರ, ಸಿಕ್ಕಿಂ, ನಾಗಾಲ್ಯಾಂಡ್, ಮಣಿಪುರ ರಾಜ್ಯಗಳು ಅಭಿವೃದ್ಧಿ ಹೊಂದಿಲ್ಲ. ಈ ರಾಜ್ಯಗಳಲ್ಲಿ ಪ್ರವಾಸ ಮಾಡಿ ಇವುಗಳನ್ನು ಅಭಿವೃದ್ಧಿಪಡಿಸಲು ಕ್ರಮ ತೆಗೆದುಕೊಂಡಿದ್ದೇನೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು 10 ತಿಂಗಳು ಪ್ರಧಾನಿ ಆಗಿದ್ದಾಗ 6000 ಕೋಟಿ ರೂ. ಹಣ ಮೀಸಲಿಟ್ಟು ಹಿಂದುಳಿದಿದ್ದ ರಾಜ್ಯಗಳನ್ನು ಅಭಿವೃದ್ಧಿ ವಪಡಿಸಿದ್ದರು. ಇಂದು ಆ ರಾಜ್ಯಗಳು ಮುಂದುವರೆಯುತ್ತಿದೆ ಎಂದರು.

ಹಳ್ಳಿ ಮೈಸೂರು ಹೋಬಳಿಯ ಈ ಭಾಗದಲ್ಲಿ ನೀರಿಲ್ಲದೆ ಜನ ಗುಳೇಹೋಗುವುದನ್ನು ತಡೆಯಲು ಗಂಜಿ ಕೇಂದ್ರ ತೆರೆಯಲಾಗಿತ್ತು. ದೇವೇಗೌಡರು ಹಾಗೂ ದಿವಂಗತ ಎಚ್.ಎನ್.ನಂಜೇಗೌಡ ಅವರು ತೆಗೆದುಕೊಂದ ಕೆಲವು ಕ್ರಮಗಳಿಂದ ಈ ಭಾಗದಲ್ಲಿ ನೀರು ಹೆಚ್ಚಾಗಿ ಶೀತ ಪ್ರದೇಶ ಎನಿಸಿದೆ. ದೇವೇಗೌಡರ ಕುಟುಂಬವನ್ನು ಬೆಳೆಸಿದ ಹಾಸನ ಜಿಲ್ಲೆ ಹಾಗೂ ಹೊಳೆನರಸೀಪುರ ತಾಲೂಕಿನ ಜನರ ಜತೆಯಲ್ಲಿ ಸದಾಕಾಲ ಇದ್ದು, ನಿಮ್ಮ ಕಷ್ಟಸುಖಗಳಿಗೆ ಸ್ಪಂದಿಸುತ್ತೇವೆ. ಮುಂದಿನ ದಿನಗಳಲ್ಲಿ ಹೊಳೆನರಸೀಪುರ ಮತ್ತು ಕೆ.ಆರ್. ನಗರ ನಡುವೆ ಕೈಗಾರಿಕಾ ವಸಾಹತು ಪ್ರದೇಶವನ್ನು ತೆರೆಯಲು ಶ್ರಮಿಸುತ್ತೇನೆ ಎಂದರು.

ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಹಾಸನದ ಜನರು ಶಕ್ತಿಕೊಟ್ಟ ಹಿನ್ನೆಲೆಯಲ್ಲಿ ದೇಶದ ರೈತರೆಲ್ಲರಿಗೂ ಅನುಕೂಲವಾಗಿದೆ. ದೇಶದ ನೀರಾವರಿ ಬಗ್ಗೆ ದೇವೇಗೌಡರಿಗೆ ಇರುವಷ್ಟು ಜ್ಞಾನ ಬೇರೆ ಯಾರಿಗೂ ಇಲ್ಲ. ಅವರ ನೀರಾವರಿ ನೀತಿಯಿಂದ ದೇಶದ ರೈತರಿಗೆ ಹಲವು ಹತ್ತು ಅನುಕೂಲಗಳಾಗಿದೆ. ರಾಜ್ಯದಲ್ಲಿ ಮತ್ತು ದೇಶದಲ್ಲಿ ನನ್ನಂತಹ ಸಾವಿರಾರು ಯುವಕರು ಅಧಿಕಾರ ಪಡೆದು ಜನರಿಗೆ ಸೇವೆ ಸಲ್ಲಿಸಲು ಅವಕಾಶವಾಗಿದೆ. ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಶಾಸಕ ಎ. ಮಂಜು ಮಾತನಾಡಿ, ನಮ್ಮ ಹೊಳೆನರಸೀಪುರ ಹಾಗೂ ಅರಕಲಗೂಡು ತಾಲೂಕಿಗೆ ಅನುಕೂಲ ಆಗುವಂತೆ ಒಂದು ಕೈಗಾರಿಕೆ ಬೇಕು. ಈ ಭಾಗದ ಜನರು ನಮ್ಮ ಪಕ್ಷಕ್ಕೆ ಸದಾ ಬೆಂಬಲ ನೀಡುತ್ತಿದ್ದಾರೆ. ನಾನು ಇವರಿಗೆ ಶಾಸಕ ಅಲ್ಲ. ನಾನು ಇವರ ಸೇವಕ. ಇವರ ಸೇವೆ ಮಾಡಲು ಪಕ್ಷದಲ್ಲಿ ಟಿಕೆಟ್ ನೀಡಿ ಅವಕಾಶ ನೀಡಿದ್ದು ದೇವೇಗೌಡರು ಮತ್ತು ರೇವಣ್ಣ, ಅದಕ್ಕಾಗಿ ನಾನು ಕೃತಜ್ಷತೆ ಸಲ್ಲಿಸುತ್ತೇನೆ ಎಂದರು.


ಮಾಜಿ ಸಚಿವ ಶಾಸಕ ಎಚ್.ಡಿ.ರೇವಣ್ಣ, ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಕೊಳಲು ವೇಣು ಗೋಪಾಲ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ತೆರದ ವಾಹನದಲ್ಲಿ ಮೆರವಣಿಗೆ ನಡೆಸಿ ವೇದಿಕೆಗೆ ಕರೆತರಲಾಯಿತು. ಪುರಸಭಾಧ್ಯಕ್ಷ ಕೆ.ಶ್ರೀಧರ್, ಜೆಡಿಎಸ್ ಜಿಲ್ಲಾ ಅಧ್ಯಕ್ಷರೂ ಆದ ಮಾಜಿ ಶಾಸಕ ಲಿಂಗೇಶ್, ತಾಲೂಕು ಅಧ್ಯಕ್ಷ ಎಚ್.ಎಸ್. ಪುಟ್ಟಸೋಮಪ್ಪ, ಗ್ರಾಮದ ಮುಖಂಡರಾದ ಬಿ.ಎಸ್.ರಾಮಸ್ವಾಮಿ, ಬಿ.ಕೆ.ಪುಟ್ಟರಾಜು, ಬಿ.ಎಚ್.ಶಿವರಾಮು, ನಾಗೇಗೌಡ, ಹೇಮಂತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net