ವೃಂದ ಮತ್ತು ನೇಮಕಾತಿ ನಿಯಮಗಳ ಸಮಗ್ರ ಪರಿಷ್ಕರಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ

CM Siddaramaiah
Published on

ಮಂಡ್ಯ: ಸರ್ಕಾರದ ವಿವಿಧ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳ ಸಮಗ್ರ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸರ್ಕಾರದ ಬಹುತೇಕ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳು ಕಾಲಕಾಲಕ್ಕೆ ಪರಿಷ್ಕರಣೆ ಆಗದೆ 15ಕ್ಕೂ ಹೆಚ್ಚು ವರ್ಷ ಕಳೆದಿರುವ ಬಗ್ಗೆ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಎಂಎಲ್‌ಸಿ ಮಧು ಜಿ.ಮಾದೇಗೌಡ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಎಲ್ಲ ಇಲಾಖೆಗಳು ವೃಂದ ಮತ್ತು ನೇಮಕಾತಿ ನಿಯಮಗಳನ್ನು ಕನಿಷ್ಟ 3 ವರ್ಷಕ್ಕೊಮ್ಮೆ ಪುನರಾವಲೋಕಿಸುವಂತೆ ಸೂಚನೆ ನೀಡಲಾಗಿದೆ. ಆದಾಗ್ಯೂ ಬಹುತೇಕ ಇಲಾಖೆಗಳು ಚಾಲ್ತಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳ ರಚನೆ/ಪರಿಷ್ಕರಣೆ ನಡೆಸಿಲ್ಲ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳ ಬಗ್ಗೆ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಂತದಲ್ಲಿ ಪರಿಶೀಲನಾ ಸಭೆ ಕೈಗೊಳ್ಳಲಾಗಿದೆ. ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಜಲಸಂಪನ್ಮೂಲ, ಒಳಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಉನ್ನತ ಶಿಕ್ಷಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನಗರಾಭಿವೃದ್ಧಿ, ಸಹಕಾರ, ಇಂಧನ, ಲೋಕೋಪಯೋಗಿ, ಆರ್ಥಿಕ, ಕಾರ್ಮಿಕ ಇಲಾಖೆ ಸೇರಿದಂತೆ ಒಟ್ಟು 33 ಇಲಾಖೆಗಳು ವೃಂದ ಮತ್ತು ನೇಮಕಾತಿ ನಿಯಮಗಳನ್ನು 5 ವರ್ಷ ಮೇಲ್ಪಟ್ಟಿದ್ದರೂ ಪರಿಷ್ಕರಿಸಿಲ್ಲವೆಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net